ಲೋಕಾಸಭಾ ಚುನಾವಣೆ: ಕಾಫಿ ನಾಡಲ್ಲಿ ವಾಕ್ಸಮರ

| Published : Apr 02 2024, 01:09 AM IST / Updated: Apr 02 2024, 09:23 AM IST

India Election

ಸಾರಾಂಶ

ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಈಗಾಗಲೇ ಚುನಾವಣಾ ಪ್ರಚಾರವನ್ನು ಆರಂಭಿಸಿವೆ. ಅಭ್ಯರ್ಥಿಗಳು ಈಗಾಗಲೇ ತಾಲೂಕು ಕೇಂದ್ರಗಳ ಜತೆಗೆ ಕೆಲವೆಡೆ ಹೋಬಳಿ ಮಟ್ಟದಲ್ಲಿ ಪ್ರಚಾರ ಮುಗಿಸಿದ್ದಾರೆ.

 ಚಿಕ್ಕಮಗಳೂರು :  ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಈಗಾಗಲೇ ಚುನಾವಣಾ ಪ್ರಚಾರವನ್ನು ಆರಂಭಿಸಿವೆ. ಅಭ್ಯರ್ಥಿಗಳು ಈಗಾಗಲೇ ತಾಲೂಕು ಕೇಂದ್ರಗಳ ಜತೆಗೆ ಕೆಲವೆಡೆ ಹೋಬಳಿ ಮಟ್ಟದಲ್ಲಿ ಪ್ರಚಾರ ಮುಗಿಸಿದ್ದಾರೆ.

ಕಳೆದ ಎರಡು ದಿನಗಳಿಂದ ವಾರ್ಡ್‌ವಾರು ಸಭೆಗಳನ್ನು ಅಭ್ಯರ್ಥಿಗಳು ನಡೆಸಿ ಪ್ರಚಾರದಲ್ಲಿ ತೊಡಗಿದ್ದಾರೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಿಪಿಐ ಹಾಗೂ ಆಮ್ ಆದ್ಮಿ ಪಕ್ಷಗಳು ಈಗಾಗಲೇ ಬೆಂಬಲ ಘೋಷಿಸಿವೆ. ಬರೀ ಇಷ್ಟೆ ಅಲ್ಲಾ ಕಾಂಗ್ರೆಸ್ ಅಭ್ಯರ್ಥಿಗಳೊಂದಿಗೆ ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ರಾಜ್ಯ ಮಟ್ಟದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದ್ದು, ಉಭಯ ಪಕ್ಷಗಳ ಮುಖಂಡರು ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗಾಗಿ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ದಿನೇ ದಿನೇ ಚುರುಕಾಗುತ್ತಿದೆ. ಇನ್ನೊಂದೆಡೆ ರಾಜಕೀಯ ಪಕ್ಷಗಳ ಮುಖಂಡರು ಮಾಧ್ಯಮಗಳ ಮೂಲಕ ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ವಕ್ತಾರರು ವಾಕ್ ಸಮರ ನಡೆಸಿದರು.

 ಈ ಬಾರಿ ಬಿಜೆಪಿ 370 ಕ್ಷೇತ್ರಗಳಲ್ಲಿ ಗೆಲುವು

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು 370 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದಾರೆ. ಮಿತ್ರ ಪಕ್ಷಗಳು ಸೇರಿದಂತೆ 400ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ಮತ್ತೆ ದೇಶದಲ್ಲಿ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾಗಲಿದ್ದಾರೆ ಎಂದು ಬಿಜೆಪಿ ರಾಜ್ಯ ವಕ್ತಾರ ಮೋಹನ್ ವಿಶ್ವ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಪಂಚದಲ್ಲಿ ದೇಶದ ಆರ್ಥಿಕ ಸ್ಥಿತಿ 5ನೇ ಸ್ಥಾನದಲ್ಲಿದೆ, ಇದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ. ಬಡವರಿಗೆ ರೈತರಿಗೆ, ಯುವ ಸಮುದಾಯಕ್ಕೆ ಹಲವಾರು ಯೋಜನೆಯನ್ನು ಜಾರಿಗೆ ತಂದಿದ್ದಾರೆ ಎಂದರು.

ಜಿಲ್ಲಾ ವಕ್ತಾರ ಸಿ.ಎಚ್. ಲೋಕೇಶ್ ಮಾತನಾಡಿ, ರಾಜ್ಯ ಸರ್ಕಾರ ಜಿಲ್ಲಾಡಳಿತದ ಮೇಲೆ ಒತ್ತಡ ಹಾಕಿ ಹಿಂದೂ ಕಾರ್ಯ ಕರ್ತರ ಹಾಗೂ ಬಿಜೆಪಿ ಮುಖಂಡರ ಮೇಲೆ ಕಲಂ 107 ರಡಿ ಕೇಸು ದಾಖಲಿಸುವ ಕೆಲಸಕ್ಕೆ ಕೈ ಹಾಕಿದೆ. ಈ ಮೂಲಕ ದಮನಕಾರಿ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದರು.

ಟೀಕೆಗಳು ರಚನಾತ್ಮಕವಾಗಿರಲಿ ರಾಜಕೀಯ ಕ್ಷೇತ್ರದಲ್ಲಿ ಟೀಕೆಗಳು ರಚನಾತ್ಮಕವಾಗಿರಬೇಕು, ವ್ಯಕ್ತಿಗತವಾಗಿ ಇರಬಾರದು ಎಂದು ಕೆಪಿಸಿಸಿ ವಕ್ತಾರ ಎಚ್.ಎಚ್. ದೇವರಾಜ್ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 10 ವರ್ಷಗಳಲ್ಲಿ ಜಿಲ್ಲೆಯಲ್ಲಿ ಬಿಜೆಪಿ ಸಂಸದರು ಏನು ಮಾಡಿದ್ದಾರೆ ?, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಅವರು ತಾವು ಸಂಸದರಾಗಿದ್ದ 2 ವರ್ಷಗಳ ಅವಧಿಯಲ್ಲಿ ಏನೇನು ಮಾಡಿದ್ದಾರೆ ? ಇದರ ಆಧಾರದ ಮೇಲೆ ಚುನಾವಣೆ ನಡೆಯಲಿದೆ ಎಂದರು.

ಕರ್ನಾಟಕ ಉಗ್ರವಾದಿಗಳ ತಾಣ ಆಗಿದೆ ಎಂದು ಆರೋಪಿಸುತ್ತಿದ್ದೀರಾ, ಕೇಂದ್ರದಲ್ಲಿ ನಿಮ್ಮದೆ ಸರ್ಕಾರ ಇದೆ, ನೀವೇನು ಮಾಡ್ತಾ ಇದಿರೀ ಎಂದು ಬಿಜೆಪಿಯನ್ನು ಪ್ರಶ್ನಿಸಿದರು.

 ಪೂಜಾರಿಯವರನ್ನು ಬಿಜೆಪಿ ಬಲಿ ಪಶು ಮಾಡುತ್ತಿದೆ

ಕಳೆದ 10 ವರ್ಷಗಳಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ, ಹಾಗಾಗಿ ಬಿಜೆಪಿಯವರೇ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಗೋ ಬ್ಯಾಕ್ ಹೇಳಿದರು. ಇಲ್ಲಿ ತಮಗೆ ಉಳಿಗಾಲವಿಲ್ಲವೆಂದು ಅವರು ಕ್ಷೇತ್ರದಿಂದ ಪಲಾಯನ ಮಾಡಿದರು. ಅವರ ಸ್ಥಾನಕ್ಕೆ ಕೋಟಾ ಶ್ರೀನಿವಾಸ್ ಪೂಜಾರಿ ಕರೆ ತರುವ ಮೂಲಕ ಬಿಜೆಪಿ ಅವರನ್ನು ಬಲಿ ಪಶು ಮಾಡುತ್ತಿದೆ ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ರೂಬಿನ್ ಮೋಸಸ್ ಆರೋಪಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಶಾಸಕ ಸಿ.ಟಿ. ರವಿ ಅವರು ಅಧಿಕಾರ ಇಲ್ಲದೆ ಪರದಾಡುತ್ತಿದ್ದಾರೆ. ಅವರು ಕಾಂಗ್ರೆಸ್ ಪಕ್ಷದ ಭವಿಷ್ಯದ ಬಗ್ಗೆ ಮಾತನಾಡುವ ಬದಲು ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಗಮನ ಹರಿಸಲಿ ಎಂದು ಕುಟುಕಿದರು.

ಅಭಿವೃದ್ಧಿ ತೋರಿಸಿ ಚುನಾವಣೆ ಎದುರಿಸಲು ಯೋಗ್ಯತೆ ಇಲ್ಲದ ಬಿಜೆಪಿಗರು ವ್ಯಕ್ತಿಯನ್ನು ತೋರಿಸಿ ಚುನಾವಣೆ ನಡೆಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಹೇಳಿದರು.