ಸಾರಾಂಶ
ನವದೆಹಲಿ: ಭಾರೀ ವಿವಾದಕ್ಕೆ ಕಾರಣವಾಗಿರುವ ವಕ್ಫ್ ತಿದ್ದುಪಡಿ ವಿಧೇಯಕವನ್ನು ಏ.2ರ ಬುಧವಾರ ಲೋಕಸಭೆಯಲ್ಲಿ ಮತ್ತು ಏ.3ರ ಗುರುವಾರ ರಾಜ್ಯಸಭೆಯಲ್ಲಿ ಮಂಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ, ಕಾಂಗ್ರೆಸ್ ಒಳಗೊಂಡ ಎನ್‌ಡಿಎ ಮತ್ತು ಇಂಡಿಯಾ ಮೈತ್ರಿಕೂಟದ ಪಕ್ಷಗಳು, ಮುಂದಿನ 3 ದಿನ ಕಡ್ಡಾಯವಾಗಿ ಕಲಾಪದಲ್ಲಿ ಭಾಗಿಯಾಗಬೇಕು ಎಂದು ಸೂಚಿಸಿ ತಮ್ಮ ಸದಸ್ಯರಿಗೆ ವಿಪ್ ಜಾರಿ ಮಾಡಿವೆ.
ಮಂಗಳವಾರ ನಡೆದ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ವಿಧೇಯಕ ಮಂಡನೆ ವಿಷಯವನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ವಿಧೇಯಕದ ಕುರಿತು ಉಭಯ ಸದನದಲ್ಲೂ ತಲಾ 8 ಗಂಟೆಗಳ ಕಾಲ ಚರ್ಚೆಗೆ ಸಮಯ ಕಲ್ಪಿಸುವುದಾಗಿ ಸರ್ಕಾರ ಮಾಹಿತಿ ನೀಡಿದೆ. ಲೋಕಸಭೆಯಲ್ಲಿ ಸರ್ಕಾರಕ್ಕೆ ಪೂರ್ಣ ಬಹುಮತ ಇರುವ ಕಾರಣ ಬುಧವಾರ ಯಾವುದೇ ಅಡ್ಡಿಇಲ್ಲದೇ ವಿಧೇಯಕ ಅಂಗೀಕಾರ ಆಗುವುದು ನಿಶ್ಚಿತವಾಗಿದೆ. ರಾಜ್ಯಸಭೆಯಲ್ಲಿ ಸರ್ಕಾರಕ್ಕೆ ಪೂರ್ಣ ಬಹುಮತ ಇಲ್ಲವಾದರೂ, ಸಂಖ್ಯಾಬಲ ಹೊಂದಿಸುವಲ್ಲಿ ಪರಿಣತಿ ಹೊಂದಿರುವ ಸರ್ಕಾರ, ಅಲ್ಲೂ ವಿಧೇಯಕ ಅಂಗೀಕಾರದ ವಿಶ್ವಾಸದಲ್ಲಿದೆ. ಎನ್‌ಡಿಎ ಮೈತ್ರಿಕೂಟದ ಎರಡು ಪ್ರಮುಖ ಪಕ್ಷಗಳಾದ ಟಿಡಿಪಿ, ಜೆಡಿಯು ವಿಧೇಯಕಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ಸರ್ಕಾರದ ಹುಮ್ಮಸ್ಸನ್ನು ಹೆಚ್ಚಿಸಿದೆ.ಈ ನಡುವೆ ವಿಧೇಯಕ ಕುರಿತು ಹಿಂದಿನಿಂದಲೂ ಬಲವಾದ ವಿರೋಧ ವ್ಯಕ್ತಪಡಿಸಿಕೊಂಡೇ ಬಂದಿದ್ದ ವಿಪಕ್ಷಗಳು, ಮುಂದಿನ 3 ದಿನಗಳ ಕಾಲ ಸಂಸತ್ತಿನ ಉಭಯ ಸದನಗಳಲ್ಲೂ ಪ್ರಬಲ ವಿರೋಧ ವ್ಯಕ್ತಪಡಿಸುವ ಸಾಧ್ಯತೆ ಇದೆ. ಹೀಗಾಗಿ ಉಭಯ ಸದನಗಳಲ್ಲೂ ಭಾರೀ ಕೋಲಾಹಲ ನಿರೀಕ್ಷೆ ಇದೆ.
ಮಂಗಳವಾರ ನಡೆದ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಹಾಜರಿದ್ದ ವಿಪಕ್ಷಗಳ ಸದಸ್ಯರು ಸದಸ್ಯರು 12 ಗಂಟೆಗಳ ಅವಕಾಶಕ್ಕೆ ಮನವಿ ಮಾಡಿದರು. ಆದರೆ ಈ ಬೇಡಿಕೆ ತಿರಸ್ಕರಿಸಿದ ಸರ್ಕಾರ, ಮತ್ತೊಂದು ಮಹತ್ವದ ವಿಷಯವಾದ ಮಣಿಪುರದ ಕುರಿತೂ ಬುಧವಾರ ಚರ್ಚೆಗೆ ಅವಕಾಶ ನೀಡಬೇಕಿದೆ. ಹೀಗಾಗಿ ವಕ್ಫ್ ತಿದ್ದುಪಡಿ ವಿಧೇಯಕದ ಕುರಿತು 8 ಗಂಟೆಗಳ ಚರ್ಚೆಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಸ್ಪಷ್ಟಪಡಿಸಿತು. ಹೀಗಾಗಿ ವಿಪಕ್ಷಗಳ ಸದಸ್ಯರು ಸಭೆಯಿಂದ ಹೊರನಡೆದರು ಎನ್ನಲಾಗಿದೆ.ಸಭೆಯ ಬಳಿಕ ಮಾತನಾಡಿದ ಸಂಸದೀಯ ಖಾತೆ ಸಚಿವ ಕಿರಣ್ ರಿಜಿಜು, ‘ಚರ್ಚೆಗೆ ಸಾಕಷ್ಟು ಸಮಯ ನೀಡಲಾಗಿದೆ. ಒಂದು ವೇಳೆ ಈ ಅವಧಿ ಸಾಲದಿದ್ದರೆ, ಸರ್ವಪಕ್ಷಗಳ ಅಭಿಪ್ರಾಯದಂತೆ ಅವಧಿ ವಿಸ್ತರಣೆಗೆ ಸರ್ಕಾರ ಸಿದ್ಧವಿದೆ. ಆದರೆ ಒಂದು ವೇಳೆ ಪ್ರತಿಪಕ್ಷಗಳು ಯಾವುದೋ ಕಾರಣ ನೀಡಿ ಚರ್ಚೆಯಿಂದ ಪಲಾಯನ ಮಾಡಿದರೆ ನಾವು ಏನೂ ಮಾಡಲು ಸಾಧ್ಯವಿಲ್ಲ. ನಾವು ವಿಧೇಯಕದ ಚರ್ಚೆಯಾಗಬೇಕು’ ಎಂದು ಬಯಸುತ್ತೇವೆ ಎಂದರು.
ವಕ್ಫ್ ತಿದ್ದುಪಡಿ ವಿಧೇಯಕವನ್ನು ಕಳೆದ ವರ್ಷವೇ ಸದನದಲ್ಲಿ ಮಂಡಿಸಲಾಗಿತ್ತು. ಆದರೆ ವಿಪಕ್ಷಗಳು ಈ ಕುರಿತು ವಿಸ್ತೃತ ಚರ್ಚೆಗೆ ಅವಕಾಶ ಕೋರಿದ ಹಿನ್ನೆಲೆಯಲ್ಲಿ ವಿಧೇಯಕವನ್ನು ಜಂಟಿ ಸಂಸದೀಯ ಸಮಿತಿ ಪರಿಶೀಲನೆಗೆ ಒಳಪಡಿಸಲಾಗಿತ್ತು. ಅದು ಇತ್ತೀಚೆಗೆ ಸ್ಪೀಕರ್‌ಗೆ ತನ್ನ ವರದಿ ಸಲ್ಲಿಸಿತ್ತು.