ಸಾರಾಂಶ
ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿಯಾಗದೆ ರಾಶಿರಾಶಿಯಾಗಿ ಬಿದ್ದಿರುವ ಸ್ಥಳಗಳಿಗೆ ಜಿಲ್ಲಾ ಲೋಕಾಯುಕ್ತ ಎಸ್ಪಿ ನಂದಿನಿ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹಾಸನ : ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿಯಾಗದೆ ರಾಶಿರಾಶಿಯಾಗಿ ಬಿದ್ದಿರುವ ಸ್ಥಳಗಳಿಗೆ ಜಿಲ್ಲಾ ಲೋಕಾಯುಕ್ತ ಎಸ್ಪಿ ನಂದಿನಿ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಎಪಿಎಂಸಿ ಆವರಣ, ೮೦ ಫೀಟ್ ರೋಡ್, ತಮ್ಲಾಪುರ ರಸ್ತೆ ಸೇರಿ ಹಲವೆಡೆ ಪರಿಶೀಲನೆ ನಡೆಸಿದ ನಂತರ ಅಗಿಲೆ ಬಳಿಯ ತ್ಯಾಜ್ಯ ವಿಲೇವಾರಿ ಘಟಕಕ್ಕೆ ನಗರಸಭೆ ಅಧಿಕಾರಿಗಳು ಹಾಗೂ ಲೋಕಾಯುಕ್ತ ಸಿಬ್ಬಂದಿಯ ಜೊತೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ, ಎಲ್ಲೆಂದರಲ್ಲಿ ಕಸ ಇರುವುದನ್ನು ನೋಡಿ ಬೇಸರ ವ್ಯಕ್ತಪಡಿಸಿದರು. ಇನ್ನು ಸ್ವಚ್ಛತೆ ಕಾಪಾಡದ ಕೋಳಿ ಅಂಗಡಿಗೆ ನೋಟಿಸ್ ನೀಡಿ ಕ್ರಮ ಜರುಗಿಸುವಂತೆ ಸೂಚನೆ ನೀಡಿದರು. ನಗರಸಭೆ ಆಯುಕ್ತ ಕೆ.ಎಂ.ರಮೇಶ್, ಲೋಕಾ ಡಿವೈಎಸ್ಪಿ ಸುರೇಶ್, ಆರೋಗ್ಯ ನಿರೀಕ್ಷಕರು ಉಪಸ್ಥಿತಿ, ಸರಿಯಾಗಿ ತ್ಯಾಜ್ಯ ವಿಲೇವಾರಿ ಮಾಡದ್ದಕ್ಕೆ ನಗರಸಭೆ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದರು.
ನಂತರ ಮಾಧ್ಯಮದೊಂದಿಗೆ ಮಾತನಾಡಿದ ಲೋಕಾಯುಕ್ತ ಎಸ್ಪಿ ನಂದಿನಿ ಅವರು, ಲೋಕಾಯುಕ್ತ ಇಲಾಖೆ ನಿರ್ದೇಶನದ ಅಡಿಯಲ್ಲಿ ೨೬ ಅಂಶಗಳ ಕಾರ್ಯಕ್ರಮದಲ್ಲಿ ತ್ಯಾಜ್ಯ ವಿಲೇವಾರಿ ಕೂಡ ಸೇರಿದೆ. ಈ ನಿಟ್ಟಿನಲ್ಲಿ ನಗರ ವ್ಯಾಪ್ತಿಯಲ್ಲಿ ನಗರಸಭೆ ಅಧಿಕಾರಿಗಳು ಮತ್ತು ಲೋಕಾಯುಕ್ತ ಅಧಿಕಾರಿಗಳು ಮತ್ತು ಸಿಬ್ಬಂದಿ ರೌಂಡ್ಸ್ ಮಾಡಲಾಗಿದೆ. ಈ ವೇಳೆ ಹಲವಾರು ಜನರು ರಸ್ತೆ ಬದಿ ಕಸವನ್ನು ಹಾಕುವುದು ಕಂಡುಬಂದಿರುತ್ತದೆ. ಇದರಿಂದ ಮನುಷ್ಯರಿಗೆ, ಪ್ರಾಣಿಗಳಿಗೆ, ಪಕ್ಷಿಗಳಿಗೆ ಹಾನಿಯಾಗುತ್ತದೆ. ಕಸದ ಜೊತೆ ಪ್ಲಾಸ್ಟಿಕ್ ಎಸೆಯುವುದರಿಂದ ಆಹಾರದ ಜೊತೆ ಗೋವುಗಳು ಪ್ಲಾಸ್ಟಿಕನ್ನು ಕೂಡ ಸೇವಿಸುತ್ತಿದೆ. ಇದು ಅಂತಿಮವಾಗಿ ಮನುಷ್ಯನ ಮೇಲೆ ಪರಿಣಾಮ ಬೀರುವಂತಾಗಿದೆ. ಎಷ್ಟೋ ಕಸ ಮತ್ತು ತ್ಯಾಜ್ಯವನ್ನು ನದಿ ಒಳಗೆ, ಕೆರೆ ಪಕ್ಕ ಹಾಕುವುದರಿಂದ ನಾವು ಕುಡಿಯುವ ನೀರು ಕಲುಷಿತವಾಗಿ ಹಲವಾರು ಹಾನಿಕರ ಅಂಶಗಳು ಮನುಷ್ಯನಿಗೆ ಸೇರಿ ಆರೋಗ್ಯ ಹಾಳಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಿಟಿಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎನ್ನುವ ಬಗ್ಗೆ ಆರೋಗ್ಯಾಧಿಕಾರಿಗಳ ಬಳಿ ಮಾತನಾಡಲಾಗಿದೆ. ಕಸ ವಿಲೇವಾರಿ ಎನ್ನುವುದು ಪ್ರತಿ ನಾಗರೀಕರ, ಎಲ್ಲ ಇಲಾಖೆ ನೌಕರರ ಜವಾಬ್ದಾರಿ. ಸಾರ್ವಜನಿಕರು ಕೂಡ ಎಲ್ಲಿ ಕಸ ಹಾಕಬೇಕು ಎನ್ನುವ ಬಗ್ಗೆ ಜಾಗೃತಿ ಅಗತ್ಯ. ಕಸದ ಆಟೋದಲ್ಲೆ ಕಸ ಹಾಕುವಂತೆ ಮನವಿ ಮಾಡಿದರು. ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೂ ನಗರ ಸ್ವಚ್ಛತೆ ಬಗ್ಗೆ ಹೇಳಿದ್ದು, ಅವರಿಗೆ ನಾವು ಕೈಜೋಡಿಸೋಣ ಎಂದು ಕರೆ ನೀಡಿದರು.