ಸಾರಾಂಶ
*ಕೇಂದ್ರ ಬಿಜೆಪಿ ಸರ್ಕಾರ ಬೇಕಾಬಿಟ್ಟಿ ಬೆಲೆ ಏರಿಕೆ ಮಾಡಿದೆ
*ರಾಜ್ಯಕ್ಕೆ ನ್ಯಾಯಯುತ ಪಾಲು ನೀಡದೆ ಅನ್ಯಾಯ ಎಸಗಿದೆ
*ಈಗ ನಾವೆಲ್ಲ ರಾಜ್ಯದ ತೆರಿಗೆ ಬಾಕಿಯನ್ನು ಪ್ರಶ್ನಿಸಬೇಕಿದೆ
-ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ
*ಕೇಂದ್ರ ಬಿಜೆಪಿ ಸರ್ಕಾರ ಬೇಕಾಬಿಟ್ಟಿ ಬೆಲೆ ಏರಿಕೆ ಮಾಡಿದೆ
*ರಾಜ್ಯಕ್ಕೆ ನ್ಯಾಯಯುತ ಪಾಲು ನೀಡದೆ ಅನ್ಯಾಯ ಎಸಗಿದೆ
*ಈಗ ನಾವೆಲ್ಲ ರಾಜ್ಯದ ತೆರಿಗೆ ಬಾಕಿಯನ್ನು ಪ್ರಶ್ನಿಸಬೇಕಿದೆ
ನಂದಿನಿ ಹಾಲಿನ ದರವನ್ನು ಸ್ವಲ್ಪಮಟ್ಟಿಗೆ ಪರಿಷ್ಕರಣೆ ಮಾಡುವ ಮೂಲಕ ಹೈನುಗಾರರ ನೆರವಿಗಾಗಿ ನಮ್ಮ ಕಾಂಗ್ರೆಸ್ ಸರ್ಕಾರ ಮುಂದಡಿ ಇಟ್ಟಿದೆ. ಆದರೆ ಇದಕ್ಕೆ ‘ಬೆಲೆ ಏರಿಕೆʼ ಎಂಬ ದೊಡ್ಡ ಹಣೆಪಟ್ಟಿ ಕಟ್ಟಿ ಅಪಪ್ರಚಾರ ಮಾಡುತ್ತಿರುವುದು ನೋಡಿ ಅಚ್ಚರಿ ಎನಿಸಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಪಂಚ ಗ್ಯಾರಂಟಿಗಳನ್ನು ಜಾರಿ ಮಾಡಿ ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ. ಜನ ಗ್ಯಾರಂಟಿಗಳಿಂದ ಉಳಿಸಿದ ಹಣದಿಂದ ಫ್ರಿಡ್ಜ್, ವಾಹನ ಖರೀದಿ ಮಾಡುತ್ತಿದ್ದಾರೆ, ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ, ಸ್ವತಂತ್ರವಾಗಿ ಉದ್ಯಮಗಳನ್ನು ನಡೆಸುತ್ತಿದ್ದಾರೆ. ಕೇವಲ ಐದು ಗ್ಯಾರಂಟಿಗಳು ಮಾಡಿರುವ ಮ್ಯಾಜಿಕ್‌ನಿಂದಾಗಿ ಸಾಮಾಜಿಕ-ಆರ್ಥಿಕ ಪರಿಸ್ಥಿತಿ ಸಾಕಷ್ಟು ಅಭಿವೃದ್ಧಿಯಾಗಿದೆ. ಇವ್ಯಾವುದನ್ನೂ ಪರಿಗಣಿಸದೆ, ನಂದಿನಿ ಹಾಲಿನ ದರ ಪರಿಷ್ಕರಣೆ ಬಗ್ಗೆ ಏಕಾಏಕಿ ದಾಳಿ ನಡೆಸುತ್ತಿರುವುದು ಕೇವಲ ರಾಜಕೀಯ ಎಂಬುದರಲ್ಲಿ ಅನುಮಾನವೇ ಇಲ್ಲ. ಇಂತಹ ಅಪಪ್ರಚಾರಕ್ಕೆ ಜನ ಕಿವಿಗೊಡಬಾರದು.
ಇಷ್ಟಕ್ಕೂ ಇದನ್ನು ಟೀಕೆ ಮಾಡುತ್ತಿರುವವರು ಯಾರು ಎಂದು ನೋಡಿದರೆ ದೊಡ್ಡ ಹಾಸ್ಯ ಎನಿಸಬಹುದು. ಕೋವಿಡ್ ಕಳೆದ ಬಳಿಕ, 2022-2023ರ ಸಮಯದಲ್ಲಿ ಬೆಲೆಗಳು ಗಗನಕ್ಕೇರಿತ್ತು. ಎಣ್ಣೆ, ಪೆಟ್ರೋಲ್-ಡೀಸೆಲ್, ಅಡುಗೆ ಅನಿಲ, ಬೇಳೆಕಾಳು ಸೇರಿ ಎಲ್ಲ ಅಗತ್ಯ ಪದಾರ್ಥಗಳ ಬೆಲೆ ದಾಖಲೆಯ ಮಟ್ಟದಲ್ಲಿತ್ತು. ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಕೈಗೊಂಡ ಎಡವಟ್ಟು ಆರ್ಥಿಕ ನೀತಿಗಳಿಂದಾಗಿ ಬೆಲೆಗಳು ಅವೈಜ್ಞಾನಿಕ ರೀತಿಯಲ್ಲಿ ಮೇಲಕ್ಕೇರಿದ್ದವು. ಇದಕ್ಕೆ ತಡೆ ಹಾಕಲು ಕರ್ನಾಟಕದಲ್ಲಿ ಕಾಂಗ್ರೆಸ್‌ನಿಂದ ಗ್ಯಾರಂಟಿಗಳನ್ನು ಘೋಷಿಸಲಾಯಿತು. ಅದಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಯಿತು. ಬಿಜೆಪಿಯ ಆರ್ಥಿಕ ಅವ್ಯವಸ್ಥೆಯಿಂದ ಬೇಸತ್ತ ಪ್ರತಿಯೊಬ್ಬರೂ ಕಾಂಗ್ರೆಸ್‌ನ ಕೈ ಹಿಡಿದರು. ಇದು ಮುಂದಿನ 2024ರ ಲೋಕಸಭಾ ಚುನಾವಣೆಯಲ್ಲೂ ಪ್ರತಿಧ್ವನಿಸಿತು. 300 ಸೀಟುಗಳನ್ನು ದಾಟುತ್ತೇವೆ ಎಂದು ಬೀಗುತ್ತಿದ್ದ ಬಿಜೆಪಿ ನಾಯಕರು, ಸ್ವಂತ ಬಲವಿಲ್ಲದೆ ಬೇರೆ ಪಕ್ಷಗಳ ಜೊತೆಗೂಡಿ ಸರ್ಕಾರ ರಚಿಸಬೇಕಾದ ದುರಂತ ಸೃಷ್ಟಿಯಾಯಿತು. ಕರ್ನಾಟಕದಲ್ಲಿ ಬಿಜೆಪಿ ಸಂಪೂರ್ಣ ದುರ್ಬಲವಾಗಲು ಹಾಗೂ ದೇಶದಲ್ಲಿ ಸ್ವಂತ ಬಲ ಕಳೆದುಕೊಳ್ಳಲು ಕಾರಣವಾದ ಅಂಶಗಳಲ್ಲಿ ಬೆಲೆ ಏರಿಕೆ ಮುಖ್ಯ ಪಾತ್ರ ವಹಿಸಿತ್ತು. ನಂದಿನಿ ಹಾಲಿನ ದರ ಪರಿಷ್ಕರಣೆಯ ಸಮಯದಲ್ಲಿ ಈ ಇತಿಹಾಸವನ್ನು ಬಿಜೆಪಿ ನಾಯಕರು ಮರೆತಿದ್ದಾರೆ.
ನಂದಿನಿ ಬಗ್ಗೆ ಇಷ್ಟು ಪ್ರೀತಿ ತೋರಿಸುವವರು, ಕೇಂದ್ರ ಸಹಕಾರ ಸಚಿವರಾದ ಅಮಿತ್ ಶಾ, ಅಮೂಲ್ ಜೊತೆಗೆ ಕೆಎಂಎಫ್ ವಿಲೀನದ ಬಗ್ಗೆ ಪ್ರಸ್ತಾಪ ಮಾಡಿದ್ದಾಗ ಅದನ್ನೂ ಸಮರ್ಥಿಸಿಕೊಂಡಿದ್ದರು. ಇದೇ ಏ.1 ರಿಂದ ಹೆದ್ದಾರಿಗಳ ಟೋಲ್ ಶುಲ್ಕ ಶೇ.3 ರಿಂದ ಶೇ.5ರಷ್ಟು ಹೆಚ್ಚಾಗಿದೆ. ಮಧುಮೇಹ ಹಾಗೂ ಕ್ಯಾನ್ಸರ್ ರೋಗಗಳ ಔಷಧಿಗಳ ಬೆಲೆ ಹೆಚ್ಚಿಸಲಾಗಿದೆ. ಇದರ ಜೊತೆಗೆ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರುತ್ತಲೇ ಇದೆ. ಈ ಬಗ್ಗೆ ಬಿಜೆಪಿಯಿಂದ ಯಾವುದೇ ದೂರುಗಳಿಲ್ಲ.
ದರ ಪರಿಷ್ಕರಣೆ ಏಕೆ ಬೇಕಿತ್ತು?:
ಈ ಸಮಯದಲ್ಲಿ ದರ ಏರಿಕೆ ಬೇಕಿತ್ತೇ ಎಂದು ಪ್ರಶ್ನೆ ಮಾಡುವವರು ರಾಜ್ಯದ ಅನ್ನದಾತರ ಬಗ್ಗೆ ಸ್ವಲ್ಪ ಚಿಂತಿಸಬೇಕಿದೆ. ಗ್ರಾಹಕರಿಗೆ ಹೆಚ್ಚಿನ ಹೊರೆಯಾಗದಂತೆ ಹಾಗೂ ಹೈನುಗಾರರ ನೆರವಿಗೆ ಧಾವಿಸಲು ದರ ಹೆಚ್ಚಳ ಮಾಡಲಾಗಿದೆ. ನಮ್ಮ ರೈತರಿಗಾಗಿ ಹಾಗೂ ಅಭಿವೃದ್ಧಿ ಕಾರ್ಯಗಳಿಗಾಗಿ ನ್ಯಾಯಯುತವಾಗಿ ಬರಬೇಕಿದ್ದ ತೆರಿಗೆ ಹಂಚಿಕೆ ಪಾಲನ್ನು ಹಲವಾರು ಬಾರಿ ಕೇಳಲಾಗಿದೆ. ಆದರೂ ಕೇಂದ್ರ ಸರ್ಕಾರ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಬಿಜೆಪಿ ಸಂಸದರು ಅಥವಾ ಶಾಸಕರು ರಾಜ್ಯಕ್ಕೆ ನ್ಯಾಯವಾಗಿ ಬರಬೇಕಿರುವ ತೆರಿಗೆ ಪಾಲು ಕೇಳಲು ನಮ್ಮೊಂದಿಗೆ ಕೈ ಜೋಡಿಸಿಲ್ಲ. ಇಂಥ ಪರಿಸ್ಥಿತಿಯಲ್ಲಿ, ರೈತರ ಆರ್ಥಿಕ ಮಟ್ಟ ಸುಸ್ಥಿರಗೊಳಿಸಲು ಈ ನಿರ್ಧಾರಕ್ಕೆ ಬರಲಾಗಿದೆ.
ಆದರೂ ಇಲ್ಲಿ ಗ್ರಾಹಕರ ಹಿತ ಕೂಡ ಪರಿಗಣಿಸಿ ಅತಿ ಕಡಿಮೆ ಮಟ್ಟದಲ್ಲಿ ಹಾಲು ಹಾಗೂ ಮೊಸರಿನ ದರವನ್ನು 4 ರು.ನಂತೆ ಪರಿಷ್ಕರಿಸಲಾಗಿದೆ. ಹೈನುಗಾರಿಕೆ ಉದ್ಯಮ ಲಾಭದಾಯಕವಾಗಿದ್ದರೂ, ಅದರ ನಿರ್ವಹಣೆ ಸವಾಲಿನದ್ದು. ಪಶು ಆಹಾರ ಉತ್ಪಾದನೆಗೆ ಬಳಸುವ ಮೆಕ್ಕೆಜೋಳ, ಅಕ್ಕಿತೌಡು, ಹತ್ತಿಕಾಳು ಹಿಂಡಿ, ಖನಿಜ ಪದಾರ್ಥಗಳ ದರ ಶೇ.35-40ರಷ್ಟು ಏರಿಕೆಯಾಗಿದೆ. ಹೆಚ್ಚಿಸಿದ ದರದ ಲಾಭವನ್ನು ನೇರವಾಗಿ ಹೈನುಗಾರರಿಗೆ ತಲುಪಿಸುವಂತೆ ಕ್ರಮ ವಹಿಸಲಾಗಿದೆ ಎಂಬುದನ್ನು ಇಲ್ಲಿ ಗಮನಿಸಬೇಕಿದೆ.
ಗುಣಮಟ್ಟದಲ್ಲಿ ಅತ್ಯಂತ ಜನಪ್ರಿಯವಾಗಿರುವ ನಂದಿನಿ ಹಾಲು ಹಾಗೂ ಕೆಎಂಎಫ್ ಉತ್ಪನ್ನಗಳ ಮಾರುಕಟ್ಟೆಯನ್ನು ದೇಶಾದ್ಯಂತ ವಿಸ್ತರಿಸಲಾಗಿದೆ. ಇತ್ತೀಚೆಗೆ ರಾಜಧಾನಿ ದೆಹಲಿಯಲ್ಲೂ ಉತ್ತಮ ಮಾರುಕಟ್ಟೆಯನ್ನು ನಂದಿನಿ ಸ್ಥಾಪಿಸಿಕೊಂಡಿದೆ. ಇದಕ್ಕೆ ಬೇಕಾದ ಎಲ್ಲ ಬಗೆಯ ಪ್ರೋತ್ಸಾಹಗಳನ್ನು ನೀಡಲಾಗಿದೆ. ಈಗ ದರ ಪರಿಷ್ಕರಣೆ ಕೂಡ ಪ್ರೋತ್ಸಾಹದ ಒಂದು ಸಣ್ಣ ಭಾಗವಷ್ಟೆ.
ಅಪಪ್ರಚಾರ ಬೇಕಿರಲಿಲ್ಲ:
ಇಷ್ಟಕ್ಕೂ ದರ ಪರಿಷ್ಕರಣೆ ಎಂದಾಕ್ಷಣ ಜನ ಬೆಚ್ಚಿ ಬೀಳುವಂತೆ ಅಪಪ್ರಚಾರ ಮಾಡುವುದು ಬೇಕಿರಲಿಲ್ಲ. ಏಕೆಂದರೆ ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಂದಿನಿ ಹಾಲಿನ ದರ ಬಹಳ ಕಡಿಮೆಯೇ ಇದೆ. ಕೇರಳದ ಮಲಬಾರ್ ಹಾಲು ಒಕ್ಕೂಟದ ಹಾಲಿನ ದರ ಲೀಟರ್‌ಗೆ 52 ರು, ಗುಜರಾತ್‌ನ ಬನಸ್ಕಾಂತದ ಹಾಲಿನ ದರ ಲೀಟರ್‌ಗೆ 53 ರು., ಮಹಾರಾಷ್ಟ್ರದ ಕೊಲ್ಹಾಪುರದ ಹಾಲಿನ ದರ ಲೀಟರ್‌ಗೆ 52 ರು., ಅಸ್ಸಾಂನ ವಮುಲ್‌ನ ಹಾಲಿನ ದರ ಲೀಟರ್‌ಗೆ 60 ರು., ಹರಿಯಾಣದ ಅಂಬಲದ ಹಾಲಿನ ದರ ಲೀಟರ್‌ಗೆ 56 ರು., ರಾಜಸ್ತಾನದ ಜೈಪುರ ಹಾಲಿನ ದರ ಲೀಟರ್‌ಗೆ 50 ರು. ಇದೆ. ಆದರೆ ಕರ್ನಾಟಕದ ಕೆಎಂಎಫ್‌ನ ಹಾಲು ಲೀಟರ್‌ಗೆ 46 ರು.ದರದಲ್ಲಿ ದೊರೆಯುತ್ತದೆ. ದೇಶದ ಮಾರುಕಟ್ಟೆಯಲ್ಲಿ ಅತಿ ಕಡಿಮೆ ದರಕ್ಕೆ ನಂದಿನಿ ಹಾಲು ಜನರ ಕೈ ಸೇರುವಂತೆ ದರದಲ್ಲೂ ಗುಣಮಟ್ಟ ಕಾಯ್ದುಕೊಳ್ಳಲಾಗಿದೆ.
ತೆರಿಗೆ ಪಾಲಿನ ಬಗ್ಗೆ ಪ್ರಶ್ನಿಸೋಣ:
ಒಂದು ಉದಾಹರಣೆ ನೋಡಿ. ವಿಜಯಪುರ ಜಿಲ್ಲೆಯ ಇಂಡಿಯ ಬಬಲಾದ ಗ್ರಾಮದ 20 ಮಹಿಳೆಯರು ‘ಒಡಲ ಧ್ವನಿʼ ಎಂಬ ಸಂಘ ರಚಿಸಿಕೊಂಡು ಹೋಳಿಗೆ ತಯಾರಿಸಿ, ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದಾರೆ. ಇವರು ವಿಜಯಪುರದಿಂದ ಬೆಂಗಳೂರಿಗೆ ಬರಲು ಶಕ್ತಿ ಯೋಜನೆಯ ಉಚಿತ ಬಸ್ ನೆರವಾಗಿದೆ. ಇದೇ ರೀತಿ 200 ಯುನಿಟ್ ಉಚಿತ ವಿದ್ಯುತ್, ಅನ್ನಭಾಗ್ಯ, 2,000 ರು. ನೀಡುವ ಗೃಹಲಕ್ಷ್ಮಿ ಗ್ಯಾರಂಟಿಗಳ ಮೂಲಕ ಕೋಟ್ಯಂತರ ಜನರ ಬದುಕು ಕಟ್ಟಿಕೊಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಈ ಯೋಜನೆಗಳಿಂದಾಗಿ ಜನರ ಮನೆಯ ತಿಂಗಳ ಬಜೆಟ್‌ನಲ್ಲಿ ಉಳಿತಾಯ ಇನ್ನಷ್ಟು ಹೆಚ್ಚಾಗಿದೆ.
ಬೆಲೆಗಳನ್ನು ಬೇಕಾಬಿಟ್ಟಿಯಾಗಿ ಏರಿಸಿ, ಕರ್ನಾಟಕಕ್ಕೆ ನ್ಯಾಯಯುತ ಪಾಲು ನೀಡದೆ ಅನ್ಯಾಯ ಮಾಡುತ್ತಿರುವುದು ಬಿಜೆಪಿ ಮಾತ್ರ. ಬೆಲೆ ಏರಿಕೆಯ ವಿಚಾರದಲ್ಲಿ ಹಾಗೂ ತೆರಿಗೆ ಮರು ಹಂಚಿಕೆ ವಿಚಾರದಲ್ಲಿ ಕೇಳಬೇಕಾದ ಪ್ರಶ್ನೆಗಳನ್ನು ಮರೆಮಾಚಿ, ಹಾಲಿನ ದರ ಪರಿಷ್ಕರಣೆ ಬಗ್ಗೆ ಸುಖಾಸುಮ್ಮನೆ ರಾಜಕೀಯ ಟೀಕೆಗಳನ್ನು ಮಾಡುವುದರಿಂದ ಜನರ ಹಿತ ಕಾಯುವಂತಾಗುವುದಿಲ್ಲ. ರಾಜ್ಯಗಳಿಗೆ ನೀಡುವ ತೆರಿಗೆ ಪಾಲನ್ನು ಶೇ.41 ರಿಂದ ಶೇ.40ಕ್ಕೆ ಇಳಿಸಲು ಕೇಂದ್ರ ಸರ್ಕಾರ ಹಣಕಾಸು ಆಯೋಗಕ್ಕೆ ಸೂಚನೆ ನೀಡಿದೆ. 15ನೇ ಹಣಕಾಸು ಆಯೋಗ ತೆರಿಗೆ ಹಂಚಿಕೆಯ ಪ್ರಮಾಣವನ್ನು ಶೇ.4.71 ರಿಂದ ಶೇ.3.64ಕ್ಕೆ ಇಳಿಸಿದ್ದರಿಂದ ಕರ್ನಾಟಕಕ್ಕೆ ಕಳೆದ 5 ವರ್ಷಗಳಲ್ಲಿ 68,775 ಕೋಟಿ ರು. ನಷ್ಟವಾಗಿದೆ. ನಾವೆಲ್ಲರೂ ಒಂದಾಗಿ ಪ್ರಶ್ನಿಸಬೇಕಾಗಿರುವುದು ರಾಜ್ಯಕ್ಕೆ ಬರಬೇಕಿರುವ ತೆರಿಗೆ ಹಂಚಿಕೆಯ ಪಾಲು ಎಂಬುದನ್ನು ಸದಾ ನೆನಪಿಡೋಣ.
;Resize=(690,390))
)
;Resize=(128,128))
;Resize=(128,128))
;Resize=(128,128))
;Resize=(128,128))