ಸಾರಾಂಶ
ರಾಮನಗರ: ಭ್ರಷ್ಟರ ವಿರುದ್ದ ಸಮರ ಸಾರಿರುವ ಲೋಕಾಯುಕ್ತ ಪೊಲೀಸರು ಮಂಗಳವಾರ ಕೆಆರ್ ಐಡಿಎಲ್ ಸಹಾಯಕ ಎಂಜನಿಯರ್ ಹಾಗೂ ಗ್ರಾಮ ಪಂಚಾಯಿತಿ ಸದಸ್ಯನ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ.
ರಾಮನಗರದ ಕರ್ನಾಟಕ ರೂರಲ್ ಇನ್ ಫ್ರಾಸ್ಟ್ರಕ್ಟರ್ ಡೆವಲಪ್ ಮೆಂಟ್ ಲಿಮಿಟೆಡ್ (ಕೆಆರ್ ಐಡಿಎಲ್ ) ಸಹಾಯಕ ಎಂಜಿನಿಯರ್ ಸೈಯದ್ ಮುನೀರ್ ಅಹಮದ್ ಹಾಗೂ ಚೆನ್ನೇನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಸುರೇಶ್ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿದ ಲೋಕಾಯುಕ್ತರು ಶೋಧ ಕಾರ್ಯದಲ್ಲಿ ಕೆಲ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ವರ್ಷದ ಹಿಂದಷ್ಟೇ ರಾಮನಗರಕ್ಕೆ ವರ್ಗಾವಣೆಯಾಗಿದ್ದ ಸೈಯದ್ ಮುನೀರ್ ಅಹಮದ್ ವಿರುದ್ಧ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಅವರು ಕಾರ್ಯನಿರ್ವಹಿಸುವ ರಾಮನಗರ ಕಚೇರಿ, ಬೆಂಗಳೂರಿನ ಆರ್.ಟಿ. ನಗರದಲ್ಲಿರುವ ಮನೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆಯಲ್ಲಿರುವ ಸಂಬಂಧಿ ಮನೆ ಮೇಲೆ ಲೋಕಾಯುಕ್ತ ಪೊಲೀಸರು ಪ್ರತ್ಯೇಕ ದಾಳಿ ನಡೆಸಿದ್ದಾರೆ.
ರಾಮನಗರ ಕಚೇರಿಯಲ್ಲಿ ಸೈಯದ್ ಮುನೀರ್ ಅಹಮದ್ ಅವರ ಅವಧಿಯಲ್ಲಿ ಆಗಿರುವ ಕಾಮಗಾರಿಗಳಿಗೆ ಸಂಬಂಧಿಸಿದ ಕಡತಗಳ ಪರಿಶೀಲನೆ ನಡೆಸಲಾಗಿದೆ. ಅವರಿಗೆ ಆಪ್ತವಾದ ಕೆಲ ಸಿಬ್ಬಂದಿಯನ್ನು ವಿಚಾರಣೆ ನಡೆಸಲಾಗಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.ಬೆಂಗಳೂರಿನ ಲೋಕಾಯುಕ್ತ ಇನ್ಸ್ ಪೆಕ್ಟರ್ ಬಿ.ಪಿ.ಮಂಜು ನೇತೃತ್ವದ ನಾಲ್ವರು ಅಧಿಕಾರಿಗಳ ತಂಡ ಬೆಳಿಗ್ಗೆ 10.15ರ ಸುಮಾರಿಗೆ ಕೆಆರ್ ಐಡಿಎಲ್ ಕಚೇರಿ ಮೇಲೆ ದಾಳಿ ನಡೆಸಿದೆ. ಈ ವೇಳೆ ಕಚೇರಿಯಲ್ಲಿ ಒಬ್ಬರನ್ನು ಬಿಟ್ಟು ಬೇರೆ ಯಾರೂ ಇರಲಿಲ್ಲ. ಲೋಕಾಯುಕ್ತರ ದಾಳಿಯ ವಿಷಯ ತಿಳಿದು ಕೆಲವರು 11 ಗಂಟೆ ನಂತರ ಕಚೇರಿಗೆ ಬಂದಿದ್ದಾರೆ. ಸೈಯದ್ ಅವರ ಕೊಠಡಿಯಲ್ಲಿ ಶೋಧ ಕಾರ್ಯ ನಡೆಸಿದ ಲೋಕಾಯುಕ್ತರು, ಸತತ ಮೂರುಗಂಟೆಗಳಿಗೂ ಹೆಚ್ಚು ಕಾಲ ಕಡತಗಳ ಪರಿಶೀಲಿಸಿದರು.
ಗ್ರಾಪಂ ಸದಸ್ಯನ ಮನೆ ಮೇಲೂ ದಾಳಿ:ಬೆಂಗಳೂರು ದಕ್ಷಿಣ ತಾಲೂಕಿನ ಚೆನ್ನೇನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಸುರೇಶ್ ಮನೆ ಮೇಲೂ ಲೋಕಾಯುಕ್ತ ಪೊಲೀಸರ ತಂಡ ದಾಳಿ ಮಾಡಿದೆ. ಅಕ್ರಮ ಆಸ್ತಿ ಗಳಿಕೆ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ.
ಲೋಕಾಯುಕ್ತ ಡಿವೈಎಸ್ಪಿ ಗೌತಮ್ ನೇತೃತ್ವದ ಐದು ಮಂದಿಯ ತಂಡ ಸುರೇಶ್ ಮನೆ ಮೇಲೆ ದಾಳಿ ನಡೆಸಿದ್ದು, ಈ ವೇಳೆ ಸಿಕ್ಕ ದಾಖಲೆಗಳ ಕುರಿತು ಪರಿಶೀಲನೆ ನಡೆಸಿದ್ದಾರೆನ್ನಲಾಗಿದೆ.9ಕೆಆರ್ ಎಂಎನ್ 3.ಜೆಪಿಜಿರಾಮನಗರದ ಕೆಆರ್ ಐಡಿಎಲ್ ಕಚೇರಿ.