ಹುಮನಾಬಾದ್‌ನ ಆರ್‌ಟಿಒ ಕಚೇರಿ ಮೇಲೆ ಲೋಕಾ ದಾಳಿ

| Published : Oct 09 2024, 01:37 AM IST

ಸಾರಾಂಶ

ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಉಮೇಶ ನೇತೃತ್ವದಲ್ಲಿ ಹುಮನಾಬಾದ ಮತ್ತು ಮೋಳಕೇರಾ ಆರ್‌ಟಿಒ ಕಚೇರಿ ಮೇಲೆ ಮಂಗಳವಾರ ನಸೂಕಿನ ಜಾವ ದಾಳಿ ನಡೆಸಿ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಹುಮನಾಬಾದ್

ಆರ್‌ಟಿಒ ಕಚೇರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂಬ ದೂರುಗಳ ಮೇರೆಗೆ ಕಲಬುರಗಿ ಜಿಲ್ಲಾ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಉಮೇಶ ಬಿ.ಕೆ ನೇತೃತ್ವದಲ್ಲಿ ಮಂಗಳವಾರ ಬೆಳಂ ಬೆಳಗ್ಗೆ ದಾಳಿ ನಡೆದಿದೆ.

ಹುಮನಾಬಾದ ತಾಲೂಕಿನ ಮೋಳಕೇರಾ ಗ್ರಾಮದ ಹೊರವಲಯ ಹೈದ್ರಾಬಾದ್-ಮುಂಬೈ ರಾಷ್ಟ್ರೀಯ ಹೆದ್ದಾರಿ 65ರ ಮೇಲೆ ಇರುವ ಸಹಾಯಕ ಪ್ರಾದೇಶಿಕ ಸಾರಿಗೆ ತನಿಖಾ ಠಾಣೆ (ಆರ್‌ಟಿಒ) ಕಚೇರಿಗಳ ಮೇಲೆ ನಸುಕಿನ ಜಾವ 4 ಗಂಟೆಗೆ ಲೋಕಾಯುಕ್ತ ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ. ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರದೀಪ, ರವಿಶಂಕರ, ವಿಜಯಕುಮಾರ ಭಜಂತ್ರಿ ಸ್ಥಳದಲ್ಲೆ ಇದ್ದು, ದಾಳಿ ಸಂದರ್ಭದಲ್ಲಿ ಪ್ರದೀಪ ಅವರು ವಿಶ್ರಾಂತಿಯಲ್ಲಿದ್ದರು ಎಂದು ತಿಳಿದು ಬಂದಿದೆ. ಗೂಡ್ಸ್‌ ವಾಹನಗಳಿಂದ ಹೆಚ್ಚಿನ ಹಣ ಪಡೆಯಲಾಗುತ್ತಿದೆ ಎಂಬ ಮಾಹಿತಿ ಹಿನ್ನೆಲೆ ದಾಳಿ ಮಾಡಲಾಗಿದೆ.

ದಾಳಿ ಮಾಡಿ ಕೆಲ ದಾಖಲೆಗಳನ್ನು ನಾಲ್ಕು ತಂಡಗಳ ಮೂಲಕ ವಶಪಡಿಸಿಕೊಂಡು ಪರಿಶೀಲನೆ ಮುಂದುವರೆದಿದ್ದು, ಮಧ್ಯವರ್ತಿಗಳನ್ನು ಇದೇ ವೇಳೆ ವಶಪಡಿಸಿಕೊಂಡು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಇದರಿಂದ ಕಚೇರಿಯಲ್ಲಿ ನಡೆಯುತ್ತಿರುವ ಮತ್ತಷ್ಟು ಹಗರಣ ಬೆಳಕಿಗೆ ಬರಲಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.

ಲೋಕಾಯುಕ್ತ ಪೊಲೀಸರ ತಂಡದಲ್ಲಿ ಕಲಬುರಗಿ ಡಿವೈಎಸ್ಪಿ ಗೀತಾ ಬೆನಹಾಳ, ಬೀದರ್‌ ಡಿವೈಎಸ್ಪಿ ಹನಮಂತರಾಯ, ಸಿಪಿಐ ಅರುಣಕುಮಾರ, ಅಕ್ಕಮಹಾದೇವಿ ಹಾಗೂ ಪ್ರದೀಪ್, ಮಸೂದ್, ಬಸವರಾಜ್, ಶರಣು, ಯಮನೂರಪ್ಪ, ರಾಜೇಶ್, ಸಬ್ ಇನ್ಸ್‌ಪೆಕ್ಟರ್, ಆರ್‌ಟಿಒ ಇನ್ಸ್‌ಪೆಕ್ಟರ್‌, ಸಿಬ್ಬಂದಿ ಇತರರು ಇದ್ದರು.