ಕೆಪಿಟಿಸಿಎಲ್‌ ಇಇ, ಬೆಸ್ಕಾಂ ಎಇಇ ಮನೆಗೆ ಲೋಕಾ ದಾಳಿ

| Published : Jul 12 2024, 01:31 AM IST

ಸಾರಾಂಶ

ದಾವಣಗೆರೆ ಹೊರ ವಲಯದ ಆ‍ವರಗೆರೆ ಗ್ರಾಮದಲ್ಲಿ ಚಿಕ್ಕಮಗಳೂರು ಕೆಪಿಟಿಸಿಎಲ್‌ ಇಇ ಡಿ.ಎಚ್‌.ಉಮೇಶರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿ, ಸಿಬ್ಬಂದಿ ದಾಳಿ ನಡೆಸಿರುವುದು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಕಾನೂನು ಬದ್ಧ ಮೂಲಗಳ ಆದಾಯಕ್ಕಿಂತ ಹೆಚ್ಚುವರಿಯಾಗಿ ಸ್ಥಿರ ಮತ್ತು ಚರ ಆಸ್ತಿ ಗಳಿಸಿದ್ದಾರೆಂಬ ಖಚಿತ ಬಾತ್ಮಿ ಹಾಗೂ ಗುಪ್ತ ಮಾಹಿತಿ ಮೇರೆಗೆ ಚಿಕ್ಕಮಗಳೂರಿನ ಕೆಪಿಟಿಸಿಎಲ್‌ ಇಇ ಡಿ.ಎಚ್‌.ಉಮೇಶ್ ಹಾಗೂ ದಾವಣಗೆರೆ ಬೆಸ್ಕಾಂ ವಿಜಿಲೆನ್ಸ್‌ನ ಎಇಇ ಕಚೇರಿ, ಮನೆಗಳು, ಮಾವನ ಮನೆ, ಉಗ್ರಾಣ ಸೇರಿ 8 ಸ್ಥಳಗಳ ಮೇಲೆ ಮೇಲೆ ಲೋಕಾಯುಕ್ತರ ಪೊಲೀಸಲು ಗುರುವಾರ ಬೆಳ್ಳಂ ಬೆಳಗ್ಗೆಯೇ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.

ಚಿಕ್ಕಮಗಳೂರು ಕೆಪಿಟಿಸಿಎಲ್‌ ಟಿಎಲ್ ಅಂಡ್‌ ಎಸ್ಎಸ್‌ ವಿಭಾಗದ ಕಾರ್ಯ ನಿರ್ವಾಹಕ ಅಭಿಯಂತರ ಡಿ.ಎಸ್.ಉಮೇಶ ಹಾಗೂ ದಾವಣಗೆರೆ ಬೆಸ್ಕಾಂನ ವಿಜಿಲೆನ್ಸ್‌ನ ಸಹಾಯಕ ಕಾರ್ಯ ನಿರ್ವಹಣಾಧಿಕಾರಿ ಎಂ.ಎಸ್‌.ಪ್ರಭಾಕರ ಕಚೇರಿ, ಮನೆ, ಸಂಬಂಧಿಗಳ ಮನೆ, ಉಗ್ರಾಣದ ಮೇಲೆ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್‌.ಕೌಲಾಪುರೆ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಡಿವೈಎಸ್ಪಿಗಳು, ಇನ್ಸಪೆಕ್ಟರ್‌ಗಳ ನೇತೃತ್ವದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಅಪಾರ ಪ್ರಮಾಣದ ಸ್ಥಿರ ಮತ್ತು ಚರ ಆಸ್ತಿ ಪತ್ತೆ ಮಾಡಿದ್ದಾರೆ.

ಕೆಪಿಟಿಸಿಎಲ್‌ ಚಿಕ್ಕಗಳೂರಿನ ಇಇ ಡಿ.ಎಚ್.ಉಮೇಶ್‌ರಿಗೆ ಸೇರಿದ ದಾವಣಗೆರೆ ನಗರದ ಶಿವಕುಮಾರ ಸ್ವಾಮಿ ಬಡಾವಣೆ 2ನೇ ಹಂತದ ವಾಸದ ಮನೆ, ಕಸಬಾ ಹೋಬಳಿ ಆವರಗೆರೆ ಗ್ರಾಮದ ಹೊಸ ಮನೆ, ಚಿಕ್ಕಮಗಳೂರಿನ ಕೆಪಿಟಿಸಿಎಲ್ ಉಪ ವಿಭಾಗದ ಟಿಎಲ್ ಅಂಡ್ ಎಸ್‌ಎಸ್‌ ವಿಭಾಗದ ಕಚೇರಿ, ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾ. ಗವಿರಂಗಾಪುರ ಗ್ರಾಮದ ಮನೆ, ದಾವಣಗೆರೆ ಕೆಐಎಡಿಬಿ ಕರೂರು ವಲಯದ ಉಗ್ರಾಣದ ಮೇಲೆ ಲೋಕಾಯುಕ್ತ ಅಧಿಕಾರಿಗಳ ತಂಡವು ದಾಳಿ ನಡೆಸಿದ್ದು, ಗುರುವಾರ ಸಂಜೆವರೆಗೂ ಪರಿಶೀಲನೆ ನಡೆದಿದೆ.

ಲೋಕಾಯುಕ್ತ ಪೊಲೀಸ್ ನಿರೀಕ್ಷಕರಾದ ಪ್ರಭು ಬ.ಸೂರಿನ, ಎಚ್.ಎಸ್.ರಾಷ್ಟ್ರಪತಿ, ಹಾವೇರಿ ಜಿಲ್ಲೆ ಲೋಕಾಯುಕ್ತ ಇನ್ಸಪೆಕ್ಟರ್‌ಗಳಾದ ಎನ್.ಎಚ್.ಆಂಜನೇಯ, ಮುಸ್ತಾಕ್ ಅಹಮ್ಮದ್‌, ಬಳ್ಳಾರಿ ಜಿಲ್ಲೆ ಲೋಕಾಯುಕ್ತ ಪೊಲೀಸ್ ಇನ್ಸಪೆಕ್ಟರ್‌ ಸಂಗಮೇಶ ನೇತೃತ್ವದಲ್ಲಿ ಲೋಕಾಯುಕ್ತ ಅಧಿಕಾರಿ, ಸಿಬ್ಬಂದಿ ಒಳಗೊಂಡ ತಂಡಗಳು ವಿವಿಧೆಡೆ ದಾಳಿ ನಡೆಸಿ, ಕೆಪಿಟಿಸಿಎಲ್‌ ಚಿಕ್ಕಮಗಳೂರಿನ ಇಇ ಉಮೇಶ್‌ರ ಸ್ಥಿರ ಮತ್ತು ಚರ ಆಸ್ತಿ ಇತರೆ ಬೆಲೆ ಬಾಳುವ ವಸ್ತುಗಳನ್ನು ಪತ್ತೆ ಮಾಡಿ, ಪರಿಶೀಲನೆ ನಡೆಸಿದ್ದಾರೆ.

ಬೆಸ್ಕಾಂ ವಿಜಿಲೆನ್ಸ್‌ ಎಇಇ ಮನೆಗೂ ದಾಳಿ

ಮತ್ತೊಂದು ಕಡೆ ದಾವಣಗೆರೆ ಬೆಸ್ಕಾಂ ವಿಜಿಲೆನ್ಸ್‌ನ ಎಇಇ ಎಂ.ಎಸ್‌.ಪ್ರಭಾಕರ್‌ಗೆ ಸೇರಿದ ಎಂಸಿಸಿ ಎ ಬ್ಲಾಕ್‌ನ 13ನೇ ಮುಖ್ಯರಸ್ತೆ ನಿವಾಸ, ತರಳಬಾಳು ಬಜಾವಣೆಯಲ್ಲಿರುವ ಮಾವನ ಮನೆ ಹಾಗೂ ಬೆಸ್ಕಾಂ ವಿಜಿಲೆನ್ಸ್ ಕಚೇರಿ ಮೇಲೂ ಲೋಕಾಯುಕ್ತ ಅಧಿಕಾರಿಗಳ ತಂಡವು ಗುರುವಾರ ಬೆಳ್ಳಂ ಬೆಳಗ್ಗೆಯೇ ದಾಳಿ ಮಾಡಿತ್ತು.

ಲೋಕಾಯುಕ್ತ ಡಿವೈಎಸ್ಪಿ ಕೆ.ಕಲಾವತಿ, ಗದಗ ಲೋಕಾಯುಕ್ತ ಇನ್ಸಪೆಕ್ಟರ್‌ ಪುರುಷೋತ್ತಮ ಹಾವೇರಿ ಜಿಲ್ಲೆ ಲೋಕಾಯುಕ್ತ ಡಿವೈಎಸ್ಪಿ ಬಿ.ಪಿ.ಚಂದ್ರಶೇಖರ, ಬಳ್ಳಾರಿ ಲೋಕಾಯುಕ್ತ ಇನ್ಸಪೆಕ್ಟರ್‌ ಮಹಮ್ಮದ್ ರಫೀಕ್ ನೇತೃತ್ವದ ತಂಡಗಳು ಬೆಸ್ಕಾಂ ವಿಜಿಲೆನ್ಸ್‌ನ ಎಇಇ ಎಂ.ಎಸ್.ಪ್ರಭಾಕರ ನಿವಾಸದ ಮೇಲೆ ದಾಳಿ ನಡೆಸಿದೆ.

ಇಬ್ಬರೂ ಅಧಿಕಾರಿಗಳ ನಿವಾಸ, ಕಚೇರಿ, ಉಗ್ರಾಣ, ಮಾವನ ಮನೆ, ಹೊಸ ಮನೆ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳ ತಂಡವು ಸರ್ಕಾರಿ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ತಮ್ಮ ಕಾನೂನುಬದ್ಧ ಮೂಲಗಳ ಆದಾಯಕ್ಕಿಂತ ಹೆಚ್ಚುವರಿಯಾಗಿ ಸ್ಥಿರ ಮತ್ತು ಚರ ಆಸ್ತಿಗಳನ್ನು ಗಳಿಸಿದ್ದ ಖಚಿತ ಬಾತ್ಮಿ ಹಾಗೂ ಗುಪ್ತ ಮಾಹಿತಿ ಮೇರೆಗೆ ಏಕ ಕಾಲಕ್ಕೆ 8 ಕಡೆ ದಾಳಿ ನಡೆಸಿ, ಅಪಾರ ಪ್ರಮಾಣದ ಸ್ಥಿರ ಮತ್ತು ಚರ ಆಸ್ತಿಗಳನ್ನು ಪತ್ತೆ ಮಾಡಿದ್ದಾರೆ. ಗುರುವಾರ ಸಂಜೆಯೂ ಪರಿಶೀಲನೆ ಮುಂದುವರಿಸಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಿದೆ.

ಇಇ ಹೊಸ ಮನೆಯಲ್ಲಿ ಈಜುಕೊಳ!

ಚಿಕ್ಕಮಗಳೂರು ಕೆಪಿಟಿಸಿಎಲ್‌ನ ಇಇ ಡಿ.ಎಚ್‌.ಉಮೇಶ್‌ರ ಮನೆ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳ ತಂಡವು 750 ಗ್ರಾಂ ಚಿನ್ನಾಭರಣ, 21 ಲಕ್ಷ ರು. ನಗದು ಪತ್ತೆ ಮಾಡಿದ್ದಾರೆ. ಇಲ್ಲಿನ ಶಿವಕುಮಾರಸ್ವಾಮಿ ಬಡಾವಣೆಯಲ್ಲಿ ಬೃಹತ್ ಮನೆ ಇದ್ದು, ಆ‍ವರಗೆರೆ ಗ್ರಾಮದಲ್ಲಿ ಈಜುಕೊಳವಿರುವ ನಿರ್ಮಾಣ ಹಂತದ ಮನೆ, ಕರೂರು ಕೈಗಾರಿಕಾ ಪ್ರದೇಶದಲ್ಲಿ ವಿಶಾಲ ನಿವೇಶನದ ಉಗ್ರಾಣ, ಚಿತ್ರದುರ್ಗ ಜಿಲ್ಲೆ ಹೊಸದುರ್ಗದಲ್ಲಿ ಅಪಾರ ಬೆಲೆ ಬಾಳುವ ಕೃಷಿ ಜಮೀನು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.