ಸಮಸ್ಯೆ ಸರಿಪಡಿಸಲು ಲೋಕಾ ಎಸ್ಪಿ ಸೂಚನೆ

| Published : May 14 2025, 02:09 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ತಾಳಿಕೋಟೆ ಪಟ್ಟಣದ ಗಡಿಸೋಮನಾಳ ರಸ್ತೆಯ ಹುಡ್ಕೋ ಬಡಾವಣೆಯಲ್ಲಿ ಸಮಸ್ಯೆಗಳಿಂದ ಅಲ್ಲಿಯ ನಿವಾಸಿಗಳಿಗೆ ತೊಂದರೆಯಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ವಿಜಯಪುರ ಲೋಕಾಯುಕ್ತ ವರಿಷ್ಠಾಧಿಕಾರಿ ಟಿ.ಮಲ್ಲೇಶಿ ಅವರು ಮಂಗಳವಾರ ಹುಡ್ಕೋ ಬಡಾವಣೆಗೆ ಭೇಟಿ ನೀಡಿ ನಿವಾಸಿಗಳ ತೊಂದರೆ ಆಲಿಸಿದರು. ಅಲ್ಲದೇ, ಈ ವೇಳೆ ಸ್ಥಳದಲ್ಲಿಯೇ ಉಪಸ್ಥಿತರಿದ್ದ ಪುರಸಭೆ ಮುಖ್ಯಾಧಿಕಾರಿ ಮೋಹನ್ ಜಾಧವಗೆ ಸಮಸ್ಯೆಗಳನ್ನು ಸರಿಪಡಿಸುವಂತೆ ಸೂಚನೆಯನ್ನು ನೀಡಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಪಟ್ಟಣದ ಗಡಿಸೋಮನಾಳ ರಸ್ತೆಯ ಹುಡ್ಕೋ ಬಡಾವಣೆಯಲ್ಲಿ ಸಮಸ್ಯೆಗಳಿಂದ ಅಲ್ಲಿಯ ನಿವಾಸಿಗಳಿಗೆ ತೊಂದರೆಯಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ವಿಜಯಪುರ ಲೋಕಾಯುಕ್ತ ವರಿಷ್ಠಾಧಿಕಾರಿ ಟಿ.ಮಲ್ಲೇಶಿ ಅವರು ಮಂಗಳವಾರ ಹುಡ್ಕೋ ಬಡಾವಣೆಗೆ ಭೇಟಿ ನೀಡಿ ನಿವಾಸಿಗಳ ತೊಂದರೆ ಆಲಿಸಿದರು. ಅಲ್ಲದೇ, ಈ ವೇಳೆ ಸ್ಥಳದಲ್ಲಿಯೇ ಉಪಸ್ಥಿತರಿದ್ದ ಪುರಸಭೆ ಮುಖ್ಯಾಧಿಕಾರಿ ಮೋಹನ್ ಜಾಧವಗೆ ಸಮಸ್ಯೆಗಳನ್ನು ಸರಿಪಡಿಸುವಂತೆ ಸೂಚನೆಯನ್ನು ನೀಡಿದರು.

ಹುಡ್ಕೋ ಬಡಾವಣೆಯು ಈಗಾಗಲೇ ಪುರಸಭೆಗೆ ಹ್ಯಾಂಡೋವರ್ ಆಗಿದೆ. ಆದರೆ, ಈ ಬಡಾವಣೆಗೆ ಕುಡಿಯುವ ನೀರಿನ ತೊಂದರೆ, ಬೀದಿ ದೀಪ ಸಮಸ್ಯೆ ಮತ್ತು ಮುಳ್ಳು ಕಂಟಿಗಳೆಲ್ಲ ಬೆಳೆದು ನಿಂತಿವೆ. ಅಲ್ಲದೇ, ಬಡಾವಣೆಗೆ ಸಂಬಂಧಿಸಿ ಮನೆಗಳ ಉತ್ತಾರೆಯಲ್ಲಿ ಎ ಖಾತಾ ಬದಲು ಬಿ ಖಾತಾ ನೀಡುತ್ತಿದ್ದಾರೆ. ಇದನ್ನು ಸರಿಪಡಿಸಬೇಕೆಂದು ಸ್ಥಳೀಯರು ಲೋಕಾಯುಕ್ತರಿಗೆ ಮನವಿ ಮಾಡಿದರು. ಈ ವೇಳೆ ಲೋಕಾಯುಕ್ತ ಎಸ್ಪಿ ಟಿ.ಮಲ್ಲೇಶಿ ಅವರು ಸ್ಥಳದಲ್ಲಿಯೇ ಇದ್ದ ಮುಖ್ಯಾಧಿಕಾರಿ ಮೋಹನ್ ಜಾಧವ ವಿಚಾರಿಸಿದಾಗ ಅಧಿಕೃತವಾಗಿ ಹುಡ್ಕೋದವರಿಂದಾಗಲಿ ಅಥವಾ ಪುರಸಭೆಯಲ್ಲಿ ನೋಂದಣಿ ಮಾಡಿದ್ದರೆ ಮಾತ್ರ ಎ ಖಾತಾ ಉತ್ತಾರೆ ಕೊಡಲು ಸೂಚನೆ ಇದೆ. ಇಲ್ಲದಿದ್ದರೆ ಬಿ- ಖಾತಾ ಕೊಡಬೇಕೆಂಬ ನಿರ್ದೇಶನವಿದೆ. ಹೀಗಾಗಿ ಉತ್ತಾರೆಗೆ ಸಂಬಂಧಿಸಿ ತಮ್ಮ ತಮ್ಮ ಜಾಗೆಯ ಅಧಿಕೃತ ನೋಂದಣಿಯ ದಾಖಲೆಗಳನ್ನು ಸಲ್ಲಿಸಿದರೆ ಎ- ಖಾತಾ ಉತ್ತಾರೆ ನೀಡುವದಾಗಿ ತಿಳಿಸಿದರು. ಬಡಾವಣೆಯ ನಾಗರಿಕರು ಎಲ್ಲ ಸರಿಯಾದ ದಾಖಲೆಗಳನ್ನು ಸಲ್ಲಿಸುತ್ತೇವೆ ಎ -ಖಾತಾ ಉತ್ತಾರೆ ನೀಡಬೇಕು ಎಂದು ಒತ್ತಾಯಿಸಿದರು. ಆಗ ಲೋಕಾಯುಕ್ತ ಅಧಿಕಾರಿಗಳು ಜಾಗದ ದಾಖಲಾತಿಗಳ ಬಗ್ಗೆ ಜನರಿಗೆ ಮಾಹಿತಿ ಕೊರತೆ ಇರುತ್ತದೆ. ಅಂತವರಿಗೆ ದಾಖಲೆಗಳ ಬಗ್ಗೆ ಮಾಹಿತಿ ನೀಡಿ ಅವರಿಗೆ ಎ- ಖಾತಾ ಉತ್ತಾರೆ ನೀಡುವಂತೆ ಸೂಚಿಸಿದರು. ಮತ್ತು ಬಡಾವಣೆಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ, ಬೀದಿ ದೀಪಗಳನ್ನು ಸರಿಪಡಿಸಿಸುವಂತೆ ಮುಖ್ಯಾಧಿಕಾರಿಗೆ ತಿಳಿಸಿದರು. ನಂತರ ಪಟ್ಟಣದ ಎಸ್.ಮಾರ್ಟ ಹತ್ತಿರ ಪಕ್ಕದ ರಸ್ತೆಯನ್ನು ವ್ಯಕ್ತಿಯೊಬ್ಬರು ಬಂದ್ ಮಾಡಿದ್ದರ ಕುರಿತು ಪರಿಶೀಲಿಸಿದರಲ್ಲದೇ, ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಯಾರೇ ಕಟ್ಟಡ ಕಟ್ಟಿಕೊಂಡಿದ್ದರೂ ಅವುಗಳನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವಂತೆ ಮುಖ್ಯಾಧಿಕಾರಿಗೆ ಸೂಚಿಸಿದರು.

ದೇವರಹಿಪ್ಪರಗಿ ರಸ್ತೆಯ ಜಾನಕಿ ಹಳ್ಳವನ್ನು ಕೆಲವರು ಒತ್ತುವರಿ ಮಾಡಿಕೊಂಡು ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಲೇಔಟ್ ಮಾಡಿದವರಿಂದಲೇ ಒತ್ತುವರಿಯಾಗಿದೆ ಎಂಬ ದೂರಿನನ್ವಯ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದುಕೊಂಡು, ಈ ಕುರಿತು ಶೀಘ್ರ ಕ್ರಮ ಕೈಕೊಳ್ಳುವುದಾಗಿ ತಿಳಿಸಿದರು.

ಈ ಸಮಯದಲ್ಲಿ ಲೋಕಾಯುಕ್ತ ಡಿಎಸ್‌ಪಿ ಸಿಪಿಐ ಆನಂದ ಟಕ್ಕಣ್ಣವರ, ಪುರಸಭೆ ಸದಸ್ಯ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಹುಡ್ಕೋ ಬಡಾವಣೆಯ ನಿವಾಸಿಗಳಾದ ಚಿಂತಪ್ಪಗೌಡ ಯಾಳಗಿ, ಬಸನಗೌಡ ಕೋಳ್ಯಾಳ, ಸಂಭಾಜಿ ವಾಡಕರ, ಬಂಡು ದಾಯಪುಲೆ, ಬಿ.ಎನ್.ಹಿಪ್ಪರಗಿ, ಮುರುಗೇಶ ಕಡಕೋಳ, ಸಿದ್ದನಗೌಡ ಪಾಟೀಲ ನಾವದಗಿ, ವೀರೇಶ ಕೋರಿ, ಪುರಸಭೆ ಸಿಬ್ಬಂದಿ ಇದ್ದರು.