ಲೋಕಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ ಶೀಘ್ರ ಮೇಲ್ದರ್ಜೆಗೆ: ಸಚಿವ ಗುಂಡೂರಾವ್

| Published : Jun 28 2024, 12:55 AM IST

ಲೋಕಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ ಶೀಘ್ರ ಮೇಲ್ದರ್ಜೆಗೆ: ಸಚಿವ ಗುಂಡೂರಾವ್
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಾಪುರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಆರೋಗ್ಯ ಸಚಿವ ದಿನೇಶ ಗುಂಡೂರಾವ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ಲೋಕಾಪುರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಆರೋಗ್ಯ ಸಚಿವ ದಿನೇಶ ಗುಂಡೂರಾವ್‌ ಹೇಳಿದರು.

ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೋಗ್ಯ ಕೇಂದ್ರಕ್ಕೆ ಬಂದ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ, ಆರೋಗ್ಯ ಕೇಂದ್ರದ ಸ್ವಚ್ಛತೆ, ಬಾಣಂತಿಯರಿಗೆ ಉತ್ತಮ ಚಿಕಿತ್ಸೆ ನೀಡಬೇಕು, ಆರೋಗ್ಯ ಕೇಂದ್ರ ಜಾಗೆಯ ವಿವಾದ ಬಗೆಹರಿಸಿಕೊಂಡು ಸರ್ವೆ ನಡೆಸಿ ಸುತ್ತಲೂ ತಂತಿ ಬೇಲಿ ನಿರ್ಮಿಸಲು ಸೂಚಿಸಿದರು.

ಸಾರ್ವಜನಿಕರು ಸಚಿವರ ಮುಂದೆ ಪ್ರಾಥಮಿಕ ಕೇಂದ್ರದ ಸಮಸ್ಯೆಯ ಬಗ್ಗೆ ವಿವರಿಸಿ, ಲೋಕಾಪುರ ಪಟ್ಟಣ ಹಾಗೂ ಸುತ್ತಮುತ್ತಲಿನ ೫೦ ಸಾವಿರ ಜನರು ಈ ಪ್ರಾಥಮಿಕ ಆರೋಗ್ಯ ಕೇಂದ್ರ ಅವಲಂಭಿಸಿದ್ದಾರೆ. ದಿನ ನಿತ್ಯ ೨೦೦-೩೦೦ ಹೊರ ರೋಗಿಗಳು ಚಿಕಿತ್ಸೆ ಪಡೆಯಲು ಬರುತ್ತಾರೆ. ಹೆದ್ದಾರಿ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತಗಳು ಆಗುತ್ತವೆ. ಆರೋಗ್ಯ ಕೇಂದ್ರ ಮೇಲೆ ಹೆಚ್ಚಿನ ಒತ್ತಡವಿದ್ದು, ಕಾಯಂ ನುರಿತ ಎಂಬಿಬಿಎಸ್ ವೈದ್ಯಾಧಿಕಾರಿ, ನುರಿತ ಪ್ರಸೂತಿ ತಜ್ಞರು ಇಲ್ಲದ್ದರಿಂದ ಮುಧೋಳ ಅಥವಾ ಬಾಗಲಕೋಟೆಗೆ ಹೋಗುವ ಪರಿಸ್ಥಿತಿ ಬಂದಿದೆ ಎಂದು ಅಳಲು ತೊಡಿಕೊಂಡರು.

ಸ್ಥಳದಲ್ಲೇ ಇದ್ದ ಡಿಎಚ್‌ಒ ಡಾ. ಜಯಶ್ರೀ ಎಮ್ಮಿಯವರಿಗೆ ಲೋಕಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ೨೪ ತಾಸು ಕಾರ್ಯನಿರ್ವಹಿಸಲು ಕಾಯಂ ಎಂಬಿಬಿಎಸ್ ವೈದ್ಯರನ್ನು ನಿಯೋಜಿಸಲು ಸೂಚಿಸಿದರು.

ಜಿಲ್ಲಾ ಬಿಡಿಸಿಸಿ ಬ್ಯಾಂಕ ಮಾಜಿ ಉಪಾಧ್ಯಕ್ಷ ಶಿವಾನಂದ ಉದಪುಡಿ ಮಾತನಾಡಿ, ಒಬ್ಬರು ಆಯುಷ್ಯ ವೈದ್ಯಾಧಿಕಾರಿಗಳಿಂದ ಮಾತ್ರ ಪ್ರಾಥಮಿಕ ಕೇಂದ್ರ ನಡೆಯುತ್ತಿದ್ದು, ಸಾರ್ವಜನಿಕರಿಗೆ ಬಹಳ ತೊಂದರೆ ಆಗಿದೆ. ಆದಷ್ಟು ಬೇಗ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಲು ಮಾಡಲು ಮನವಿ ಮಾಡಿದರು.

ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷಾ ಗುಪ್ತಾ, ಡಿಡಿ ಡಾ.ಅನಂತ ದೇಸಾಯಿ, ಎಂಡಿಟಿಎಚ್‌ಎ ಡಾ.ನವೀನ ಭಟ್, ವಿಭಾಗೀಯ ನಿರ್ದೇಶಕ ಡಾ.ಶಶಿಕಾಂತ ಮುನ್ಯಾಳ, ಜಿಲ್ಲಾ ಆರೋಗ್ಯಧಿಕಾರಿ ಡಾ.ಜಯಶ್ರೀ ಯಮ್ಮಿ, ತಾಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ ಮಲಘಾಣ, ಡಾ.ಸುನೀಲ ಬೆನ್ನೂರ, ಡಾ.ವಿನಯ ಕುಲಕರ್ಣಿ, ಜಿಲ್ಲೆಯ ಆರೋಗ್ಯ ಇಲಾಖೆಯ ಕಾರ್ಯಕ್ರಮಗಳ ಅನುಷ್ಠಾನ ಅಧಿಕಾರಿಗಳು, ಮುಖಂಡರಾದ ಲೋಕಣ್ಣಾ ಕೊಪ್ಪದ, ಆನಂದ ಹಿರೇಮಠ, ಗೋಪಾಲಗೌಡ ಪಾಟೀಲ, ಮುತ್ತಪ್ಪ ಚೌಧರಿ, ಭೀಮನಗೌಡ ಪಾಟೀಲ, ಕೆ.ಕೆ. ಭಾಗವಾನ, ಕುಮಾರ ಕಾಳಮ್ಮನವರ, ಶಬ್ಬೀರ್‌ ಭಾಗವಾನ, ಲೋಕಣ್ಣ ಉಳ್ಳಾಗಡ್ಡಿ, ಶಿವಾನಂದ ದಂಡಿನ, ಮಾನಿಂಗಪ್ಪ ಹುಂಡೇಕಾರ ಇತರರು ಇದ್ದರು.

ಭ್ರೂಣಹತ್ಯೆ ಕುರಿತು ಜಾಗೃತಿ

ಭ್ರೂಣ ಹತ್ಯೆಗಳು ಸಾಮಾಜಿಕ ಪಿಡುಗಾಗಿದ್ದು, ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದ ಭ್ರೂಣ ಹತ್ಯೆಗಳ ಬಗ್ಗೆ ತನಿಖೆ ನಡೆಸಿ ಅಪರಾಧಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು. ಇಲಾಖೆ ವತಿಯಿಂದ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುವುದು, ಬಾಗಲಕೋಟೆಯಲ್ಲಿ ನಡೆಯುವ ಸಭೆಯಲ್ಲಿ ಈ ವಿಷಯ ಕುರಿತು ಸಮಗ್ರವಾಗಿ ಚರ್ಚಿಸಲಾಗುವುದು. ಗರ್ಭಪಾತದಿಂದ ಮಹಿಳೆ ಸಾವಿಗೀಡಾದ ಪ್ರಕರಣದಲ್ಲಿ ಆರೋಗ್ಯ ಮತ್ತು ಪೊಲೀಸ್‌ ಇಲಾಖೆಯವರು ಕ್ರಮ ಜರುಗಿಸಿದ್ದಾರೆ ಎಂದು ಸಚಿವ ದಿನೇಶ ಗುಂಡೂರಾವ್‌ ತಿಳಿಸಿದರು.