ಸಾರಾಂಶ
ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲಾ 28 ಸ್ಥಾನಗಳಲ್ಲಿಯೂ ಬಿಜೆಪಿ ಜಯಗಳಿಸುವುದು ಖಚಿತ ಎಂದು ವಿಧಾನ ಪರಿಷತ್ ಸದಸ್ಯ ಡಾ.ವೈ.ಎ.ನಾರಾಯಣಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಬಾಗೇಪಲ್ಲಿ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲಾ 28 ಸ್ಥಾನಗಳಲ್ಲಿಯೂ ಬಿಜೆಪಿ ಜಯಗಳಿಸುವುದು ಖಚಿತ ಎಂದು ವಿಧಾನ ಪರಿಷತ್ ಸದಸ್ಯ ಡಾ.ವೈ.ಎ.ನಾರಾಯಣಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಯಾವ ಗ್ಯಾರಂಟಿಯೂ ಕೆಲಸ ಮಾಡುವುದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪಿಯು ಇಲಾಖೆಯನ್ನು ಜಿಪಂ ವ್ಯಾಪ್ತಿಗೆ ತಂದಿರುವುದನ್ನು ತೀವ್ರವಾಗಿ ಖಂಡಿಸುತ್ತೇನೆ. ಉತ್ತಮವಾಗಿ ನಡೆಯುತ್ತಿರುವ ಪಿಯು ಇಲಾಖೆಯನ್ನು ಏಕಾಏಕಿ ಜಾರಿಗೆ ತಂದಿರುವ ಸುತ್ತೋಲೆಯನ್ನು ತಕ್ಷಣ ವಾಪಸ್ಸು ಪಡೆಯಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.ಬಿಜೆಪಿ ಸರ್ಕಾರದ ಎನ್ಇಪಿ ಪದ್ದತಿಯನ್ನು ನಿರ್ಲಕ್ಷಿಸಿ ನಮ್ಮದೇ ಪ್ರತ್ಯೇಕ ಶಿಕ್ಷಣ ಪದ್ದತಿ ಜಾರಿಗೆ ತರುತ್ತೇವೆ ಎಂದು ದುರಹಂಕಾರದ ಪರಮಾವಧಿಯನ್ನು ಪ್ರದರ್ಶಿಸುತ್ತಿರುವ ರಾಜ್ಯ ಸರ್ಕಾರದ ಕ್ರಮ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವಂತಿದೆ. ಈ ಸಂಬಂಧ ಗುಜರಾತ್ ರಾಜಸ್ಥಾನದಿಂದ ಶಿಕ್ಷಣ ತಜ್ಞರನ್ನು ಕರೆತಂದಿರುವುದು ನಾಚಿಕೆಗೇಡಿನ ವಿಚಾರವಾಗಿದೆ. ಅಲ್ಲದೆ ನಕ್ಸಲಿಯರು, ಸಮಾಜದ್ರೋಹಿ ಶಕ್ತಿಗಳ ಜೊತೆ ಸಂಪರ್ಕ ಇಟ್ಟುಕೊಂಡಿದ್ದವರು ಸಮಿತಿಯಲ್ಲಿ ಇದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಶಿಕ್ಷಣ ಕ್ಷೇತ್ರವನ್ನು ದೊಡ್ಡ ಪ್ರಮಾಣದಲ್ಲಿ ಕಲುಷಿತಗೊಳಿಸುವ ಹಾಗೂ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. 24 ಗಂಟೆಗಳಲ್ಲಿ ಎನ್.ಪಿ.ಎಸ್ ತೆಗೆದು ಓಪಿಎಸ್ ಕೊಡ್ತೀವಿ ಎಂದಿದ್ದವರಿಗೆ 6 ತಿಂಗಳಾದರೂ ಆಗಲಿಲ್ಲ. 5 ಗ್ಯಾರಂಟಿಗಳು ಅರೆಬೆಂದ ಗ್ಯಾರಂಟಿಗಳು. ಒಂದೇ ಒಂದು ಕಾಳು ಅಕ್ಕಿ ಕೊಡಕ್ಕೆ ಆಗಲಿಲ್ಲ. 5 ಕೆಜಿ ಅಕ್ಕಿ ಬಿಜೆಪಿ ಕೇಂದ್ರ ಸರ್ಕಾರ ಕೊಡುತ್ತಿದೆ. 200 ಯೂನಿಟ್ ಕರೆಂಟ್ ಎಲ್ಲಿದೆ, ಎಷ್ಟು ಜನ ಗೃಹಲಕ್ಷ್ಮಿಯರಿಗೆ 2 ಸಾವಿರ ಹಣ ಕೊಟ್ಟಿದ್ದೀರಿ. ಕಾಂಗ್ರೆಸ್ ಸರ್ಕಾರದ ಬಹುತೇಕ ಎಲ್ಲಾ ಗ್ಯಾರಂಟಿಗಳೆಲ್ಲಾ ಠುಸ್ ಆಗಿವೆ. ಬಿಜೆಪಿ ಸರ್ಕಾರದ ಕಾರ್ಯಕ್ರಮಗಳನ್ನು ನಮ್ಮದೇ ಎಂದು ಹೇಳಿಕೊಳ್ಳುವ ದುಸ್ಥಿತಿಗೆ ತಲುಪುವ ಮೂಲಕ ಶಿಕ್ಷಕರು ಸೇರಿದಂತೆ ಸರ್ಕಾರಿ ನೌಕರರಿಗೆ ಮೋಸ ಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಜೂನ್ ತಿಂಗಳಲ್ಲಿ ನಡೆಯುವ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಈಗಾಗಲೇ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ನನ್ನ ಬಳಗದ ಎಲ್ಲಾ ಸದಸ್ಯರು ನನ್ನ ಜೊತೆಗಿದ್ದಾರೆ. ಬಿ.ವೈ.ವಿಜಯೇಂದ್ರ ರವನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಹಾಗೂ ವಿಪಕ್ಷ ನಾಯಕರನ್ನಾಗಿ ಆರ್. ಅಶೋಕ್ ರವರನ್ನು ಆಯ್ಕೆ ಮಾಡಿರುವ ಕೇಂದ್ರ ಮತ್ತು ರಾಜ್ಯ ಬಿಜೆಪಿ ನಾಯಕರಿಗೆ ಧನ್ಯವಾದಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕರ ಸಂಘಗಳ ಮುಖಂಡರಾದ ಆರ್.ಹನುಮಂತರೆಡ್ಡಿ, ಬಾಲರಾಜು, ರಾಜಾರೆಡ್ಡಿ, ವೆಂಕಟರವಣಪ್ಪ, ಸಿ.ವೆಂಕಟರಾಯಪ್ಪ, ಬೈಯಾರೆಡ್ಡಿ, ನಾಗಮಲ್ಲರೆಡ್ಡಿ, ಜಿ.ಆರ್.ರಮೇಶ್, ನಟರಾಜ್, ಕೃಷ್ಣಾರೆಡ್ಡಿ, ಅಮೀರ್ ಜಾನ್, ಬಿ.ಎಸ್.ನಾಗಭೂಷಣ, ಪಿ.ಎನ್.ಶಿವಣ್ಣ, ಬಿ.ವಿ.ಕಿಶೋರ್ ಕುಮಾರ್ ಮತ್ತಿತರರು ಇದ್ದರು.