ಅಬಕಾರಿ ಕಚೇರಿ ಮೇಲೆ ಲೋಕಾಯುಕ್ತ ದಾಳಿ
KannadaprabhaNewsNetwork | Published : Oct 20 2023, 01:01 AM IST
ಅಬಕಾರಿ ಕಚೇರಿ ಮೇಲೆ ಲೋಕಾಯುಕ್ತ ದಾಳಿ
ಸಾರಾಂಶ
ಕನಕಪುರ: ಪ್ರಕರಣವೊಂದರಲ್ಲಿ ವ್ಯಕ್ತಿಯ ಹೆಸರು ಕೈ ಬಿಡುವುದಕ್ಕಾಗಿ ₹15 ಸಾವಿರ ಲಂಚ ಪಡೆಯುತ್ತಿದ್ದ ಅಬಕಾರಿ ಇಲಾಖೆಯ ಇನ್‌ಸ್ಪೆಕ್ಟರ್ ಹಾಗೂ ಇಬ್ಬರು ಕಾನ್‌ಸ್ಟೆಬಲ್‌ಗಳು ಗುರುವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಇನ್‌ಸ್ಪೆಕ್ಟರ್ ಮಂಜುನಾಥ್, ಕಾನ್‌ಸ್ಟೆಬಲ್‌ಗಳಾದ ಮಾರುತಿ, ರವಿ ಹಾಗೂ ಹಣ ಪಡೆದ ಖಾಸಗಿ ವ್ಯಕ್ತಿ ಬಾಲಾಜಿ ಎಂಬಾತನನ್ನು ಬಂಧಿಸಲಾಗಿದೆ.
ಕನಕಪುರ: ಪ್ರಕರಣವೊಂದರಲ್ಲಿ ವ್ಯಕ್ತಿಯ ಹೆಸರು ಕೈ ಬಿಡುವುದಕ್ಕಾಗಿ ₹15 ಸಾವಿರ ಲಂಚ ಪಡೆಯುತ್ತಿದ್ದ ಅಬಕಾರಿ ಇಲಾಖೆಯ ಇನ್‌ಸ್ಪೆಕ್ಟರ್ ಹಾಗೂ ಇಬ್ಬರು ಕಾನ್‌ಸ್ಟೆಬಲ್‌ಗಳು ಗುರುವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಇನ್‌ಸ್ಪೆಕ್ಟರ್ ಮಂಜುನಾಥ್, ಕಾನ್‌ಸ್ಟೆಬಲ್‌ಗಳಾದ ಮಾರುತಿ, ರವಿ ಹಾಗೂ ಹಣ ಪಡೆದ ಖಾಸಗಿ ವ್ಯಕ್ತಿ ಬಾಲಾಜಿ ಎಂಬಾತನನ್ನು ಬಂಧಿಸಲಾಗಿದೆ. ಲಂಚಕ್ಕೆ ಬೇಡಿಕೆ ಇಟ್ಟಿದ್ದರ ಕುರಿತು ತಾಲೂಕಿನ ಜಕ್ಕೇಗೌಡನದೊಡ್ಡಿ ಗ್ರಾಮದ ವರದರಾಜು ದೂರು ಕೊಟ್ಟಿದ್ದರು. ವರದರಾಜು ಅವರು ಗ್ರಾಮದಲ್ಲಿದ್ದ ತಮ್ಮ ಕಿರಾಣಿ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಮಾಹಿತಿ ಮೇರೆಗೆ, ಇನ್‌ಸ್ಪೆಕ್ಟರ್ ಮಂಜುನಾಥ್ ದಾಳಿ ನಡೆಸಿ ಮಾಲು ಸಮೇತ ಹಿಡಿದಿದ್ದರು. ಪ್ರಕರಣದಲ್ಲಿ ವರದರಾಜ್ ಜೈಲಿಗೆ ಹೋಗಿ ಬಂದಿದ್ದರು. ಜಾಮೀನಿನ ಮೇಲೆ ಹೊರಬಂದಿದ್ದ ವರದರಾಜ್ ಅವರನ್ನು ಮತ್ತೆ ಸಂಪರ್ಕಿಸಿದ್ದ ಮಂಜುನಾಥ್, ‘ನಿನ್ನ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ನಿಮ್ಮ ತಂದೆ ಹೆಸರು ಸೇರಿಸಬಾರದೆಂದರೆ ನಮಗೆ ₹50 ಸಾವಿರ ಕೊಡಬೇಕು’ ಎಂದು ಒತ್ತಾಯಿಸಿದ್ದರು. ‘ಅಷ್ಟು ಮೊತ್ತ ನನ್ನ ಬಳಿ ಇಲ್ಲ’ ಎಂದು ವರದರಾಜು ಹೇಳಿದಾಗ, ₹25 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ಅದಕ್ಕೂ ಒಪ್ಪದಿದ್ದಾಗ, ಅಂತಿಮವಾಗಿ ₹15 ಸಾವಿರ ತಂದು ಕೊಡುವಂತೆ ಸೂಚಿಸಿದ್ದರು. ಈ ಕುರಿತು ವರದರಾಜ್ ಅವರು ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದರು. ಬುಧವಾರ ಮತ್ತೆ ಕರೆ ಮಾಡಿದ್ದ ಮಂಜುನಾಥ್, ಹಣವನ್ನು ನೇರವಾಗಿ ಕಚೇರಿಗೆ ತಂದು ಕೊಡದೆ, ಕಚೇರಿ ಎದುರಿಗೆ ಬೇಕರಿ ಇಟ್ಟುಕೊಂಡಿರುವ ಬಾಲಾಜಿ ಎಂಬ ಯುವಕನ ಕೈಗೆ ಕೊಡುವಂತೆ ಸೂಚಿಸಿದ್ದರು. ಈ ಕುರಿತು ಮೊದಲೇ ಮಾಹಿತಿ ಪಡೆದಿದ್ದ ಲೋಕಾಯುಕ್ತ ಪೊಲೀಸರು ಡಿವೈಎಸ್‌ಪಿ ಗೌತಮ್ ಹಾಗೂ ಇನ್‌ಸ್ಪೆಕ್ಟರ್ ಲಕ್ಷ್ಮಣ್ ಅವರ ನೇತೃತ್ವದಲ್ಲಿ, ಮಧ್ಯಾಹ್ನ 12ರ ಸುಮಾರಿಗೆ ವರದರಾಜು ಅವರಿಂದ ಹಣ ಪಡೆಯುತ್ತಿದ್ದ ಬೇಕರಿ ಯುವಕನನ್ನು ವಶಕ್ಕೆ ಪಡೆದರು. ಯುವಕನನ್ನು ವಿಚಾರಣೆ ನಡೆಸಿದಾಗ ಇನ್‌ಸ್ಪೆಕ್ಟರ್ ಮಂಜುನಾಥ್ ಸೂಚನೆ ಮೇರೆಗೆ ಹಣ ಪಡೆದಿದ್ದಾಗಿ ತಿಳಿಸಿದ. ಕೃತ್ಯದಲ್ಲಿ ಕಾನ್‌ಸ್ಟೆಬಲ್‌ಗಳಾದ ಮಾರುತಿ ಮತ್ತು ರವಿ ಕೂಡ ಭಾಗಿಯಾಗಿರುವುದು ಗೊತ್ತಾಗಿದ್ದರಿಂದ, ಅವರನ್ನು ಸಹ ಬಂಧಿಸಲಾಯಿತು. ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮತ್ತಷ್ಟು ತನಿಖೆ ನಡೆಸಲಾಗುತ್ತಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದರು. ಕೆ ಕೆ ಪಿ ಸುದ್ದಿ 05: ಅಕ್ರಮ ಮದ್ಯ ಮಾರಾಟ ಪ್ರಕರಣದಲ್ಲಿ ಲಂಚದ ಹಣ ಪಡೆಯುವಾಗ ಅಬಕಾರಿ ಅಧಿಕಾರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು.