ಮಿಮ್ಸ್ ಔಷಧ ಉಗ್ರಾಣದ ಮೇಲೆ ಲೋಕಾಯುಕ್ತ ದಾಳಿ

| Published : Aug 15 2024, 01:53 AM IST

ಸಾರಾಂಶ

ಬರೋಬ್ಬರಿ ೪೦ ಲಕ್ಷ ರು. ಮೌಲ್ಯದ ರೆಮ್ಡಿಸಿವರ್ ಇಂಜೆಕ್ಷನ್ ಅವಧಿ ೨೦೨೨ರಲ್ಲಿಯೇ ಮುಕ್ತಾಯವಾಗಿದೆ. ಕೇವಲ ರೆಮ್ಡಿಸಿವರ್ ಮಾತ್ರವಲ್ಲದೇ ಬೇರೆ ಬೇರೆ ರೋಗಗಳಿಗೆ ನೀಡುವ ಔಷಧ, ಮಾತ್ರೆ, ಇಂಜೆಕ್ಷನ್ ಅವಧಿಯೂ ಮುಕ್ತಾಯವಾಗಿರುವುದು ಬಹಿರಂಗವಾಗಿದೆ. ಇದರಿಂದ ಲಕ್ಷಾಂತರ ರುಪಾಯಿ ಸರ್ಕಾರಕ್ಕೆ ನಷ್ಟ ಉಂಟಾಗಿದೆ ಎಂದು ತಿಳಿದು ಬಂದಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ಮಿಮ್ಸ್ (ಜಿಲ್ಲಾಸ್ಪತ್ರೆ)ನ ಔಷಧ ಉಗ್ರಾಣದ ಮೇಲೆ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಸುಮಾರು ೪೦ ಲಕ್ಷ ರು. ಮೌಲ್ಯದ ಅವಧಿ ಮುಗಿದಿರುವ ರೆಮ್ಡಿಸಿವರ್ ಮೆಡಿಸನ್ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.

ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಅವಧಿಗೆ ಮೀರಿನ ಲಕ್ಷಾಂತರ ರುಪಾಯಿಯ ಔಷಧಗಳ ದಾಸ್ತಾನಿದ್ದು, ಅಧಿಕಾರಿಗಳು ಏಜೆನ್ಸಿಯವರೊಂದಿಗೆ ಮೆಡಿಕಲ್ ಮಾಫಿಯಾದಲ್ಲಿ ಶಾಮೀಲಾಗಿ ಸರ್ಕಾರಕ್ಕೆ ಲಕ್ಷಾಂತರ ರು. ನಷ್ಟ ಮಾಡುತ್ತಿದ್ದಾರೆ ಎಂದು ಆರ್‌ಟಿಐ ಕಾರ್ಯಕರ್ತರೊಬ್ಬರು ದೂರು ನೀಡಿದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧೀಕ್ಷಕ ಸುರೇಶ್ ಬಾಬು ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು.

ದಾಳಿ ಸಮಯದಲ್ಲಿ ಪ್ರಮುಖವಾಗಿ ಕೊರೋನಾ ಕಾಲದಲ್ಲಿ ಬಹು ಬೇಡಿಕೆ ಇದ್ದ ರೆಮ್ಡಿಸಿವರ್ ಇಂಜೆಕ್ಷನ್ ಅವಧಿ ಮುಗಿದಿರುವುದು ಕಂಡುಬಂದಿದೆ. ಬರೋಬ್ಬರಿ ೪೦ ಲಕ್ಷ ರು. ಮೌಲ್ಯದ ರೆಮ್ಡಿಸಿವರ್ ಇಂಜೆಕ್ಷನ್ ಅವಧಿ ೨೦೨೨ರಲ್ಲಿಯೇ ಮುಕ್ತಾಯವಾಗಿದೆ. ಕೇವಲ ರೆಮ್ಡಿಸಿವರ್ ಮಾತ್ರವಲ್ಲದೇ ಬೇರೆ ಬೇರೆ ರೋಗಗಳಿಗೆ ನೀಡುವ ಔಷಧ, ಮಾತ್ರೆ, ಇಂಜೆಕ್ಷನ್ ಅವಧಿಯೂ ಮುಕ್ತಾಯವಾಗಿರುವುದು ಬಹಿರಂಗವಾಗಿದೆ. ಇದರಿಂದ ಲಕ್ಷಾಂತರ ರುಪಾಯಿ ಸರ್ಕಾರಕ್ಕೆ ನಷ್ಟ ಉಂಟಾಗಿದೆ ಎಂದು ತಿಳಿದು ಬಂದಿದೆ.

ಔಷಧ ಪೂರೈಸುವ ಏಜೆನ್ಸಿಗಳು ಮಂಡ್ಯದ ಮಿಮ್ಸ್ ಸೇರಿದಂತೆ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಔಷಧ, ಇಂಜೆಕ್ಷನ್, ಮಾತ್ರೆಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ಸರಬರಾಜು ಮಾಡುತ್ತವೆ. ಈ ಸರಬರಾಜು ಆದ ಮೆಡಿಸನ್‌ಗಳ ಅವಧಿ ಮುಕ್ತಾಯದ ಎರಡು ಅಥವಾ ಮೂರು ತಿಂಗಳ ಮುಂಚೆಯೇ ಆಯಾ ಏಜೆನ್ಸಿಗಳಿಗೆ ಔಷಧ ವಾಪಸ್ ನೀಡಿದರೆ ಅವರು ಹೊಸ ಔಷಧ ನೀಡುತ್ತಾರೆ. ಇದರಿಂದ ಯಾವುದೇ ಹಣ ವ್ಯಯವಾಗುವುದಿಲ್ಲ. ಆದರೆ, ಮಿಮ್ಸ್‌ನ ಕೆಲವು ಅಧಿಕಾರಿಗಳು ಏಜೆನ್ಸಿಯವರೊಂದಿಗೆ ಒಪ್ಪಂದ ಮಾಡಿಕೊಂಡು ಔಷಧಗಳ ಅವಧಿ ಮುಗಿಯುವವರೆಗೆ ತಮ್ಮಲ್ಲೇ ಇಟ್ಟುಕೊಂಡು ಸರ್ಕಾರಕ್ಕೆ ನಷ್ಟ ಉಂಟುಮಾಡಿದ್ದು, ಏಜೆನ್ಸಿಗಳಿಂದಲೂ ಲಾಭ ಪಡೆದಿದ್ದಾರೆಂಬ ದೂರು ಕೇಳಿ ಬರುತ್ತಿದೆ.