ಲೋಕಾಯುಕ್ತ ಗಾಳಕ್ಕೆ ಪಾಲಿಕೆ ಎಸ್‌ಡಿಎ, ಕಂದಾಯ ಅಧಿಕಾರಿ

| Published : Jun 21 2024, 01:00 AM IST

ಲೋಕಾಯುಕ್ತ ಗಾಳಕ್ಕೆ ಪಾಲಿಕೆ ಎಸ್‌ಡಿಎ, ಕಂದಾಯ ಅಧಿಕಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಹಿಟ್ಟಿನ ಗಿರಣಿಯ ಇ-ಸ್ವತ್ತು ಮಾಡಿಕೊಡಲು ₹15 ಸಾವಿರ ಲಂಚ ಪಡೆಯುತ್ತಿದ್ದ ನಗರ ಪಾಲಿಕೆ-1ರ ವಲಯ ಕಚೇರಿಯ ಎಸ್‌ಡಿಎ ಹಾಗೂ ಕಂದಾಯ ಅಧಿಕಾರಿ (ಪ್ರಭಾರ) ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಗರದಲ್ಲಿ ಗುರುವಾರ ನಡೆದಿದೆ.

- ವೈ.ಲಕ್ಕಪ್ಪ, ಬಿ.ಅನ್ನಪೂರ್ಣ ಬಂಧಿತ ಆರೋಪಿಗಳು

- ಇ-ಸ್ವತ್ತು ಮಾಡಿಕೊಡಲು ₹15 ಸಾವಿರ ಲಂಚಕ್ಕೆ ಬೇಡಿಕೆ - ಇನ್ನೂ ₹10 ಸಾವಿರ ಹೆಚ್ಚುವರಿಯಾಗಿ ನೀಡುವಂತೆ ಕೇಳಿದ ಮಹಿಳಾ ಅಧಿಕಾರಿ - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಹಿಟ್ಟಿನ ಗಿರಣಿಯ ಇ-ಸ್ವತ್ತು ಮಾಡಿಕೊಡಲು ₹15 ಸಾವಿರ ಲಂಚ ಪಡೆಯುತ್ತಿದ್ದ ನಗರ ಪಾಲಿಕೆ-1ರ ವಲಯ ಕಚೇರಿಯ ಎಸ್‌ಡಿಎ ಹಾಗೂ ಕಂದಾಯ ಅಧಿಕಾರಿ (ಪ್ರಭಾರ) ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಗರದಲ್ಲಿ ಗುರುವಾರ ನಡೆದಿದೆ.

ಮಹಾನಗರ ಪಾಲಿಕೆ- ವಲಯ-1ರ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ವೈ.ಲಕ್ಕಪ್ಪ ಹಾಗೂ ಪ್ರಭಾರ ಕಂದಾಯ ಅಧಿಕಾರಿ ಬಿ.ಅನ್ನಪೂರ್ಣ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದ ಆರೋಪಿಗಳು.

ಬೇತೂರು ರಸ್ತೆಯ ಇಮಾಂ ನಗರ ವಾಸಿ, ಹಿಟ್ಟಿನ ಗಿರಣಿ ಮಾಲೀಕ ಬಿ.ಚಂದ್ರಶೇಖರ ತಮ್ಮ ಗಿರಣಿ, ವಾಸದ ಮನೆ, ಖಾಲಿ ಜಾಗದ ಅಳತೆ ತಿದ್ದುಪಡಿ ಮತ್ತು ಇ-ಸ್ವತ್ತು ಮಾಡಿಸಲು ಪಾಲಿಕೆ ವಲಯ-1 ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಇ-ಸ್ವತ್ತು ಮಾಡಿಕೊಡಲು ಎಸ್‌ಡಿಎ ಲಕ್ಕಪ್ಪ ₹15 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಲಂಚ ಕೊಡಲು ಒಪ್ಪದ ಜಾಗದ ಮಾಲೀಕ ಚಂದ್ರಶೇಖರ ಲೋಕಾಯುಕ್ತ ಪೊಲೀಸ್‌ ಇಲಾಖೆಗೆ ದೂರು ನೀಡಿದ್ದರು.

ಪಿರ್ಯಾದಿ ಚಂದ್ರಶೇಖರರಿಂದ ಪಾಲಿಕೆ ಎಸ್‌ಡಿಎ ಲಕ್ಕಪ್ಪ ₹15 ಸಾವಿರ ಹಣ ಸ್ವೀಕರಿಸುವಾಗ 2ನೇ ಆರೋಪಿಯಾದ ಪ್ರಭಾರ ಕಂದಾಯ ಅಧಿಕಾರಿ ಬಿ.ಅನ್ನಪೂರ್ಣ ₹15 ಸಾವಿರ ಕಡಿಮೆಯಾಗುತ್ತದೆ, ಆದ್ದರಿಂದ ₹25 ಸಾವಿರ ಕೊಡುವಂತೆ ಲಂಚದ ಹಣಕ್ಕೆ ಬೇಡಿಕೆ ಇಟ್ಟರು. ಲೋಕಾಯುಕ್ತರ ಟ್ರ್ಯಾಪ್‌ ಕಾರ್ಯಾಚರಣೆಯಲ್ಲಿ ಇಬ್ಬರನ್ನೂ ಹಣದ ಸಮೇತ ಬಂಧಿಸಿ, ಮುಂದಿನ ಕ್ರಮ ಕೈಗೊಳ್ಳಲಾಗಿದೆ.

ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್. ಕೌಲಾಪೂರೆ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಕಲಾವತಿ, ನಿರೀಕ್ಷಕರಾದ ಸಿ.ಮಧುಸೂದನ್‌, ಎಚ್.ಎಸ್. ರಾಷ್ಟ್ರಪತಿ, ಪ್ರಭು ಬಿ.ಸೂರಿನ, ಸಿಬ್ಬಂದಿ ಆಂಜನೇಯ, ಸುಂದರೇಶ, ಮಹಿಳಾ ಎಚ್‌ಸಿ ಆಶಾ, ಸಿಪಿಸಿ ಸಿಬ್ಬಂದಿ ಮಲ್ಲಿಕಾರ್ಜುನ, ಲಿಂಗೇಶ, ಧನರಾಜ, ಮಂಜುನಾಥ, ಗಿರೀಶ, ಬಸವರಾಜ, ಜಂಷಿದಾ ಖಾನಂ, ಚಾಲಕರಾದ ಕೋಟಿನಾಯ್ಕ, ಬಸವರಾಜ, ಮೋಹನ, ಕೃಷ್ಣನಾಯ್ಕ, ವಿನಾಯಕ ಕಟಿಗೇರ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

- - - -21ಕೆಡಿವಿಜಿ7: ವೈ.ಲಕ್ಕಪ್ಪ, ಪಾಲಿಕೆಯ ಎಸ್‌ಡಿಎ

-21ಕೆಡಿವಿಜಿ8: ಬಿ.ಅನ್ನಪೂರ್ಣ, ಪ್ರಭಾರ ಕಂದಾಯ ಅಧಿಕಾರಿ, ಪಾಲಿಕೆ