ಲೋಕಾಯುಕ್ತ ಅಧಿಕಾರಿಗಳ ಅಹವಾಲು ಸ್ವೀಕಾರ ಸಭೆ

| Published : Sep 13 2025, 02:05 AM IST

ಸಾರಾಂಶ

ತಾಲೂಕಿನ ವನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಹಣ ದುರುಪಯೋಗವಾಗಿದ್ದು, ೨೦೨೩- ೨೪ ಮತ್ತು ೨೦೨೪- ೨೫ನೇ ಸಾಲಿನ ೧೫ನೇ ಹಣಕಾಸಿನ ವಿವಿಧ ಕಾಮಗಾರಿಗಳಲ್ಲಿ ಹಣ ದುರುಪಯೋಗ ಮಾಡಿಕೊಂಡಿರುವುದು ಕಂಡುಬಂದಿದ್ದು, ಸಂಪೂರ್ಣ ತನಿಖೆ ನಡೆಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ಶಿಗ್ಗಾಂವಿ: ಕಳೆದ ಮೂರು ವರ್ಷಗಳ ಹಿಂದೆ ಮನೆ ಬಿದ್ದಿದೆ. ಕಂದಾಯ ಇಲಾಖೆ ಅಧಿಕಾರಿಗಳು ಜಿಪಿಎಸ್ ಫೋಟೋ ಮಾಡಿಕೊಂಡು ಹೋಗಿದ್ದಾರೆ. ಆದರೆ ಇವರೆಗೆ ಪರಿಹಾರಧನ ನೀಡಿಲ್ಲ. ಹೀಗಾಗಿ ಮನೆ ಕಟ್ಟಿಕೊಳ್ಳಲು ಸಾಧ್ಯವಾಗಿಲ್ಲ. ಅಲ್ಲಿ, ಇಲ್ಲಿ ವಾಸಿಸುತ್ತಿದ್ದೇವೆ. ಜಮೀನಿಗೆ ಮತ್ತು ಖಾಲಿ ಜಾಗಕ್ಕೆ ಪಹಣಿ ಪತ್ರದಲ್ಲಿನ ತಿದ್ದುಪಡಿ ಮಾಡಿಕೊಡಬೇಕು. ತಕ್ಷಣ ಪರಿಹಾರ ನೀಡಬೇಕು...

- ಇದು ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಭವನದಲ್ಲಿ ಬುಧವಾರ ಲೋಕಾಯುಕ್ತ ಅಧಿಕಾರಿಗಳು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವ ಕೇಳಿಬಂದ ಮನವಿ.

ಸುಮಾರು ವರ್ಷಗಳಿಂದ ತಾಲೂಕಿನ ವಿವಿಧ ಗ್ರಾಮದಲ್ಲಿ ಕೃಷಿ ಕೂಲಿ ಮಾಡಿಕೊಂಡು ಬದುಕು ಸಾಗಿಸುವ ಕೃಷಿಕರ ಜಮೀನನ್ನು ಅಕ್ರಮ- ಸಕ್ರಮಗೊಳಿಸಬೇಕು. ಅದರಿಂದಾಗಿ ರೈತ ಕುಟುಂಬಗಳು ಬಾಳಿ ಬದುಕಲು ಸಾಧ್ಯವಾಗುತ್ತದೆ ಎಂದು ವಿವಿಧ ಗ್ರಾಮಗಳ ರೈತರು ಲೋಕಾಯುಕ್ತ ಅಧಿಕಾರಿಗಳು ಮನವಿ ಮೂಲಕ ಅಳಲು ತೋಡಿಕೊಂಡರು.

ತಾಲೂಕಿನ ವನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಹಣ ದುರುಪಯೋಗವಾಗಿದ್ದು, ೨೦೨೩- ೨೪ ಮತ್ತು ೨೦೨೪- ೨೫ನೇ ಸಾಲಿನ ೧೫ನೇ ಹಣಕಾಸಿನ ವಿವಿಧ ಕಾಮಗಾರಿಗಳಲ್ಲಿ ಹಣ ದುರುಪಯೋಗ ಮಾಡಿಕೊಂಡಿರುವುದು ಕಂಡುಬಂದಿದ್ದು, ಸಂಪೂರ್ಣ ತನಿಖೆ ನಡೆಸಬೇಕು. ಸರ್ಕಾರದ ಹಣ ಮರಳಿ ಕಟ್ಟಿಸುವ ಮೂಲಕ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸಮಾಜ ಸೇವಾ ಕಾರ್ಯಕರ್ತ ಮಂಜುನಾಥ ಶಿರಹಟ್ಟಿ ಅವರು ಲೋಕಾಯುಕ್ತ ಅಧಿಕಾರಿಗಳಿಗೆ ಮನವಿ ಮಾಡಿದರು.

ಗ್ರಾಮ ಪಂಚಾಯಿತಿಗಳಲ್ಲಿ ಇ- ಸ್ವತ್ತು ಉತಾರಕ್ಕೆ ದರ ನಿಗದಿ ಪಡಿಸಬೇಕು. ತಾಲೂಕಿನ ಗಂಗ್ಯಾನೂರ ಗ್ರಾಮಕ್ಕೆ ಸ್ಮಶಾನ ಜಾಗ ಮಂಜೂರು ಮಾಡಬೇಕು. ವಿವಿಧ ಗ್ರಾಮ ಪಂಚಾಯಿತಿಯಲ್ಲಿ ಸುಮಾರು ವರ್ಷಗಳಿಂದ ಒಂದೇ ಕಡೆ ಕೆಲಸ ಮಾಡುತ್ತಿರುವ ಬಿಲ್ ಸಂಗ್ರಹಕಾರ ಮತ್ತು ಕಂಪ್ಯೂಟರ್ ಆಪರೇಟರ್‌ಗಳನ್ನು ವರ್ಗಾಯಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಾಲೂಕು ಘಟಕದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

ಲೋಕಾಯುಕ್ತ ಅಧಿಕಾರಿ ಮಂಜುನಾಥ ಪಂಡಿತ್ ಮಾತನಾಡಿ, ಅರ್ಜಿ ಸಲ್ಲಿಸಿದ ಪ್ರತಿಯೊಂದನ್ನು ಪರಿಶೀಲಿಸಿ ಪರಿಹಾರ ನೀಡಲಾಗುತ್ತಿದೆ. ಕೆಲವು ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಕಾನೂನು ಮೂಲಕ ಶಿಕ್ಷೆ, ದಂಡ ನೀಡಲಾಗುತ್ತಿದೆ. ಅಂತಹ ಪ್ರಕರಣಗಳು, ದೂರುಗಳಿದ್ದರೆ ಸಾರ್ವಜನಿಕರು ಸಲ್ಲಿಸಿ ಎಂದರು.

ಲೋಕಾಯುಕ್ತ ಡಿವೈಎಸ್‌ಪಿ ಮಧುಸೂದನ ಸಿ., ಅಧಿಕಾರಿಗಳಾದ ವಿಶ್ವನಾಥ ಕಬ್ಬೂರಿ, ದಾದಾವಲಿ ಕೆ.ಎಚ್., ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣವರ, ಉಪ ತಹಸೀಲ್ದಾರ್ ವೆಂಕಟೇಶ, ಶಿರಸ್ತೇದಾರರಾದ ವಿಶ್ವನಾಥ ತತ್ತಿ, ವಿಲ್ಸನ್ ಚಾರ್ಜ್, ತಾಲೂಕು ಪಂಚಾಯಿತಿ ಯೋಜನಾಧಿಕಾರಿ ಶಿವಾನಂದ ಸಣ್ಣಕ್ಕಿ, ಲೋಕಾಯುಕ್ತ ಸಿಬ್ಬಂದಿಗಳಾದ ಸಿ.ಎಂ. ಬಾರ್ಕರ್, ಬಿ.ಎಂ. ಲಕ್ಷ್ಮೇಶ್ವರ, ಆರ್.ವೈ. ಗೆಜ್ಜೆಹಳ್ಳಿ, ಆನಂದ ಶೆಟ್ಟರ, ಬಸವರಾಜ ಸಂಕಣ್ಣವರ, ನಿರಂಜನ ಪಾಟೀಲ ಇತರರು ಇದ್ದರು.

ಕೇವಲ ೧೦ ಅರ್ಜಿಗಳ ಸ್ವೀಕಾರ

ಲೋಕಾಯುಕ್ತ ಅಧಿಕಾರಿಗಳು ನಡೆಸಿದ ಅಹವಾಲು ಸ್ವೀಕಾರ ಸಭೆಯಲ್ಲಿ ತಾಲೂಕಿನಾದ್ಯಂತ ಬರೀ ೧೦ ಅರ್ಜಿಗಳು ಸ್ವೀಕೃತವಾಗಿವೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಈ ಕುರಿತು ಪ್ರಚಾರದ ಕೊರತೆಯಾಗಿದೆ. ಅದರಿಂದಾಗಿ ಅದೆಷ್ಟು ನನೆಗುದಿಗೆ ಬಿದ್ದಿರುವ ಸಮಸ್ಯೆಗಳಿವೆ. ಅವುಗಳ ಮಾಹಿತಿ ನೀಡುವಲ್ಲಿ ಸಾರ್ವಜನಿಕರಿಗೆ ಆಗಲಿಲ್ಲ. ಅದರಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ನಿರ್ಲಕ್ಷ್ಯ ಕಾರಣವಾಗಿದೆ ಎಂದು ರೈತ ಸಂಘದ ಪದಾಧಿಕಾರಿಗಳು ದೂರಿದರು.