ಆಸ್ಪತ್ರೆಯ ಕಾರ್ಯವೈಖರಿ ಹಾಗೂ ಸೌಲಭ್ಯಗಳ ಕುರಿತು ಸಮಗ್ರ ಪರಿಶೀಲನೆ ನಡೆಸಿದರು.

ಕಂಪ್ಲಿ: ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಲೋಕಾಯುಕ್ತ ಇಲಾಖೆಯ ಅಧಿಕಾರಿಗಳು ದಿಢೀರ್ ಭೇಟಿ ನೀಡಿದ್ದು, ಆಸ್ಪತ್ರೆಯ ಕಾರ್ಯವೈಖರಿ ಹಾಗೂ ಸೌಲಭ್ಯಗಳ ಕುರಿತು ಸಮಗ್ರ ಪರಿಶೀಲನೆ ನಡೆಸಿದರು.

ಲೋಕಾಯುಕ್ತ ಡಿವೈಎಸ್‌ಪಿ ಎಸ್.ಎಸ್. ಬೀಳಗಿ ಸೋಮವಾರ ಆಸ್ಪತ್ರೆಗೆ ಆಗಮಿಸಿ ವಿವಿಧ ವಿಭಾಗಗಳನ್ನು ವೀಕ್ಷಿಸಿದರು. ಆಸ್ಪತ್ರೆಯ ಒಳಾಂಗಣ ಸ್ವಚ್ಛತೆ, ರೋಗಿಗಳಿಗೆ ಕಲ್ಪಿಸಿರುವ ಆಸನ ವ್ಯವಸ್ಥೆ, ಹಲ್ಲಿನ ವಿಭಾಗದ ಪರಿಸ್ಥಿತಿ, ಕುಡಿವ ನೀರಿನ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಲಭ್ಯಗಳ ಬಗ್ಗೆ ಅವರು ನಿಖರವಾಗಿ ಪರಿಶೀಲನೆ ನಡೆಸಿದರು. ಜೊತೆಗೆ ಆಸ್ಪತ್ರೆ ಪರಿಸರದಲ್ಲಿ ಗುಟ್ಕಾ ಕಲೆಗಳ ನಿವಾರಣೆ, ವೈದ್ಯರು ಮತ್ತು ಸಿಬ್ಬಂದಿ ಸಮವಸ್ತ್ರ ಧರಿಸುವ ನಿಯಮ ಪಾಲನೆ ಕುರಿತಾಗಿಯೂ ಗಮನ ಹರಿಸಿದರು.

ಪರಿಶೀಲನೆ ನಂತರ ಮಾತನಾಡಿದ ಅವರು, 2023ರಲ್ಲಿ ಲೋಕಾಯುಕ್ತ ಅಧಿಕಾರಿಗಳು ಇದೇ ಆಸ್ಪತ್ರೆಗೆ ಭೇಟಿ ನೀಡಿದಾಗ ಹಲವು ನ್ಯೂನತೆಗಳು ಕಂಡುಬಂದಿದ್ದವು. ಅವುಗಳನ್ನು ಸರಿಪಡಿಸಿರುವ ಬಗ್ಗೆ ಈಗಿನ ಪರಿಶೀಲನೆ ನಡೆಸಲಾಗಿದೆ ಎಂದು ತಿಳಿಸಿದರು.

ಹಿಂದಿನ ಸೂಚನೆಗಳನ್ನು ಆಸ್ಪತ್ರೆ ಆಡಳಿತವು ಬಹುತೇಕವಾಗಿ ಪಾಲಿಸಿಕೊಂಡಿದ್ದು, ಪ್ರಮುಖವಾಗಿ ಸ್ವಚ್ಛತೆ ಹಾಗೂ ಮೂಲಭೂತ ಸೌಲಭ್ಯಗಳಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ ಎಂದು ಹೇಳಿದರು.

ಇದೇ ವೇಳೆ ಸಾರ್ವಜನಿಕರಿಂದ ಬಂದಿರುವ ದೂರುಗಳ ಕುರಿತು ಕೂಡ ಪರಿಶೀಲನೆ ನಡೆಸಲಾಗಿದೆ. ವಿಶೇಷವಾಗಿ ಹಣಕ್ಕಾಗಿ ರೋಗಿಗಳನ್ನು ಪೀಡಿಸುವುದು, ಚುಚ್ಚುಮದ್ದು ಅಥವಾ ಔಷಧಿಗಳನ್ನು ಹೊರಗಡೆ ಖರೀದಿಸಲು ಒತ್ತಾಯಿಸುವುದು, ಪ್ರಯೋಗಾಲಯ ಸೇವೆಗಳು, ಹೆರಿಗೆ ಕೋಣೆಗಳ ಸ್ಥಿತಿ ಹಾಗೂ ರೋಗಿಗಳೊಂದಿಗೆ ಸಿಬ್ಬಂದಿಯ ವರ್ತನೆ ಇತ್ಯಾದಿ ವಿಷಯಗಳ ಕುರಿತು ವಿಚಾರಣೆ ನಡೆಸಲಾಯಿತು. ಈ ಸಂಬಂಧ ಯಾವುದೇ ಗಂಭೀರ ಆರೋಪಗಳು ಕಂಡುಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

ಆಸ್ಪತ್ರೆಯ ವಿವಿಧ ವಿಭಾಗಗಳಾದ ಪ್ರಯೋಗಾಲಯ, ಹೆರಿಗೆ ವಿಭಾಗ, ಹೊರರೋಗಿ ವಿಭಾಗಗಳ ಕಾರ್ಯಪದ್ಧತಿ ವೀಕ್ಷಿಸಿದ ಅವರು, ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಹಾಗೂ ಸೇವೆಗಳು ಲಭ್ಯವಾಗುತ್ತಿವೆಯೇ ಎಂಬುದನ್ನು ಖಚಿತಪಡಿಸಿಕೊಂಡರು. ಸಿಬ್ಬಂದಿ, ವೈದ್ಯರು ಕರ್ತವ್ಯ ನಿಷ್ಠೆಯಿಂದ ಕೆಲಸ ನಿರ್ವಹಿಸುವಂತೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ರವೀಂದ್ರ ಕನಕೇರಿ, ವೈದ್ಯರಾದ ಡಾ. ಶ್ರೀನಿವಾಸರಾವ್, ಡಾ. ಮಲ್ಲೇಶಪ್ಪ, ಡಾ.ಹಾರಿಕಾ, ಡಾ.ವೀರೇಶ್, ಡಾ.ಸಾಗರ್, ಡಾ.ಭರತ್ ಪದ್ಮಶಾಲಿ ಸೇರಿದಂತೆ ಕಚೇರಿ ಸಿಬ್ಬಂದಿ ಪ್ರಸಾದ್, ಹುಲುಗಪ್ಪ, ನಾಗರಾಜ ಇದ್ದರು.