ಚಾಮರಾಜನಗರ ನಗರಸಭೆ ಮೇಲೆ ಲೋಕಾಯುಕ್ತ ದಾಳಿ

| Published : Sep 12 2025, 12:06 AM IST

ಸಾರಾಂಶ

ಆಯಾ ಶಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೌರಾಯುಕ್ತರಿಂದ ಮಾಹಿತಿ ಪಡೆದುಕೊಂಡ ಲೋಕಾಯುಕ್ತ ಅಧಿಕಾರಿಗಳು ಹಲವು ದಾಖಲೆ ಹಾಗೂ ಕಡತಗಳನ್ನು ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ನಗರಸಭೆ ಕಚೇರಿಯಲ್ಲಿ ಭ್ರಷ್ಟಾಚಾರ, ಕೆಲಸ ವಿಳಂಬ ಕುರಿತು ಸಾರ್ವಜನಿಕರಿಂದ ಸಾಕಷ್ಟು ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ, ಕಡತಗಳನ್ನು ಪರಿಶೀಲನೆ ನಡೆಸಿದರು.

ಮೈಸೂರು ಹಾಗೂ ಚಾಮರಾಜನಗರ ಲೋಕಾಯುಕ್ತ ಅಧಿಕಾರಿಗಳ ಐದು ತಂಡಗಳು ನಗರಸಭೆಗೆ ದಿಢೀರನೇ ದಾಳಿ ನಡೆಸಿದ್ದು, ಪೌರಾಯುಕ್ತರ ಕಚೇರಿ, ಕಂದಾಯ ಶಾಖೆ, ಆರೋಗ್ಯ ಶಾಖೆ ಸೇರಿದಂತೆ ಇತರೆ ಶಾಖೆಗಳ ಮೇಲೆ ದಾಳಿ ನಡೆಸಿ ಅಲ್ಲಿನ ಕಡತಗಳನ್ನು ಸಂಜೆಯವರೆಗೂ ಪರಿಶೀಲನೆ ನಡೆಸಿದ್ದಾರೆ.ಆಯಾ ಶಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೌರಾಯುಕ್ತರಿಂದ ಮಾಹಿತಿ ಪಡೆದುಕೊಂಡ ಲೋಕಾಯುಕ್ತ ಅಧಿಕಾರಿಗಳು ಹಲವು ದಾಖಲೆ ಹಾಗೂ ಕಡತಗಳನ್ನು ಪರಿಶೀಲಿಸಿದರು.

ನಗರಸಭೆಯಲ್ಲಿ ಭ್ರಷ್ಟಾಚಾರ, ಅಕ್ರಮ ಖಾತೆ, ಅಕ್ರಮವಾಗಿ ಇ-ಸ್ವತ್ತು, ಸಾರ್ವಜನಿಕರ ಕೆಲಸ ವಿಳಂಬದ ಬಗ್ಗೆ ಸಾರ್ವಜನಿಕರು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ದಿಢೀರ್ ದಾಳಿ ನಡೆಸಿದ್ದಾರೆ.

ಲೋಕಾಯುಕ್ತ ನ್ಯಾಯಾಧೀಶರ ಅನುಮತಿ ಮೇರೆಗೆ ವಾರೆಂಟ್ ಪಡೆದು ಈ ವಿಶೇಷ ಕಾರ್ಯಾಚರಣೆ ನಡೆಸಲಾಗಿದ್ದು, ತನಿಖೆಯ ವರದಿಯನ್ನು ನ್ಯಾಯಾಧೀಶರಿಗೆ ಸಲ್ಲಿಸಲಾಗುತ್ತದೆ ಎಂದು ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು ತಿಳಿಸಿದ್ದಾರೆ.

11ಸಿಎಚ್ಎನ್‌12

ಚಾಮರಾಜನಗರ ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.