ಸಾರಾಂಶ
ವಿವಿಧೆಡೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ವಿವಿಧೆಡೆ ಕಂದಾಯ ಕಚೇರಿ (ಆರ್‌ಒ) ಮತ್ತು ಸಹಾಯಕ ಕಂದಾಯ ಕಚೇರಿಗಳ (ಎಆರ್‌ಒ) ಮೇಲೆ ಲೋಕಾಯುಕ್ತ ಮತ್ತು ಉಪಲೋಕಾಯುಕ್ತರು ದಿಢೀರ್ ಭೇಟಿ ನೀಡಿದ ವೇಳೆ ಕಂಡು ಬಂದು ಆಶ್ಚರ್ಯಕರ ಬೆಳವಣಿಗೆಗಳು.
ಬೆಂಗಳೂರು : ಅಮ್ಮನ ಬದಲು ಮಗ ಕರ್ತವ್ಯ, ವೈಕುಂಠ ಏಕಾದಶಿ ಪ್ರಯುಕ್ತ ಕೆಲಸಕ್ಕೆ ಚಕ್ಕರ್, ದೇವಸ್ಥಾನಕ್ಕೆ ಹಾಜರ್... ಹಾಜರಾತಿ ಪುಸ್ತಕದಲ್ಲಿ 21 ಸಿಬ್ಬಂದಿ ಸಹಿ ಮಾಡಿದರೂ ಕಚೇರಿಯಲ್ಲಿ ಮಾತ್ರ ಮೂವರು...!
ಇದು ನಗರದ ವಿವಿಧೆಡೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ವಿವಿಧೆಡೆ ಕಂದಾಯ ಕಚೇರಿ (ಆರ್‌ಒ) ಮತ್ತು ಸಹಾಯಕ ಕಂದಾಯ ಕಚೇರಿಗಳ (ಎಆರ್‌ಒ) ಮೇಲೆ ಲೋಕಾಯುಕ್ತ ಮತ್ತು ಉಪಲೋಕಾಯುಕ್ತರು ದಿಢೀರ್ ಭೇಟಿ ನೀಡಿದ ವೇಳೆ ಕಂಡು ಬಂದು ಆಶ್ಚರ್ಯಕರ ಬೆಳವಣಿಗೆಗಳು. ಬಿಬಿಎಂಪಿ ಕಚೇರಿಗಳಲ್ಲಿನ ಘಟನೆಗಳು ಲೋಕಾಯುಕ್ತ ಮತ್ತು ಉಪಲೋಕಾಯುಕ್ತರೇ ದಿಗ್ಬ್ರಮೆಗೊಳಗಾಗುವಂತೆ ಮಾಡಿದೆ.
ಶುಕ್ರವಾರ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್, ಉಪಲೋಕಾಯುಕ್ತರಾದ ನ್ಯಾ.ಕೆ.ಎನ್.ಫಣಿಂದ್ರ ಮತ್ತು ನ್ಯಾ.ಬಿ.ವೀರಪ್ಪ ಸೇರಿದಂತೆ ಲೋಕಾಯುಕ್ತ ಸಂಸ್ಥೆಯ ಪೊಲೀಸ್ ಅಧಿಕಾರಿ, ನ್ಯಾಯಾಂಗ ಅಧಿಕಾರಿಗಳು ಪಾಲಿಕೆಯ 50 ಆರ್‌ಒ ಮತ್ತು ಎಆರ್‌ಒ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿ ಬಿಬಿಎಂಪಿ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವೈಖರಿ ಕುರಿತು ಪರಿಶೀಲನೆ ನಡೆಸಿದರು.
ಮುನಿರೆಡ್ಡಿಪಾಳ್ಯ, ಶಿವಾಜಿನಗರ, ವಸಂತನಗರ, ಚಾಮರಾಜಪೇಟೆ, ಚಿಕ್ಕಪೇಟೆ, ಜಯನಗರ ಸೇರಿದಂತೆ 50 ಕಡೆ ಭೇಟಿ ನೀಡಿ ತಪಾಸಣೆ ನಡೆಸಲಾಯಿತು. ಈ ವೇಳೆ ಅವ್ಯವಹಾರ, ಅಕ್ರಮ ಕಟ್ಟಡಗಳ ನಿರ್ಮಾಣ ತಡೆಯದಿರುವುದು, ಜನರ ಸಮಸ್ಯೆಗಳಿಗೆ ಸ್ಪಂದಿಸದಿರುವುದು ಸೇರಿದಂತೆ ಹಲವು ನ್ಯೂನತೆಗಳು ಬೆಳಕಿಗೆ ಬಂದವು.
ಹೆಬ್ಬಾಳ ಉಪವಿಭಾಗ ಕಚೇರಿಗೆ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಭೇಟಿ ನೀಡಿದಾಗ ಹಾಜರಾತಿ ಪುಸ್ತಕದಲ್ಲಿ 21ರ ಸಹಿ ಇದೆ. ಆದರೆ, ಕಚೇರಿಯಲ್ಲಿ ಕೇವಲ ಮೂವರು ಮಾತ್ರ ಉಪಸ್ಥಿತರಿದ್ದರು. ಕೆಲವರಿಗೆ ಕರೆ ಮಾಡಿದಾಗ ಕೇಂದ್ರ ಕಚೇರಿಗೆ ತೆರಳಿರುವುದಾಗಿ ಹೇಳಿದ್ದಾರೆ. ಆದರೆ, ಈ ಬಗ್ಗೆ ಎಲ್ಲಿಯೂ ನಮೂದು ಮಾಡಿದಿರುವುದು ಪತ್ತೆಯಾಗಿದೆ. ಸಿಬ್ಬಂದಿಯ ಚಲನ-ವಲನದ ಬಗ್ಗೆ ಆಗಸ್ಟ್ 2023ರ ನಂತರ ನಿರ್ವಹಣೆ ಮಾಡಿಲ್ಲ. ಈ ಬಗ್ಗೆ ಹಾಜರಿದ್ದ ಸಿಬ್ಬಂದಿ ಸಮರ್ಪಕ ಉತ್ತರ ನೀಡಲಿಲ್ಲ.
ಉಪಲೋಕಾಯುಕ್ತ ನ್ಯಾ.ಬಿ.ವೀರಪ್ಪ ಅವರು ಲಾಲ್‌ಬಾಗ್ ಕಚೇರಿಗೆ ಭೇಟಿ ನೀಡಿದ ವೇಳೆ ಅಧಿಕಾರಿಗಳೇ ಇರಲಿಲ್ಲ. ವೈಕುಂಠ ಏಕಾದಶಿ ಪ್ರಯುಕ್ತ ದೇವಾಲಯಕ್ಕೆ ತೆರಳಿದರು. ಇದನ್ನು ಕಂಡ ನ್ಯಾ.ಬಿ.ವೀರಪ್ಪ ಅವರು ಕೆಂಡಮಂಡಲರಾಗಿದ್ದು, ವೈಕುಂಠ ಏಕಾದಶಿ ಮಾಡಲು ದೇವಸ್ಥಾನಕ್ಕೆ ಹೋದರೆ ಯಾರು ಕೆಲಸ ಮಾಡುತ್ತಾರೆ ಎಂದು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
ಪ್ರತಿ ಕಚೇರಿಯಲ್ಲಿಯೂ ಹಲವು ಲೋಪದೋಷಗಳು ಕಂಡು ಬಂದಿದ್ದು, ಎಲ್ಲವನ್ನೂ ಸರಿಪಡಿಸಿ ಲೋಕಾಯುಕ್ತ ಕಚೇರಿಗೆ ಸಂಬಂಧಿಸಿದ ಅಧಿಕಾರಿಗಳು ಖುದ್ದಾಗಿ ಹಾಜರಾಗಿ ವರದಿ ನೀಡುವಂತೆ ಸೂಚಿಸಲಾಯಿತು.
ಅಮ್ಮನ ಬದಲು ಮಗ ಕೆಲಸಕ್ಕೆ ಹಾಜರು
ಸೌತ್ ಎಂಡ್ ಸರ್ಕಲ್ ಬಿಬಿಎಂಪಿ ಕಚೇರಿಯಲ್ಲಿ ಅಮ್ಮನ ಬದಲು ಮಗ ಕೆಲಸಕ್ಕೆ ಹಾಜರಾಗಿರುವುದು ಗೊತ್ತಾಗಿದೆ. ಕವಿತಾ ಎಂಬಾಕೆಯ ಬದಲು ಆಕೆಯ ಮಗ ನಕ್ನ್ ಹಾಜರಾಗಿರುವುದು ಗೊತ್ತಾಗಿದೆ. ಅಲ್ಲದೇ,, ಮಗನಿಗೆ ಸಹಾಯವಾಗಲೆಂದು ನಿಯಮ ಮೀರಿ ಗೀತಾ ಎಂಬಾಕೆಯನ್ನು ಸಹಾಯಕಿಯನ್ನಾಗಿ ನೇಮಕ ಮಾಡಿರುವುದು ಪರಿಶೀಲನೆ ವೇಳೆ ಗೊತ್ತಾಗಿದೆ. ಈ ನಡುವೆ, ಕೆಲವು ಸಿಬ್ಬಂದಿ ಮಧ್ಯಾಹ್ನ ಕೆಲಸಕ್ಕೆ ಹಾಜರಾಗಿರುವ ಘಟನೆಗಳು ಸಹ ಬೆಳಕಿಗೆ ಬಂದಿವೆ.
ಅಧಿಕಾರಿಗಳ ಬಳಿ ದಾಖಲೆ ಇಲ್ಲದ ₹93 ಸಾವಿರ ಹಣ ಪತ್ತೆ
ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಅವರು ಕೆ.ಆರ್.ಪುರ ಕಚೇರಿಯಲ್ಲಿ ತಪಾಸಣೆ ನಡೆಸಿದಾಗ ಅಧಿಕಾರಿಗಳ ಬಳಿ ದಾಖಲೆ ಇಲ್ಲದ 93 ಸಾವಿರ ರು. ಪತ್ತೆಯಾಗಿದೆ. ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಬಳಿಕ 50 ಸಾವಿರ ರು. ಮತ್ತು ಸಹಾಯಕ ಎಂಜಿನಿಯರ್ ಬಳಿ 43 ಸಾವಿರ ರು. ನಗದು ಸಿಕ್ಕಿದೆ. ತಮ್ಮ ಬಳಿ ಹಣ ಇರುವ ಬಗ್ಗೆ ನಗದು ಘೋಷಣಾ ಪುಸ್ತಕದಲ್ಲಿ ನಮೂದು ಮಾಡಿಲ್ಲ. ಅಲ್ಲದೇ, ಲೋಕಾಯುಕ್ತರು ಹಣದ ಬಗ್ಗೆ ಪ್ರಶ್ನಿಸಿದಾಗ ಸಮರ್ಪಕವಾದ ಉತ್ತರವನ್ನು ಸಹ ನೀಡಿಲ್ಲ. ಹೀಗಾಗಿ ಅಧಿಕಾರಿಗಳ ಬಳಿಯಿಂದ ನಗದನ್ನು ಜಪ್ತಿ ಮಾಡಲಾಗಿದೆ.