ಸಾರಾಂಶ
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಕೋಟ್ಯಂತರ ರು.ಗಳ ಬೆಲೆ ಬಾಳುವ ಸರ್ಕಾರದ ನೂರಾರು ಎಕರೆ ಗೋಮಾಳ ಭೂಮಿಯನ್ನು ಭೂಗಳ್ಳರು ನುಂಗಲು ಮರ ಗಿಡಗಳನ್ನು ಕಟಾವು ಮಾಡಿಕೊಂಡು ಭೂಮಿಯನ್ನು ಸಮತಟ್ಟು ಮಾಡಲು ಮುಂದಾಗಿದ್ದಾರೆ. ಕಂದಾಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷದಿಂದ ಸರ್ಕಾರಿ ಭೂಮಿ ಖಾಸಗಿಯವರ ಪಾಲಾಗುತ್ತಿದೆ. ತಾಲೂಕಿನ ಕಾಮಸಮುದ್ರ ಹೋಬಳಿ ದೋಣಿಮಡಗು ಗ್ರಾಪಂ ವ್ಯಾಪ್ತಿಗೆ ಒಳಪಡುವ ವರದಾಪುರ ಗ್ರಾಮದ ಸರ್ವೆ ನಂಬರ್ ೯ ರಲ್ಲಿ ೧೪೨ ಎಕರೆ ಗೋಮಾಳ ಭೂಮಿಯಿದೆ. ಇದರ ಮೇಲೆ ಭೂಗಳ್ಳರ ಕಣ್ಣು ಬಿದ್ದಿದೆ. ಎಕರೆಗೆ ತಲಾ ೫ ಲಕ್ಷಗಳಂತೆ ವಸೂಲಿಯನ್ನು ಮಾಡಿ ಗೋಮಾಳ ಜಮೀನಿಗೆ ನಕಲಿ ದಾಖಲೆ ಸೃಷ್ಟಿ.ರಾತ್ರೋರಾತ್ರಿ ಭೂ ಒತ್ತುವರಿ
ಈ ಭೂಮಿಯಲ್ಲಿ ಹತ್ತಾರು ವರ್ಷಗಳಿಂದ ಬೆಳೆದಿರುವಂತಹ ಹಾಗೂ ಸಾವಿರಾರು ರೂ ಬೆಲೆ ಬಾಳುವ ಮರಗಿಡಗಳನ್ನು ಬತ್ಲಾವೂರು, ಬಾದಗುಟ್ಲಹಳ್ಳಿ, ತನಿಮಡಗು ಸುತ್ತ ಮುತ್ತಲಿನ ಗ್ರಾಮಗಳ ಭೂಗಳ್ಳರು ಸೇರಿದಂತೆ ಆಂಧ್ರ ಮೂಲದವರು ಕಟಾವು ಮಾಡಿ ಮಾರಾಟ ಮಾಡಿ ಹಣ ಗಳಿಸುತ್ತಿದ್ದಾರೆ. ರಾತ್ರೋರಾತ್ರಿ ಭೂಮಿಯನ್ನು ಹಸನು ಮಾಡಿ ಸರ್ಕಾರಿ ಗೋಮಾಳ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳಲು ಭೂಗಳ್ಳರು ಮುಂದಾಗಿದ್ದಾರೆ.ಹೀಗೆ ಒತ್ತುವರಿ ಮಾಡಿಕೊಂಡಿರುವಂತಹ ಭೂಮಿಯಲ್ಲಿ ಅನಧಿಕೃತವಾಗಿ ಉಳಿಮೆ ಮಾಡಿ ಕಾಟಾಚಾರಕ್ಕೆ ಹುರುಳಿ, ಜೋಳ ಇತ್ಯಾದಿಗಳನ್ನು ಬಿತ್ತನೆ ಮಾಡಲು ಮುಂದಾಗಿದ್ದಾರೆ. ಇದಕ್ಕೆ ಹೋಬಳಿಯ ಕಂದಾಯ ಅಧಿಕಾರಿಗಳ ಬೆಂಬಲವಿದೆ ಎಂದು ಸುತ್ತಮುತ್ತಲಿನ ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಭೂಮಿಯ ಬೆಲೆ ಗಗನಕ್ಕೇರುತ್ತಿದ್ದಂತೆ ಇದೇ ಗೋಮಾಳದ ಜಮೀನಿನ ಗಡಿಭಾಗದ ಕರ್ನಾಟಕದ ಜನತೆಯ ಜೊತೆಗೆ ಆಂಧ್ರದ ಭೂಗಳ್ಳರ ಪಾಲಾಗುತ್ತಿದೆ.
ಗೋಮಾಳದ ನಕಲಿ ದಾಖಲೆ ಸೃಷ್ಟಿಗೋಮಾಳದಲ್ಲಿ ಇರುವಂತಹ ಬೆಲೆ ಬಾಳುವ ಮರಗಳನ್ನು ರಾತ್ರೋರಾತ್ರಿ ಕಡಿದು, ಜೆಸಿಬಿಗಳನ್ನು ಬಳಸಿ ಭೂಮಿಯಲ್ಲಿ ಇರುವಂತಹ ಮರದ ಬುಡ ಸೇರಿದಂತೆ ಕಲ್ಲು ಬಂಡೆಗಳನ್ನು ತೆಗೆಯುವ ಮೂಲಕ ಪರಿಸರಕ್ಕೆ ಧಕ್ಕೆಯನ್ನು ಉಂಟು ಮಾಡುತ್ತಿದ್ದಾರೆ. ಮಾಜಿ ತಾಪಂ ಸದಸ್ಯರೊಬ್ಬರು ಹೊರ ರಾಜ್ಯದವರಿಂದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರಿಂದ ಎಕರೆಗೆ ತಲಾ ೫ ಲಕ್ಷಗಳಂತೆ ವಸೂಲಿಯನ್ನು ಮಾಡಿ ಗೋಮಾಳ ಜಮೀನನ್ನು ತಮ್ಮ ಹೆಸರಿಗೆ ಮಾಡಿಕೊಡುತ್ತೇನೆ ಎಂದು ಹೇಳಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಲು ಮುಂದಾಗಿದ್ದಾರೆ ಎಂಬ ಆರೋಪವೂ ಇದೆ.
ಗೋಮಾಳ ಜಮೀನುಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾರಾಟ ಮಾಡಲು ಪ್ರಯತ್ನಿಸಿ ಈಗಾಗಲೇ ಜೈಲು ಶಿಕ್ಷೆಯನ್ನು ಅನುಭವಿಸಿದ ಕೆಲವರು ಶ್ರೀಮಂತರಿಂದ ಲಕ್ಷಾಂತರ ರುಪಾಯಿಗಳನ್ನು ವಸೂಲಿ ಗೋಮಾಳ ಜಮೀನನ್ನು ಅವರುಗಳ ಹೆಸರಿಗೆ ಮಾಡಿಕೊಡುವುದಾಗಿ ಭರವಸೆಯನ್ನು ನೀಡಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದರು.ಗೋಮಾಳ ರಕ್ಷಿಸಲು ಒತ್ತಾಯಸಂಬಂಧಪಟ್ಟ ಕಂದಾಯ ಅಧಿಕಾರಿಗಳು ಭೂಗಳ್ಳರಿಂದ ಸರ್ಕಾರಿ ಭೂಮಿಯನ್ನು ರಕ್ಷಣೆ ಮಾಡಿ ಸುತ್ತಮುತ್ತಲ ಗ್ರಾಮಸ್ಥರ ಜಾನುವಾರುಗಳ ಸಾಕಾಣಿಕೆಗೆ ಅನುಕೂಲ ಮಾಡಿಕೊಡಬೇಕಾಗಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.