ಸಾರಾಂಶ
ವಿಜಯಪುರ : ನಕ್ಸಲರು ಶರಣಾಗಿದ್ದರೇ ಅವರು ಸರ್ಕಾರಕ್ಕೇ ಕಂಡಿಷನ್ ಹಾಕುತ್ತಿರಲಿಲ್ಲ. ಅವರ ಬಳಿಯ ಶಸ್ತ್ರಾಸ್ತ್ರಗಳನ್ನು ಸರ್ಕಾರಕ್ಕೆ ನೀಡಬೇಕಿತ್ತು. ಆದರೆ, ಇಲ್ಲಿ ನಕ್ಸಲರು ಸರ್ಕಾರಕ್ಕೆ ಶರಣಾಗಿದ್ದಾರೋ ಅಥವಾ ಸರ್ಕಾರವೇ ನಕ್ಸಲರಿಗೆ ಶರಣಾಗಿದೆಯೋ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಪ್ರಶ್ನಿಸಿದರು.
ನಗರದ ಹೊಸ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಕ್ಸಲ್ ಮುಕ್ತ ಕರ್ನಾಟಕ ಮಾಡಲು ಹೊರಟ ರಾಜ್ಯ ಸರ್ಕಾರದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇಲ್ಲಿ ಯಾರು ಯಾರಿಗೆ ಶರಣಾಗಿರೋದು? ಯಾರು ಶರಣಾಗಿರೋದು ಎಂಬುವುದು ನನ್ನ ಮೂಲಭೂತ ಪ್ರಶ್ನೆಯಾಗಿದೆ ಎಂದು ವ್ಯಂಗ್ಯವಾಡಿದರು.
ನಕ್ಷಲರು ಶರಣಾಗಿದ್ದರೇ ಅವರಿಗೆ ಪರಿಹಾರ ಕೊಡುವ ಪ್ರಶ್ನೆಯೇ ಬರೋದಿಲ್ಲ. ಅವರಿಗೆ ನೆರವು ಕೊಟ್ಟವರ ತನಿಖೆ ಮಾಡಬೇಕು. ಶಸ್ತ್ರಾಸ್ತ್ರ ಪೂರೈಕೆ ಯಾರು ಮಾಡಿದ್ದರು ಎಂಬುವುದು ತನಿಖೆ ಆಗಬೇಕು. ನಕ್ಸಲರ ವಿಚಾರಧಾರೆಗಳೇ ಬೇರೆಯಾಗಿರುತ್ತವೆ. ಸಂವಿಧಾನದ ಮೇಲೆ ನಂಬಿಕೆ ಇಡುವವರು ಬ್ಯಾಲೆಟ್ ಮೇಲೆ ನಂಬಿಕೆ ಇಡ್ತಾರೆ. ಬುಲೆಟ್ ಮೇಲೆ ನಂಬಿಕೆ ಇಡಲ್ಲ. ಸಂವಿಧಾನ ವಿರೋಧಿ, ರಾಷ್ಟ್ರಘಾತುಕ ನಕ್ಸಲರನ್ನು ಬೆಂಬಲಿಸುವವರು ರಾಷ್ಟ್ರ ವಿರೋಧಿಗಳೇ? ನಕ್ಸಲರ ವಿಚಾರಧಾರೆ ಸಮರ್ಥನೆ ಮಾಡಿಕೊಂಡರೆ ಅದು ಸಂವಿಧಾನ ವಿರೋಧಿಯೇ ಆಗುತ್ತದೆ. ಈ ನೆಟ್‌ವರ್ಕ್‌ನಲ್ಲಿ ಯಾರ್‍ಯಾರು ಇದ್ದಾರೆ ಎಂಬುವುದು ತನಿಖೆ ಆಗಬೇಕು ಎಂದು ಒತ್ತಾಯಿಸಿದರು.
ಬೆಲೆ ಏರಿಕೆ ಬಿಸಿ:
ವಿದ್ಯುತ್ ಬೆಲೆ, ನೀರಿನ ಕರ, ಬಸ್ ದರ ಏರಿಕೆ ಇತರೆ ವಸ್ತುಗಳ ಬೆಲೆ ಏರಿಕೆ, ಭ್ರಷ್ಟಾಚಾರವೇ ಇವರ ಸಾಧನೆಯಾಗಿದೆ. ಜನರ ಸಂಕಷ್ಟದ ಸಮಯದಲ್ಲಿ ಅಧಿಕಾರದ ಹಪಾಹಪಿ ಇರಬಾರದು. ಸಿಎಂ ಸಿದ್ದರಾಮಯ್ಯಗೆ ಸೀಟು ಉಳಿಸಿಕೊಳ್ಳುವ ಚಿಂತೆ, ಡಿಸಿಎಂ ಡಿ.ಕೆ.ಶಿವಕುಮಾರಗೆ ಸಿಎಂ ಆಗುವ ಆತುರ. ಇದರ ಮಧ್ಯೆ ನಾವು ಯಾರ ಕಡೆ ಇರಬೇಕು ಎಂಬುವುದು ಶಾಸಕರ, ಸಚಿವರ ಚಿಂತೆಯಾಗಿದೆ ಎಂದು ಲೇವಡಿ ಮಾಡಿದರು.ಸರ್ಕಾರ ಮೊದಲು ಬಡ ಬಾಣಂತಿಯರ ಸಾವಿಗೆ ಕಾರಣ ಪತ್ತೆ ಹಚ್ಚುವ ಕೆಲಸ ಮಾಡಬೇಕು. ತಪ್ಪಿತಸ್ಥರ ಮೇಲೆ ಕ್ರಮ ಆಗಬೇಕು. ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ಎಕ್ಸ್‌ಪರ್ಟ್ ತಜ್ಞರ ಸಮಿತಿ ರಚನೆ ಮಾಡಿ ತನಿಖೆ ನಡೆಸಬೇಕಿದೆ. ಸುಮಾರು 600 ಬಾಣಂತಿಯರು ಮೃತಪಟ್ಟಿದ್ದಾರೆ ಎಂದು ಆರೋಪಿಸಿದರು.
ನ್ಯಾಯ ಕೇಳಲು ಹೋದರೆ ದೌರ್ಜನ್ಯ:
ಪಂಚಮಸಾಲಿಗಳು ಮೀಸಲಾತಿ ಕೇಳಿದರೆ ಅವರ ಮೇಲೆ ಲಾಠಿಚಾರ್ಜ್ ಮಾಡಿದಿರಿ. ಸರ್ಕಾರ ಬಂದು ಒಂದೂವರೆ ವರ್ಷದಲ್ಲಿ ಗುತ್ತಿಗೆದಾರರ ಬಿಲ್ ಕೊಟ್ಟಿಲ್ಲ. ಸರ್ಕಾರದಲ್ಲಿ 60 ಪರ್ಸೆಂಟ್ ಭ್ರಷ್ಟಾಚಾರ ದಾಟಿದೆ. ಭ್ರಷ್ಟಾಚಾರದ ಸಾಕ್ಷಿ ಕೇಳ್ತಿರಿ, ಆತ್ಮಸಾಕ್ಷಿ ಇದ್ದವರಿಗೆ ಸಾಕ್ಷಿ ಬೇಕಾಗಿಲ್ಲ. ಯಾದಗಿರಿ ಪಿಎಸೈ, ವಾಲ್ಮೀಕಿ ನಿಗಮದ ಅಧಿಕಾರಿ, ಬೆಳಗಾವಿ ತಹಸೀಲ್ದಾರ್ ಕಚೇರಿ ಅಧಿಕಾರಿ ಆತ್ಮಹತ್ಯೆ, ಗದಗ ನಿರ್ಮಿತಿ ಕೇಂದ್ರದ ಸಿಬ್ಬಂದಿ ಮುಂತಾದ ಪ್ರಾಮಾಣಿಕ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.ಮುಖಂಡ ಎನ್.ಮಹೇಶ ಮಾತನಾಡಿ, ರಾಜ್ಯ ಸರ್ಕಾರ ಸಂವೇದನಾ ರಹಿತವಾಗಿದ್ದು, ಭ್ರಷ್ಟಾಚಾರದಲ್ಲಿ ಸಿಲುಕಿದ ಸರ್ಕಾರವಾಗಿದೆ. ಅಭಿವೃದ್ಧಿ ಶೂನ್ಯ ಸರ್ಕಾರ, ಗ್ಯಾರಂಟಿ ಯೋಜನೆ ನಿಭಾಯಿಸಲಾಗದ ಸರ್ಕಾರ. ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಲು ಎಸ್‌ಸಿಪಿ ಟಿಎಸ್‌ಪಿಗೆ ಸೇರಿದ ₹25 ಸಾವಿರ ಕೋಟಿ ಹಣ ಬಳಸಿದ್ದಾರೆ. ಈಗಾಗಲೇ ಎಲ್ಲದರಲ್ಲೂ ಬೆಲೆ ಏರಿಕೆ ಮಾಡಿದ್ದಾರೆ. ಅಬಕಾರಿ ಇಲಾಖೆ ಮದ್ಯದ ಬೆಲೆ 20 ಪರ್ಸೆಂಟ್ ಹೆಚ್ಚಳ ಮಾಡಿದ್ದಾರೆ ಎಂದರು.
ಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕುಚಬಾಳ, ಚಂದ್ರಶೇಖರ ಕವಟಗಿ, ಗುರು ಕಾಮಾ, ಉಮೇಶ ಕಾರಜೋಳ, ಮಳುಗೌಡ ಪಾಟೀಲ, ಮಹೇಂದ್ರ ನಾಯಿಕ, ಚಿದಾನಂದ ಚಲವಾದಿ, ಈರಣ್ಣ ರಾವೂರ, ವಿಜಯ ಜೋಶಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವು ನಿಂತಿಲ್ಲ. ಹಸುಗೂಸುಗಳು ಸಾಯುತ್ತಿರುವ ಕಾರಣ ಪತ್ತೆಯಾಗಿಲ್ಲ. ಕಳೆದ ಒಂದೂವರೆ ವರ್ಷದಲ್ಲಿ 2800ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಾಮಾಣಿಕ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸಾವಿನ ದಾರಿ ಹಿಡಿದಿದ್ದಾರೆ. ಇದಕ್ಕೂ ನಮಗೂ ಸಂಬಂಧವಿಲ್ಲ ಎಂಬಂತೆ ಆಳುವ ಸರ್ಕಾರ ವರ್ತಿಸುತ್ತಿದೆ. ರಾಜ್ಯವೇ ಸಾವಿನ ಮನೆಯಾದರೂ ಕಲ್ಲು ಮನಸಿನ ಇವರು ಡಿನ್ನರ್ ಪಾಲಿಟಿಕ್ಸ್ ನಡೆಸಿದ್ದಾರೆ. ಈ ಸರ್ಕಾರ ಸಾವಿನ ಮನೆಯಲ್ಲಿ ಡಿನ್ನರ್ ಪಾರ್ಟಿ ಮಾಡುವುದು, ವೈಯಕ್ತಿಕ ದ್ವೇಷ ಸಾಧಿಸುವುದು ಮಾಡುತ್ತಿದೆ.
-ಸಿ.ಟಿ.ರವಿ, ಮಾಜಿ ಸಚಿವ.
ಇದೊಂದು ಥರಾ ಅಪರಾತಪರಾ ಎಕನಾಮಿಕ್ಸ್ ಆಗಿದೆ. ಗಂಡನ ಜೇಬಿಂದ ಹಣ ಕಿತ್ತುಕೊಂಡು ಹೆಂಡತಿಗೆ ಕೊಡುವ ಎಕನಾಮಿಕ್ಸ್ ಇವರದ್ದು. ಬಾಣಂತಿಯರ, ಹಸುಗೂಸುಗಳ ಸಾವು. ರೈತರ, ಅಧಿಕಾರಿಗಳ ಆತ್ಮಹತ್ಯೆ. ಇದೆಲ್ಲವನ್ನು ಮುಚ್ಚಿ ಹಾಕಲು ಕಾಂಗ್ರೆಸ್ ಸರ್ಕಾರ ಹೊಸ ಪ್ಲಾನ್ ಮಾಡಿಕೊಂಡಿದ್ದಾರೆ. ಬಿಜೆಪಿಯವರು ಅಂಬೇಡ್ಕರ್ ವಿರೋಧಿಗಳು ಎಂದು ಸುಳ್ಳು ಆಪಾದನೆ ಮಾಡುತ್ತಿದ್ದಾರೆ. ತಾವು ಮಾಡಿದ ತಪ್ಪು ಮುಚ್ಚಿಕೊಳ್ಳಲು ಬಾಬಾಸಾಹೇಬ ಅವರ ಹೆಸರು ಹೇಳಿಕೊಂಡು ದಲಿತ ಸಂಘಟನೆಗಳನ್ನು ಬೀದಿಯಲ್ಲಿ ನಿಲ್ಲಿಸುವ ಕೆಲಸ ಮಾಡುತ್ತಿದ್ದಾರೆ.
-ಎನ್.ಮಹೇಶ, ಮುಖಂಡ.
;Resize=(690,390))
;Resize=(128,128))
;Resize=(128,128))
;Resize=(128,128))