ಕನ್ನಡಪ್ರಭ ವಾರ್ತೆ ಸಿಂದಗಿ

ಇಲ್ಲಿನ ನಗರಸಭೆ ಕಚೇರಿಗೆ ಲೋಕಾಯುಕ್ತ ಡಿವೈಎಸ್ಪಿ ಮಲ್ಲಿಕಾರ್ಜುನ ತುಳಸಿಗೇರಿ ನೇತೃತ್ವದ ತಂಡ ಭೇಟಿ ನೀಡಿ ಕಡತಗಳ ಪರಿಶೀಲನೆ ನಡೆಸಿದರು.

ಈ ವೇಳೆ ನಗರಸಭೆಯ ಕೇಲ ಸಿಬ್ಬಂದಿ ಕಚೇರಿಯಲ್ಲಿಯೇ ಇರಲಿಲ್ಲ, ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಕಂಡು ಕೆಂಡಾಮಂಡಲವಾದರು. ನಗರಸಭೆಯ ಪೌರಾಯುಕ್ತ ರವಿ ಶಿರಗುಪ್ಪಿ ಅವರಿಗೆ ಎಷ್ಟು ಜನ ಸಿಬ್ಬಂದಿ ಇದ್ದಾರೆ ಎಂದು ಕೇಳಿದರು. ಅದಕ್ಕೆ ಅವರಿಂದ ಸರಿಯಾದ ಉತ್ತರ ಬರಲಿಲ್ಲ, ಏನಿದು ವ್ಯವಸ್ಥೆ ಎಂದು ತರಾಟೆಗೆ ತೆಗೆದುಕೊಂಡರು. ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿದರು.

ಸಾರ್ವಜನಿಕರು ನಿತ್ಯ ಉತಾರೆ, ಭೋಜಾ, ಜನನ ಹಾಗೂ ಮರಣ ಪ್ರಮಾಣಪತ್ರ ಸೇರಿದಂತೆ ವಿವಿಧ ಕಾರ್ಯಗಳಿಗೆ ನಗರಸಭೆಗೆ ಆಗಮಿಸುತ್ತಾರೆ. ಸಿಬ್ಬಂದಿಯೇ ಇಲ್ಲದಿದ್ದರೆ ಸಾರ್ವಜನಿಕರ ಸ್ಥಿತಿ ಏನು ಎಂದು ಪ್ರಶ್ನಿಸಿದರು. ಸಾರ್ವಜನಿಕರು ಇಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿ ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸಲ್ಲ. ಇಲ್ಲಿ ಯಾರು ಸಿಬ್ಬಂದಿ, ಯಾರು ಹೊರಗಿನರು ತಿಳಿಯದು. ಒಂದು ಕಾರ್ಯಕ್ಕೆ ಸುಮಾರು ಒಂದು ತಿಂಗಳು ಟೈಮ್ ತಗೆದುಕೊಳ್ಳುತ್ತಾರೆ. ದುಡ್ಡು ಪಡೆದುಕೊಂಡರು ಕೆಲಸ ಮಾಡುವುದಿಲ್ಲ. ಇದರಿಂದ ನಾವು ನಿತ್ಯ ನಮ್ಮ ಕಾರ್ಯ ಬಿಟ್ಟು ವಿವಿಧ ದಾಖಲಾತಿಗಳಿಗಾಗಿ ಅಲೆದಾಡುತ್ತಿದ್ದೇವೆ. ಸಿಬ್ಬಂದಿ ವಿರುದ್ಧ ಮೇಲಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಿಂದಗಿ ನಗರಸಭೆಯಲ್ಲಿ ಸೂರಕ್ಕೆ 75ರಷ್ಟು ಸಮಸ್ಯೆಗಳು ಎದ್ದು ಕಾಣುತ್ತಿವೆ. ಪೌರಾಯುಕ್ತರಿಗೆ ಸಿಬ್ಬಂದಿ ಮಾಹಿತಿ ಇಲ್ಲ. ಸಿಬ್ಬಂದಿ ಅರ್ಧಕ್ಕಿಂತ ಹೆಚ್ಚು ಜನ ಹೊರಗಡೆ ಇದ್ದಾರೆ. ಇತ್ತ ಸಾರ್ವಜನಿಕರು ವಿವಿಧ ಕಾರ್ಯಗಳಿಗೆ ನಗರಸಭೆಗೆ ಆಗಮಿಸಿದ್ದಾರೆ ಅವರಿಗೆ ಕೇಳುವವರಿಲ್ಲ. ವಿವಿಧ ದಾಖಲಾತಿಗಳು ಸರಿಯಾಗಿಲ್ಲ. ಮುಖ್ಯವಾಗಿ ಶೌಚಾಲಯ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಶುದ್ಧ ಕುಡಿಯುವ ನೀರಿಲ್ಲ. ಸಾರ್ವಜನಿಕರ ಸಮಸ್ಯೆ ಆಲಿಸುವ ವ್ಯವಧಾನ ಯಾವೊಬ್ಬ ಅಧಿಕಾರಿಗಳಿಗಿಲ್ಲ. ಇಂತಹ ಹತ್ತಾರು ಸಮಸ್ಯೆಗಳನ್ನು ಪರಿಶೀಲಿಸಿ ಅವುಗಳನ್ನು ವರದಿ ಮೂಲಕ ಮೇಲಧಿಕಾರಿಗಳ ಗಮನಕ್ಕೆ ನೀಡಲಾಗುವುದು ಎಂದು ಲೋಕಾಯುಕ್ತ ಡಿವೈಎಸ್ಪಿ ಮಲ್ಲಿಕಾರ್ಜುನ ತುಳಸಿಗೇರಿ ತಿಳಿಸಿದರು.