ಸಾರ್ವಜನಿಕರಿಂದ ಕೇಳಿಬಂದ ದೂರುಗಳ ಹಿನ್ನೆಲೆ ಧಾರವಾಡದ ಲೋಕಾಯುಕ್ತ ಇನ್ಸ್‌ಪೆಕ್ಟರ್ ಹಿರೇಮಠ ನೇತೃತ್ವದ ತಂಡ ಮಂಗಳವಾರ ನಗರದ ಸಬ್ ರಿಜಿಸ್ಟ್ರಾರ್ (ಉಪ ನೋಂದಣಾಧಿಕಾರಿ) ಕಚೇರಿಗೆ ದಿಢೀರ್ ಭೇಟಿ ನೀಡಿ ತೀವ್ರ ಪರಿಶೀಲನೆ ನಡೆಸಿತು.

ಕನ್ನಡಪ್ರಭ ವಾರ್ತೆ ಮುಧೋಳ

ಸಾರ್ವಜನಿಕರಿಂದ ಕೇಳಿಬಂದ ದೂರುಗಳ ಹಿನ್ನೆಲೆ ಧಾರವಾಡದ ಲೋಕಾಯುಕ್ತ ಇನ್ಸ್‌ಪೆಕ್ಟರ್ ಹಿರೇಮಠ ನೇತೃತ್ವದ ತಂಡ ಮಂಗಳವಾರ ನಗರದ ಸಬ್ ರಿಜಿಸ್ಟ್ರಾರ್ (ಉಪ ನೋಂದಣಾಧಿಕಾರಿ) ಕಚೇರಿಗೆ ದಿಢೀರ್ ಭೇಟಿ ನೀಡಿ ತೀವ್ರ ಪರಿಶೀಲನೆ ನಡೆಸಿತು.

ಕಚೇರಿಯ ಕಾರ್ಯವೈಖರಿ ಹಾಗೂ ನೋಂದಣಿ ಪ್ರಕ್ರಿಯೆಯಲ್ಲಿನ ಅಕ್ರಮಗಳ ಕುರಿತು ಸಾರ್ವಜನಿಕರ ದೂರು ದುಮ್ಮಾನ ಆಲಿಸಿದ ಅಧಿಕಾರಿಗಳು, ಕಚೇರಿಯ ಪ್ರಮುಖ ದಾಖಲೆಗಳನ್ನು ಕಲೆಹಾಕಿ ಪರಿಶೀಲಿಸಿದರು.

​ಬಾಂಡ್ ರೈಟರ್‌ಗಳ ಪರವಾನಗಿ ತಪಾಸಣೆ:-ಇದೇ ವೇಳೆ ಕಚೇರಿ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಾಂಡ್ ರೈಟರ್‌ಗಳ (ಪತ್ರ ಬರಹ ಗಾರರ) ಪರವಾನಗಿ (ಲೈಸೆನ್ಸ್) ಹಾಗೂ ದಾಖಲೆಗಳನ್ನು ಲೋಕಾಯುಕ್ತ ತಂಡ ತಪಾಸಣೆಗೆ ಒಳಪಡಿಸಿತು. ಲೋಕಾಯುಕ್ತ ಪೊಲೀಸರು ದಾಳಿ ನಡೆಸಿರುವ ಸುದ್ದಿ ತಿಳಿಯುತ್ತಿದ್ದಂತೆಯೇ, ಕೆಲವು ಬಾಂಡ್ ರೈಟರ್‌ಗಳು ಸ್ಥಳದಿಂದ ಕಾಲ್ಕಿತ್ತಿರುವುದು ಕಂಡುಬಂತು.

ಕಚೇರಿಯಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ಅನಗತ್ಯ ವಿಳಂಬ ಹಾಗೂ ಮಧ್ಯವರ್ತಿಗಳ ಹಾವಳಿಯ ಕುರಿತು ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದು, ತಪಾಸಣೆಯ ಸಂಪೂರ್ಣ ವರದಿಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.