ಲೋಕಾಪುರ: ಪಟ್ಟಣದ ಆರಾಧ್ಯ ದೈವ ಲೋಕೇಶ್ವರ ಜಾತ್ರಾ ಮಹೋತ್ಸವ ಫೆ.೧೨ ರಿಂದ ೨೦ರವರೆಗೆ ವಿಜೃಭಂಣೆಯಿಂದ ನಡೆಯಲಿದೆ.

ಜಾತ್ರೆಯ ನಿಮಿತ್ತ ಫೆ.೧೨ರಂದು ಕಳಸ ಮತ್ತು ನಂದಿಕೋಲು ಮೆರವಣಿಗೆ, ೧೩ರಂದು ಗ್ರಾಮದೇವತೆಗೆ ಉಡಿ ತುಂಬುವುದು, ೧೪ ನಂದಿಕೋಲು ಉತ್ಸವ, ೧೫ರಂದು ಮಹಾಶಿವರಾತ್ರಿ ನಿಮಿತ್ತ ರುದ್ರಾಭಿಷೇಕ, ಲಕ್ಷ ದೀಪೋತ್ಸವ ಹಾಗೂ ಲೋಕೇಶ್ವರ ಸಾಂಸ್ಕೃತಿಕ ಕಲಾ ಅಭಿವೃದ್ಧಿ ಸಂಘದ ವತಿಯಿಂದ ಭಜನಾ ಉತ್ಸವ ನಡೆಯಲಿದೆ. ೧೬ ಸಂಜೆ ೫ ಕ್ಕೆ ಮಹಾ ರಥೋತ್ಸವ ಜರುಗಲಿದೆ. ರಾತ್ರಿ ೧೦ ಗಂಟೆಗೆ ಶ್ರೀ ಜ್ಞಾನೇಶ್ವರ ನಾಟ್ಯ ಸಂಘ ಲೋಕಾಪುರ ಅವರಿಂದ ನೇಗಿಲಿಗೆ ಸಿಂಗಾರ ರೈತನಿಗೆ ಬಂಗಾರ ನಾಟಕ ಪ್ರದರ್ಶನ, ೨೦ರಂದು ಕಳಸ ಇಳಿಸುವುದು. ಕುಸ್ತಿ, ನಂತರ ಮಾನ ಪಾನ ಕಾರ್ಯಕ್ರಮ, ದಿ. ಮಹಾಂತೇಶ ಅಣ್ಣಾ ಅಭಿಮಾನಿ ಬಳಗದ ವತಿಯಿಂದ ರಾತ್ರಿ ನಾಟಕ ಪ್ರದರ್ಶನ ನಡೆಯಲಿದೆ.

ವಿವಿಧ ಸ್ಪರ್ಧೆಗಳು: ೧೭ರಂದು ಚಕ್ಕಡಿ ಸ್ಪರ್ಧೆ, ೧೮ರಂದು ಸುತಬಂಡಿ ಸ್ಪರ್ಧೆ, ೧೯ರಂದು ನಿಮಿಷದ ಚಕ್ಕಡಿ ಓಡಿಸುವ ಸ್ಪರ್ಧೆ, ೨೦ರಂದು ರಂಗೋಲಿ ಸ್ಪರ್ಧೆ ಮತ್ತು ಸಂಜೆ ೪ಕ್ಕೆ ಕುಸ್ತಿ ಸ್ಪರ್ಧೆಗಳು ಜರಗಲಿವೆ.

ಹೊರರಾಜ್ಯಗಳಿಂದಲೂ ಭಕ್ತರ ಆಗಮನ: ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ದಕ್ಷಿಣಕ್ಕಿರುವ ಲೋಕೇಶ್ವರ ಜಾತ್ರೆ ಈ ಭಾಗದ ಬಹುದೊಡ್ಡ ಜಾತ್ರೆಯಾಗಿದೆ. ಈ ಪ್ರಸಿದ್ಧ ಜಾತ್ರೆಗೆ ರಾಜ್ಯದ ಮೂಲೆ-ಮೂಲೆಗಳಿಂದ ಭಕ್ತರ ಆಗಮಿಸುವ ಜತೆಗೆ ಗೋವಾ, ಮಹಾರಾಷ್ಟ್ರ, ಕೇರಳ, ತಮಿಳನಾಡು ರಾಜ್ಯಗಳಲ್ಲಿ ನೆಲೆಸಿರುವ ಭಕ್ತರ ಮಹಾಪೂರವೇ ಹರಿದು ಬರಲಿದೆ.

ಜಾತ್ರಾ ಮಹೋತ್ಸವ ಲೋಕಾಪುರ ಹಾಗೂ ಸುತ್ತಮುತ್ತಲಿನ ಗ್ರಾಮದ ರೈತರು ಮತ್ತು ಪಟ್ಟಣದ ಗಣ್ಯರಾದ ಲೋಕಣ್ಣ ಚನ್ನಪ್ಪ ಉದಪುಡಿ ಅವರ ಸಹಕಾರದೊಂದಿಗೆ ಜಾತ್ರಾ ಕಮೀಟಿ ಅಧ್ಯಕ್ಷ ಕಿರಣರಾವ್ ಮೋಹನರಾವ್ ದೇಸಾಯಿ ಇವರ ನೇತೃತ್ವದಲ್ಲಿ ಜರಗುತ್ತದೆ. ಫೆ.೧೨ ರಿಂದ ೨೦ರವರೆಗೆ ಜಾತ್ರೆಗೆ ಬರುವ ಭಕ್ತರಿಗೆ ಅನ್ನ ಪ್ರಸಾದ ವ್ಯವಸ್ಥೆ ಇರಲಿದೆ ಎಂದು ಜಾತ್ರಾ ಕಮಿಟಿ ತಿಳಿಸಿದೆ.