ಸಾರಾಂಶ
ಭದ್ರಾವತಿ ನಗರದ ನಿವಾಸಿ, ಹಿಮಾಚಲ ಪ್ರದೇಶ ಉಚ್ಚ ನ್ಯಾಯಾಲಯ ನಿವೃತ್ತ ಮುಖ್ಯ ನ್ಯಾಯಾಧೀಶ ಎಲ್. ನಾರಾಯಣ ಸ್ವಾಮಿ ಅವರನ್ನು ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ನ್ಯಾಯಾಂಗ ಸದಸ್ಯರಾಗಿ ಲೋಕಪಾಲಕ್ಕೆ ನೇಮಕಗೊಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಭದ್ರಾವತಿ
ನಗರದ ನಿವಾಸಿ, ಹಿಮಾಚಲ ಪ್ರದೇಶ ಉಚ್ಚ ನ್ಯಾಯಾಲಯ ನಿವೃತ್ತ ಮುಖ್ಯ ನ್ಯಾಯಾಧೀಶ ಎಲ್. ನಾರಾಯಣ ಸ್ವಾಮಿ ಅವರನ್ನು ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ನ್ಯಾಯಾಂಗ ಸದಸ್ಯರಾಗಿ ಲೋಕಪಾಲಕ್ಕೆ ನೇಮಕಗೊಳಿಸಿದ್ದಾರೆ.ನಾರಾಯಣ ಸ್ವಾಮಿ ಭದ್ರಾವತಿ ನಗರದಲ್ಲಿಯೇ ಹುಟ್ಟಿ ಬೆಳೆದವರು. ಅವರ ತಂದೆ ಲಿಂಗಪ್ಪ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಹಾಗೂ ಸಹೋದರ ನಿರಂಜನ ಮೂರ್ತಿ ಮೈಸೂರು ಕಾಗದ ಕಾರ್ಖಾನೆಯಲ್ಲಿ ಉದ್ಯೋಗದಲ್ಲಿ ಇದ್ದರು. ಈ ಹಿನ್ನೆಲೆ ನಾರಾಯಣಸ್ವಾಮಿ ಅವರು ತಮ್ಮ ಬಾಲ್ಯದ ಶಿಕ್ಷಣ ಭದ್ರಾವತಿಯಲ್ಲಿಯೇ ಪೂರೈಸಿದ್ದರು.
ಇದೀಗ ನಾರಾಯಣಸ್ವಾಮಿ ಅವರನ್ನು ನ್ಯಾಯಾಂಗ ಸದಸ್ಯರಾಗಿ ಲೋಕಪಾಲಕ್ಕೆ ನೇಮಕಗೊಳಿಸಲಾಗಿದೆ.ವಿಶೇಷವೆಂದರೆ, ಅವರ ತಮ್ಮ ಶ್ರೀನಿವಾಸ ಬಾಬು ಸಹ ನ್ಯಾಯವಾದಿಯಾಗಿದ್ದು, ರಾಜ್ಯ ವಕೀಲರ ಸಂಘ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 1987ರಲ್ಲಿ ನ್ಯಾಯವಾದಿ ವೃತ್ತಿ ಆರಂಭಿಸಿದ ನಾರಾಯಣಸ್ವಾಮಿ ಸಿವಿಲ್ ವ್ಯಾಜ್ಯ, ಸೇವಾ ವಿಷಯ, ಭೂ ಸುಧಾರಣೆ, ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿ ಅಪಾರವಾದ ಕಾನೂನು ಜ್ಞಾನ, ಅನುಭವ ಹೊಂದಿದ್ದಾರೆ.
2007ರಲ್ಲಿ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕೊಂಡಿದ್ದು, 2009ರಲ್ಲಿ ಕಾಯಂ ಆಗಿದ್ದಾರೆ. 2019ರಲ್ಲಿ ಸುಮಾರು 5 ತಿಂಗಳು ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸಿದ್ದರು. ಅನಂತರ ಹಿಮಾಚಲ ಪ್ರದೇಶ ಉಚ್ಚ ನ್ಯಾಯಾಲಯ ಮುಖ್ಯ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸಿ, 2021ರಲ್ಲಿ ನಿವೃತ್ತಿ ಹೊಂದಿದ್ದಾರೆ.- - -
-ಡಿ28-ಬಿಡಿವಿಟಿ2:ನ್ಯಾ. ನಾರಾಯಣ ಸ್ವಾಮಿ