ದಕ್ಷಿಣದಲ್ಲಿ ಮುಂದುವರಿದ ಬಿಜೆಪಿ ‘ತೇಜಸ್ಸು’

| Published : Jun 05 2024, 01:30 AM IST

ಸಾರಾಂಶ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಎರಡನೇ ಬಾರಿ ಲೋಕಸಭಾ ಚುನಾವಣೆಯಲ್ಲಿ ಜಯಗಳಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಎರಡನೇ ಬಾರಿ ಗೆದ್ದಿದ್ದು, ತನ್ಮೂಲಕ ಈ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವ ಸಂಪ್ರದಾಯ ಮೂರು ದಶಕಗಳ ಮುಂದುವರೆದಿದೆ. 24 ಸುತ್ತಿನ ಮತ ಎಣಿಕೆಯಲ್ಲಿ ಪ್ರತಿ ಸುತ್ತಿನಲ್ಲೂ ಮತಗಳ ಅಂತರವನ್ನು ಹೆಚ್ಚಿಸಿಕೊಂಡ ತೇಜಸ್ವಿ ಸೂರ್ಯ ತಮ್ಮ ಹತ್ತಿರದ ಪ್ರತಿಸ್ಪರ್ಧಿ ಸೌಮ್ಯಾ ರೆಡ್ಡಿ ವಿರುದ್ಧ 2.77 ಲಕ್ಷ ಮತಗಳ ಅಂತರದ ಗೆಲುವು ದಾಖಲಿಸಿದರು.

ಬಿಜೆಪಿಯ ಭದ್ರಕೋಟೆ ಎಂದೇ ಗುರುತಿಸಿಕೊಂಡಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತೊಮ್ಮೆ ಗೆಲುವು ದಾಖಲಿಸಿದೆ. ಜಯನಗರದ ಎಸ್‌ಎಸ್‌ಎಂಎಆರ್‌ವಿ ಕಾಲೇಜಿನಲ್ಲಿ ನಡೆದ ಮತ ಎಣಿಕೆ ಪ್ರಕ್ರಿಯೆಯಲ್ಲಿ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಆರಂಭಿದಿಂದಲೂ ಮುನ್ನಡೆ ಕಾಯ್ದುಕೊಂಡರು. ಆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯಾ ರೆಡ್ಡಿ ಸೇರಿದಂತೆ ಕಾಂಗ್ರೆಸ್‌ನ ಪ್ರಮುಖ ನಾಯಕರು ಮತ ಎಣಿಕೆ ಕೇಂದ್ರದತ್ತ ಸುಳಿಯಲಿಲ್ಲ.

ಈ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಜಯನಗರ ಮತ್ತು ಚಿಕ್ಕಪೇಟೆ ಕ್ಷೇತ್ರಗಳಲ್ಲಿ ಚಲಾವಣೆಗೊಂಡ ಮತಗಳ ಪೈಕಿ ಕಾಂಗ್ರೆಸ್‌ ಅಭ್ಯರ್ಥಿ ಪರವಾಗಿ ಹೆಚ್ಚಿನ ಮತಗಳು ಚಲಾವಣೆಯಾಗಿದ್ದು ಬಿಟ್ಟರೆ, ಉಳಿದ 6 ಕ್ಷೇತ್ರಗಳಲ್ಲಿ ತೇಜಸ್ವಿ ಸೂರ್ಯ ಪರವಾಗಿ ಹೆಚ್ಚಿನ ಮತಗಳು ಚಲಾವಣೆಗೊಂಡವು.

ಮತ ಎಣಿಕೆ ಪ್ರಕ್ರಿಯೆ 10 ನಿಮಿಷ ತಡವಾಗಿ ಆರಂಭವಾಯಿತು. ಮೊದಲಿಗೆ ಅಂಚೆ ಮತ ಎಣಿಕೆ ನಡೆಸಲಾಯಿತು. ತೇಜಸ್ವಿ ಪರವಾಗಿ 3,050 ಅಂಚೆ ಮತಗಳು ಚಲಾವಣೆ ಗೊಂಡಿದ್ದರೆ, ಸೌಮ್ಯಾ ರೆಡ್ಡಿ ಪರವಾಗಿ ಕೇವಲ 993 ಮತಗಳು ಚಲಾವಣೆ ಗೊಂಡಿದ್ದವು. ಆಮೂಲಕ ಅಂಚೆ ಮತದಲ್ಲಿಯೇ ತೇಜಸ್ವಿ ಸೂರ್ಯ 2,057 ಮತಗಳ ಮುನ್ನಡೆ ಪಡೆದರು.

ತಂದೆ ಕ್ಷೇತ್ರದಲ್ಲೇ ಸೌಮ್ಯಾಗೆ ಹಿನ್ನಡೆ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ 8 ಕ್ಷೇತ್ರಗಳ ಪೈಕಿ ಚಿಕ್ಕಪೇಟೆ ಕ್ಷೇತ್ರದಲ್ಲಿ ಸೌಮ್ಯಾ ರೆಡ್ಡಿಗೆ ತೇಜಸ್ವಿ ಸೂರ್ಯಗಿಂತ 1,471 ಮತಗಳು ಹಾಗೂ ಜಯನಗರದಲ್ಲಿ 2,875 ಹೆಚ್ಚಿನ ಮತಗಳು ಚಲಾವಣೆ ಗೊಂಡಿದ್ದವು. ಉಳಿದಂತೆ ಕಾಂಗ್ರೆಸ್‌ ಶಾಸಕರಿರುವ ಗೋವಿಂದರಾಜನಗರ, ವಿಜಯನಗರಗಳಲ್ಲಿ ತೇಜಸ್ವಿ ಸೂರ್ಯಗೆ ಭರ್ಜರಿ ಮುನ್ನಡೆ ದೊರೆಯಿತು.

ಅದರಲ್ಲೂ ಸೌಮ್ಯಾ ರೆಡ್ಡಿ ತಂದೆ ಸಚಿವ ರಾಮಲಿಂಗಾರೆಡ್ಡಿ ಪ್ರತಿನಿಧಿಸುವ ಬಿಟಿಎಂ ಲೇಔಟ್‌ ಕ್ಷೇತ್ರದಲ್ಲಿಯೇ ತೇಜಸ್ವಿ ಸೂರ್ಯಗೆ 9,349 ಮತಗಳ ಮುನ್ನಡೆ ದೊರೆತು ರಾಮಲಿಂಗಾರೆಡ್ಡಿಗೆ ಮುಖಭಂಗವಾಗುವಂತಾಯಿತು. ಉಳಿದಂತೆ ಬೊಮ್ಮನಹಳ್ಳಿ, ಪದ್ಮನಾಭನಗರದಲ್ಲಿ 52 ಸಾವಿರಕ್ಕಿಂತ ಹೆಚ್ಚು ಹಾಗೂ ಬಸವನಗುಡಿ ಕ್ಷೇತ್ರದಲ್ಲಿ 82 ಸಾವಿರಕ್ಕೂ ಹೆಚ್ಚಿನ ಮತಗಳ ಮುನ್ನಡೆಯನ್ನು ತೇಜಸ್ವಿ ಸೂರ್ಯ ಪಡೆದುಕೊಂಡರು.

ಠೇವಣಿ ಕಳೆದುಕೊಂಡ 20 ಮಂದಿ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 22 ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಅದರಲ್ಲಿ ತೇಜಸ್ವಿ ಸೂರ್ಯ, ಸೌಮ್ಯಾ ರೆಡ್ಡಿ ಹೊರತುಪಡಿಸಿ ಉಳಿದ 20 ಮಂದಿ ಠೇವಣಿ ಕಳೆದುಕೊಂಡರು. ಅಲ್ಲದೆ, ಅವರಿಗಿಂತ ನೋಟಾ ಮತಗಳೇ ಹೆಚ್ಚು ಚಲಾವಣೆಗೊಂಡಿದ್ದವು. ನೋಟಾಗೆ 7,857 ಮತಗಳು ಚಲಾವಣೆಗೊಂಡಿದ್ದರೆ, ಠೇವಣಿ ಕಳೆದುಕೊಂಡ 20 ಅಭ್ಯರ್ಥಿಗಳು ಅದರ ಹತ್ತಿರಕ್ಕೂ ಸುಳಿಯಲಿಲ್ಲ.

ಬಿಜೆಪಿ ಸಂಭ್ರಮಕ್ಕೆ ಪೊಲೀಸರ ತಡೆ

ಚುನಾವಣಾ ಫಲಿತಾಂಶ ತೇಜಸ್ವಿ ಸೂರ್ಯ ಪರವಾಗಿ ಬರುತ್ತಿದ್ದಂತೆ ಮತ ಎಣಿಕೆ ಕೇಂದ್ರದ ಸುತ್ತ ಬಿಜೆಪಿ ಕಾರ್ಯಕರ್ತರು ಜಮಾಯಿಸಿದ್ದರು. ಪ್ರತಿ ಸುತ್ತಿನ ಮತ ಎಣಿಕೆ ಮುಕ್ತಾಯವಾದಾಗಲೂ ಜಯಘೋಷ ಕೂಗುತ್ತಾ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಅಲ್ಲದೆ, ಅಂತಿಮ ಸುತ್ತಿನ ಮತ ಎಣಿಕೆ ಮುಕ್ತಾಯದ ವೇಳೆಗೆ ನೂರಾರು ಸಂಖ್ಯೆಯ ಬಿಜೆಪಿ ಕಾರ್ಯಕರ್ತರು ಮತ ಎಣಿಕೆ ಕೇಂದ್ರದ ಹೊರಭಾಗದಲ್ಲಿ ಜಮಾಯಿಸಿ, ಡಿಜೆ ಸೆಟ್‌ಗಳ ಮೂಲಕ ಹಾಡು ಹಾಕಲು ಮುಂದಾದರು. ಆದರೆ, ಅದಕ್ಕೆ ತಡೆಯೊಡ್ಡಿದ ಪೊಲೀಸರು, ಇದಕ್ಕೆಲ್ಲ ಅವಕಾಶವಿಲ್ಲ ಎಂದು ಬಿಜೆಪಿ ಕಾರ್ಯಕರ್ತರನ್ನು ಚದುರಿಸಿದರು.

ಯಾರಿಗೆ ಎಷ್ಟು ಮತ?

ತೇಜಸ್ವಿ ಸೂರ್ಯ (ಬಿಜೆಪಿ): 7,50,830

ಸೌಮ್ಯಾ ರೆಡ್ಡಿ (ಕಾಂಗ್ರೆಸ್‌): 4,73,747

ನೋಟಾ: 7,857

ಗೆಲುವಿನ ಅಂತರ: 2,77,083

ವಿಧಾನಸಭಾ ಕ್ಷೇತ್ರವಾರು ಮತ ಗಳಿಕೆ ವಿವರ:

ಕ್ಷೇತ್ರ ಬಿಜೆಪಿಕಾಂಗ್ರೆಸ್‌ಅಂತರ

ಗೋವಿಂದರಾಜನಗರ1,02,32153,93648,385

ವಿಜಯನಗರ95,26162,72132,540

ಚಿಕ್ಕಪೇಟೆ65,33166,8021,471

ಬಸನಗುಡಿ1,04,58322,48082,103

ಪದ್ಮನಾಭನಗರ1,08,27455,40652,868

ಬಿಟಿಎಂ ಲೇಔಟ್‌72,54163,1929,349

ಜಯನಗರ61,70564,5802,875

ಬೊಮ್ಮನಹಳ್ಳಿ1,37,76483,63754,127

ಅಂಚೆ ಮತ3,0509932,057

ಒಟ್ಟು7,50,8304,73,7472,77,083

ಕೋಟ್‌

ಕಾಂಗ್ರೆಸ್‌ನವರು ಕೋಟಿ ಕೋಟಿ ಹಣ ಖರ್ಚು ಮಾಡಿದರೂ ಕ್ಷೇತ್ರದ ಮತದಾರರು ಕೆಲಸ ಮಾಡುವವರಿಗೆ ಮತ ಚಲಾಯಿಸಿದ್ದಾರೆ. ಎರಡನೇ ಬಾರಿಗೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸಂಸದನಾಗಿ ಆಯ್ಕೆ ಮಾಡಿದ್ದಾರೆ. ಕ್ಷೇತ್ರದ ಮತದಾರರಿಗೆ, ನನ್ನ ಪರವಾಗಿ ನಿಂತ ಪಕ್ಷದ ನಾಯಕರು, ಕಾರ್ಯಕರ್ತರಿಗೆ ಧನ್ಯವಾದಗಳು. ಕಳೆದ 5 ವರ್ಷಗಳಲ್ಲಿ ಮಾಡಿದ ಕೆಲಸಕ್ಕಿಂತ 10 ಪಟ್ಟು ಹೆಚ್ಚಿನ ಕೆಲಸ ಮಾಡಲು ಶಕ್ತಿ ಬಂದಿದೆ.

-ತೇಜಸ್ವಿ ಸೂರ್ಯ, ಬಿಜೆಪಿ ಅಭ್ಯರ್ಥಿ.