ಸಾರಾಂಶ
ತರೀಕೆರೆ: ಲೋಕಸಭಾ ಚುನಾವಣೆಯು ದೇಶದ ಭವಿಷ್ಯ ರೂಪಿಸುವ ಚುನಾವಣೆಯಾಗಿದೆ ಎಂದು ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಸೋಮವಾರ ಭಾರತೀಯ ಜನತಾ ಪಕ್ಷ ತರೀಕೆರೆ ಮಂಡಲವತಿಯಿಂದ ಪಟ್ಟಣದ ಬಯಲು ರಂಗಮಂದಿರದಲ್ಲಿ ಏರ್ಪಾಡಾಗಿದ್ದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣಾ ಕ್ಷೇತ್ರದ ಬಿಜೆಪಿ ಜೆಡಿಎಸ್ ಮೈತ್ರಿ ಸಭೆ-ಚುನಾವಣಾ ಪ್ರಚಾರ ಸಭೆ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ಲೋಕಸಭಾ ಚುನಾವಣೆ ರಾಜಕೀಯ ಪಕ್ಷಗಳ ನಡುವೆ ಅಲ್ಲ, ಜಾತಿಗಳ ನಡುವೆಯೂ ಅಲ್ಲ, ದೇಶದ ಭವಿಷ್ಯ ರೂಪಿಸುವ ಚುನಾವಣೆಯಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಉಜ್ವಲ ಭವಿಷ್ಯ ರೂಪಿಸಿದ್ದಾರೆ. ದೇಶಕ್ಕೆ ದೊಡ್ಡ ಆರ್ಥಿಕ ಶಕ್ತಿ ತಂದುಕೊಟ್ಟಿದ್ದಾರೆ. ದೇಶದ ಜನರಿಗೆ ವಿಶ್ವಾಸ ತಂದುಕೊಟ್ಟಿದ್ದಾರೆ. ಭ್ರಷ್ಟಾಚಾರ ರಹಿತ ಅಡಳಿತ ನೆಡೆಸಿದ ಕೀರ್ತಿ ಪ್ರಧಾನಿ ಮೋದಿ ಅವರಿಗೆ ಇದೆ. ಕಳೆದ 10 ವರ್ಷದಲ್ಲಿ ದೇಶದಲ್ಲಿ ಆರ್ಥಿಕ ಶಕ್ತಿಯನ್ನು ರೂಪಿಸಲಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ನವರು ಕೊಡೋದಕ್ಕಿಂತಲೂ ಕಿತ್ಕಳೋದೆ ಹೆಚ್ಚು, ಕಾಂಗ್ರೆಸ್ ಪಕ್ಷದ ಅಡಳಿತದಲ್ಲಿ ಕಳೆದ 9 ತಿಂಗಳಲ್ಲಿ ಎಲ್ಲ ದರಗಳು ಹೆಚ್ಚಾಗಿದೆ. ಉಚಿತ ಎನ್ನುವುದು ಕೇವಲ ಭ್ರಮೆ ಅಷ್ಟೆ. ರಾಜ್ಯದಲ್ಲಿ ಏನೂ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಬಡವರ ಪರವಾಗಿ, ರೈತರ ಪರವಾಗಿ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ. ಸರ್ಕಾರಿ ನೌಕರರಿಗೆ ಸಂಬಳ ಕೊಡುವುದಕ್ಕೂ ಹಣ ಇಲ್ಲದ ಹಾಗೆ ಆಗುತ್ತದೆ, ಬಡವರ ರೈತರ ವಿರೋಧಿ ಸರ್ಕಾರ ಈ ಕಾಂಗ್ರೆಸ್ ಸರ್ಕಾರ, ರಾಜ್ಯದಲ್ಲಿ ಕಾಂಗ್ರೆಸ್ ಧೂಳಿಪಟವಾಗುತ್ತದೆ, ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಪಕ್ಷ 28 ಸ್ಥಾನಗಳನ್ನು ಗೆಲ್ಲುತ್ತದೆ. ಬಿಜೆಪಿ ಜೆಡಿಎಸ್ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಸಜ್ಜನ ರಾಜಕಾರಿಣಿ ಆಗಿದ್ದಾರೆ ಎಂದು ಹೇಳಿದರು.ಮಾಜಿ ಶಾಸಕ ಡಿ.ಎಸ್.ಸುರೇಶ್ ಮಾತನಾಡಿ, ಬಿಜೆಪಿ ಜೆಡಿಎಸ್ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಸರಳ ವ್ಯಕ್ತಿಯಾಗಿದ್ದಾರೆ. ದೇಶದ ಭದ್ರತೆ, ಸುರಕ್ಷತೆ ಮತ್ತು ಅಭಿವೃದ್ಧಿ ದೃಷ್ಟಿಯಿಂದ ನರೇಂದ್ರ ಮೋದಿ ಮತ್ತೆ ದೇಶದ ಪ್ರಧಾನಿಯಾಗಲು ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಅತ್ಯಂತ ಹೆಚ್ಚಿನ ಮತ ನೀಡಿ ಗೆಲ್ಲಿಸಬೇಕು. ಬಿಜೆಪಿ ಸರ್ಕಾರ ಕ್ಷೇತ್ರಕ್ಕೆ ಮಂಜೂರು ಮಾಡಿದ 1200 ಕೋಟಿ ರು. ವೆಚ್ಚದ ನೀರಾವರಿ ಕಾಮಗಾರಿ ಶೇ.75ರಷ್ಟು ಭಾಗ ಆಗಿದೆ. ಆದರೆ ಈಗ ಅದು ನಿಂತಿದೆ. ಈ ಬಗ್ಗೆ ಚುನಾವಣೆ ಮುಗಿದ ನಂತರ ಪಕ್ಷದಿಂದ ಖಂಡಿತ ಪ್ರತಿಭಟನೆ ನಡೆಸಲಾಗುತ್ತದೆ ಎಂದರು.
ನರೇಂದ್ರ ಮೋದಿ ದೇಶಕ್ಕೆ ಪ್ರಧಾನಿಯಾದ ಮೇಲೆ ಅಡಕೆಗೆ ಒಳ್ಳೆಯ ಬೆಲೆ ಬಂತು, ಅಡಿಕೆ ಬೆಲೆಯು 18 ಸಾವಿರ ರು.ನಿಂದ 75 ಸಾವಿರ ರು.ಗೆ ಏರಿಕೆಯಾಯಿತು. ಮಾಜಿ ಸಚಿವ ಸಿ.ಟಿ.ರವಿ ಅವರ ನೇತೃತ್ವದಲ್ಲಿ ಜಲಜೀವನ್ ಯೋಜನೆಯಲ್ಲಿ ಮನೆ ಮನೆಗೆ ಶುದ್ಧ ಕುಡಿಯುವ ನೀರು ಮಂಜೂರಾಯಿತು. ಬಿಜೆಪಿ ಜೆಡಿಎಸ್ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿಗೆ ಅತ್ಯಂತ ಹೆಚ್ಚಿನ ಮತ ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.ಮಾಜಿ ಸಚಿವ ಸಿ.ಟಿ.ರವಿ ಮಾತನಾಡಿ, ಹಿಂದುತ್ವಕ್ಕಾಗಿ ರಾಜಕಾರಣ, ಮೋದಿ ದೇಶಕ್ಕೆ ಮತ್ತೊಮ್ಮೆ ಪ್ರಧಾನಿಗಳಾಗಬೇಕು. ಬಿಜೆಪಿ ಜೆಡಿಎಸ್
ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಅತ್ಯಂತ ಹೆಚ್ಚಿನ ಮತ ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.ಮಾಜಿ ಶಾಸಕ ಎಸ್.ಎಂ.ನಾಗರಾಜ್ ಅವರು ಮಾತನಾಡಿ ದೇಶ ಸದೃಡವಾಗಿರಲು ನರೇಂದ್ರ ಮೋದಿಯವರು ಮತ್ತೆ ಪ್ರಧಾನ ಮಂತ್ರಿಗಳಾಗಬೇಕು. ಸಂತೋಷದಿಂದ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇನೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಬೋಜೇಗೌಡ ಮಾತನಾಡಿ, ಬಿಜೆಪಿ ಜೆಡಿಎಸ್ ಪಕ್ಷಗಳ ಹೊಂದಾಣಿಕೆ ಫಲಪ್ರದವಾಗಿದೆ, ನಕೇಂದ್ರ ಮೋದಿ ಅವರು ಮತ್ತೆ ಪ್ರಧಾನಿಗಳಾಗಬೇಕು, ಬಿಜೆಪಿ ಜೆಡಿಎಸ್ ಪಕ್ಷದ ಅಭ್ಯರ್ಥಿಗೆ ಅತ್ಯಂತ ಹೆಚ್ಚಿನ ಮತ ನೀಡಿ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.ಬಿಜೆಪಿ ಜೆಡಿಎಸ್ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ ಡಿ.ಎಸ್.ಸುರೇಶ್ ಅವರು ಮತ್ತೆ ಶಾಸಕರಾಗುತ್ತಾರೆ, ಸ್ವಾಭಿಮಾನಿ ಭಾರತ ನಿರ್ಮಾಣವಾಗಬೇಕು, 22 ಲಕ್ಷ ಕ್ವಿಂಟಾಲ್ ಅಕ್ತಿಯನ್ನು ಪ್ರತಿ ತಿಂಗಳು ಕೇಂದ್ರ ಸರ್ಕಾರ ಉಚಿತವಾಗಿ ನೀಡುತ್ತಿದೆ. ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಗಳಾಗಬೇಕು, ಅತ್ಯಂತ ಹೆಚ್ಚಿನ ಮತ ನೀಡಿ ನನ್ನನ್ನು ಗೆಲ್ಲಿಸಬೇಕೆಂದು ಅವರು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಎಸ್.ಎಂ.ನಾಗರಾಜ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರು ಕೆ.ಆರ್.ಧೃವಕುಮಾರ್, ಮುಖಂಡರಾದ ಅಜ್ಜಂಪುರ ಕೃಷ್ಣಮೂರ್ತಿ,ಪುರಸಭೆ ಪಕ್ಷೇತರ ಸದಸ್ಯ ಟಿ.ಎಂ.ಜೋಜರಾಜ್ ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.ಮಾಜಿ ಸಚವರಾದ ಮಾಧುಸ್ವಾಮಿ, ಆರಗ ಜ್ಞಾನೇಂದ್ರ, ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷರು ದೇವರಾಜ ಶೆಟ್ಟಿ, ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷರು ರಂಚಿತ ಅಜಿತ್ ಕುಮಾರ್, ಜಿಡಿಎಸ್ ತಾಲೂಕು ಅಧ್ಯಕ್ಷರು ಎಂ.ನರೇಂದ್ರ, ಮಾಜಿ ಶಾಸಕ ಜೀವರಾಜ್, ಲೋಕಸಭಾ ಚುನಾವಣೆ ಉಸ್ತುವಾರಿಗಳಾದ ಪ್ರಮೋದ್ ಮದ್ವರಾಜ್, ಮುಖಂಡರಾದ ಲೋಹಿತ್, ಬೇಲೇನಹಳ್ಳಿ ಸೋಮಶೇಖರ್, ರಾಜಶೇಖರ್, ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ತಾಲೂಕು ಬಿ.ಜೆ.ಪಿ.ಮಂಡಲ ಅಧ್ಯಕ್ಷರು ಪ್ರತಾಪ್ ಗರಗದಹಳ್ಳಿ ಸ್ವಾಗತಿಸಿದರು. ಲೋಹಿತ್ ನಿರೂಪಿಸಿದರು.