ಸಾರಾಂಶ
ಎಸ್‌ಯುಸಿಐ ಪಕ್ಷವು ದೇಶದ 19 ರಾಜ್ಯ, 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ನಮ್ಮ ಪಕ್ಷವು ಒಟ್ಟು 151 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಕರ್ನಾಟಕದಲ್ಲಿ ಈ ಬಾರಿ ಒಟ್ಟು 19 ಕ್ಷೇತ್ರಗಳಲ್ಲಿ ಸ್ಪರ್ಧೆ ನಡೆಸುತ್ತಿದೆ ಎಂದು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು.
ಕನ್ನಡಪ್ರಭ ವಾರ್ತೆ ಯಾದಗಿರಿ
ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷವು ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧೆ ನಡೆಸಲು ನಿರ್ಧರಿಸಿದೆ, ಕರ್ನಾಟಕ ರಾಜ್ಯದ 19 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ಪಕ್ಷದ ರಾಜ್ಯ ಮುಖಂಡ ಕೆ. ಸೋಮಶೇಖರ ಹೇಳಿದರು.ಈ ಕುರಿತು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಧಿಕಾರದಲ್ಲಿರುವಾಗ ಜನರ ಕೆಂಗಣ್ಣಿಗೆ ಗುರಿಯಾಗುವ ಬಂಡವಾಳಶಾಹಿ ಪಕ್ಷಗಳು ಹೊಸ ಮುಖಗಳೊಂದಿಗೆ, ಹೊಸ ಗ್ಯಾರಂಟಿಗಳೊಂದಿಗೆ ಮತ್ತೆ ಜನರ ಬಳಿಗೆ ಬರುತ್ತಿವೆ. ಇನ್ನೊಂದೆಡೆ ದುಡಿಯುವ ಜನರ, ರೈತ, ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ದಿನನಿತ್ಯ ಹೋರಾಟ ಕಟ್ಟುತ್ತಿರುವ ಎಸ್‌ಯುಸಿಐ ಪಕ್ಷವು ದೇಶದ 19 ರಾಜ್ಯ, 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ನಮ್ಮ ಪಕ್ಷವು ಒಟ್ಟು 151 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಕರ್ನಾಟಕದಲ್ಲಿ ಈ ಬಾರಿ ಒಟ್ಟು 19 ಕ್ಷೇತ್ರಗಳಲ್ಲಿ ಸ್ಪರ್ಧೆ ನಡೆಸುತ್ತಿದೆ ಎಂದು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು.
ಕಳೆದ 10 ವರ್ಷಗಳಿಂದ ದೇಶವನ್ನು ಆಳುತ್ತಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಜನರ ಬದುಕನ್ನು ಮೂರಾಬಟ್ಟೆ ಮಾಡಿದೆ. 2014ರಲ್ಲಿ ಬಿಜೆಪಿ ದನಿ ಎತ್ತಿದ ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರದಂತಹ ಸಮಸ್ಯೆಗಳ ಕುರಿತು ಈಗ ಮೌನವಾಗಿದೆ. ಅಬ್ಬರದ ಪ್ರಚಾರ ಮಾಡಿದ ‘ಗುಜರಾತ್ ಮಾದರಿ’ ಅದೃಶ್ಯವಾಗಿದೆ. ವರ್ಷಕ್ಕೆ 2 ಕೋಟಿ ಉದ್ಯೋಗದ ಮಾತಿರಲಿ, ಭಾರತದ ಯುವಕರು ನಿರುದ್ಯೋಗದ ಕಷ್ಟ ತಡೆಯಲಾಗದೆ ಯುದ್ಧಪೀಡಿತ ಇಸ್ರೇಲ್, ರಷ್ಯಾಗಳಿಗೆ ಕೆಲಸ ಹುಡುಕಿಕೊಂಡು ಹೋಗುತ್ತಿದ್ದಾರೆಂದು ಎಂದು ದೂರಿದರು.ರಾಯಚೂರು (ಎಸ್‌ಟಿ) ಕ್ಷೇತ್ರದಿಂದ ರಾಮಲಿಂಗಪ್ಪ ಸ್ಪರ್ಧಿಸಲಿದ್ದಾರೆಂದು ಅವರ ಕಿರು ಪರಿಚಯ ವಿವರಿಸಿದರು. ಡಾ. ಚಂದ್ರಗಿರೀಶ್, ಶರಣಗೌಡ ಗೂಗಲ್ ಹಾಗೂ ಡಿ. ಉಮಾದೇವಿ ಇದ್ದರು.