ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಮಂಡ್ಯ ಜಿಲ್ಲೆ ೨೪ನೇ ಸ್ಥಾನಕ್ಕೆ ಕುಸಿತ ಕಂಡಿದೆ. ಈ ಬಾರಿ ಶೇ.೮೦.೫೬ರಷ್ಟು ಫಲಿತಾಂಶ ಗಳಿಸಿದೆ. ಈ ಸಾಲಿನಲ್ಲಿ ಶೇಕಡಾವಾರು ಫಲಿತಾಂಶದಲ್ಲಿ ೩.೦೯ರಷ್ಟು ಸುಧಾರಣೆಯನ್ನು ಕಂಡಿದ್ದರೂ ಸ್ಥಾನಪಲ್ಲಟಗೊಂಡಿದೆ. ಕಳೆದ ವರ್ಷ ಮಂಡ್ಯ ಜಿಲ್ಲೆ ಶೇ.೭೭.೪೭ರಷ್ಟು ಫಲಿತಾಂಶದೊಂದಿಗೆ ೨೦ನೇ ಸ್ಥಾನ ಪಡೆದುಕೊಂಡಿತ್ತು.ಜಿಲ್ಲೆಯಲ್ಲಿ ಒಟ್ಟು ೧೨,೨೧೮ ವಿದ್ಯಾರ್ಥಿಗಳು ಹೊಸದಾಗಿ ಪರೀಕ್ಷೆ ಬರೆದಿದ್ದು, ಈ ಪೈಕಿ ೯೮೪೩ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ೨೦೨೨ರಲ್ಲಿ ಶೇ.೫೮.೭೭ರಷ್ಟು ಫಲಿತಾಂಶದೊಅದಿಗೆ ೨೭ನೇ ಸ್ಥಾನದಲ್ಲಿದ್ದ ಜಿಲ್ಲೆಯು ಕಳೆದ ವರ್ಷ ೭ ಸ್ಥಾನಗಳ ಬಡ್ತಿಯೊಂದಿಗೆ ೨೦ನೇ ಸ್ಥಾನಕ್ಕೇರಿತ್ತು. ಆದರೆ, ಈ ವರ್ಷ ಮತ್ತೆ ನಾಲ್ಕು ಸ್ಥಾನಗಳ ಕುಸಿತ ಕಂಡಿದೆ.
ಕೋವಿಡ್ ಕಾರಣದಿಂದ ಎಲ್ಲ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಿದ ೨೦೨೧ರ ಕೋವಿಡ್ ವರ್ಷದ ಹೊರತಾಗಿ ಕಳೆದ ೧೫ ವರ್ಷಗಳಲ್ಲಿ ಮಂಡ್ಯ ಜಿಲ್ಲೆಯು ಇದೇ ಮೊದಲ ಬಾರಿಗೆ ಗರಿಷ್ಠ(ಶೇ.೮೦.೫೬) ಫಲಿತಾಂಶ ಪಡೆದಿದೆ. ಕಳೆದ ವರ್ಷದ ಫಲಿತಾಂಶವೇ ಈವರೆಗಿನ ಗರಿಷ್ಠ ಸಾಧನೆಯಾಗಿತ್ತು. ಈ ವರ್ಷ ಅದಕ್ಕಿಂತಲೂ ಹೆಚ್ಚಿನ ಫಲಿತಾಂಶ ಬಂದಿದೆ.ಈ ಹಿಂದೆ(೨೦೧೭) ಇದಕ್ಕಿಂತಲೂ ಕಡಿಮೆ ಫಲಿತಾಂಶ(ಶೇ.೫೬.೪೩) ಪಡೆದಿದ್ದರೂ ರಾಜ್ಯದಲ್ಲೇ ೧೭ನೇ ಸ್ಥಾನದಲ್ಲಿತ್ತು. ಆದರೆ, ಕಳೆದೊಂದು ದಶಕದಲ್ಲಿ ಮಂಡ್ಯ ಜಿಲ್ಲೆಯು ಪಿಯುಸಿ ಪರೀಕ್ಷೆಯಲ್ಲಿ ಗರಿಷ್ಠ ಫಲಿತಾಂಶದೊಅದಿಗೆ ಗಣನೀಯ ಸಾಧನೆ ಮಾಡಿದೆ. ಈ ವರ್ಷ ೩೯೩ ಖಾಸಗಿ ಅಭ್ಯರ್ಥಿಗಳು, ೮೪೬ ಮಂದಿ ಪುನರಾವರ್ತಿ ವಿದ್ಯಾರ್ಥಿಗಳು ಸೇರಿ ಒಟ್ಟು ೧೩,೪೫೭ ಮಂದಿ ಪರೀಕ್ಷೆ ತೆಗೆದುಕೊಂಡಿದ್ದರು. ಇವರಲ್ಲಿ ೧೦,೩೮೦(ಶೇ.೭೭.೧೩) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಆದರೆ, ಹೊಸ ವಿದ್ಯಾರ್ಥಿಗಳ(ಫ್ರೆರ್ಸ್) ಉತ್ತೀರ್ಣತೆಯನ್ನು ಮಾತ್ರ ಶೈಕ್ಷಣಿಕ ಸಾಧನೆಯಲ್ಲಿ ಪರಿಗಣಿಸಲಾಗುತ್ತದೆ. ಹೀಗಾಗಿ ಜಿಲ್ಲೆಯಲ್ಲಿ ಈ ವರ್ಷ ಹೊಸದಾಗಿ ಪರೀಕ್ಷೆ ಬರೆದಿದ್ದ ೧೨,೨೧೮ ಮಂದಿ ವಿದ್ಯಾರ್ಥಿಗಳಲ್ಲಿ ೯೮೪೩ (ಶೇ.೮೦.೫೬) ಮಂದಿ ತೇರ್ಗಡೆ ಹೊಂದಿದ್ದಾರೆ. ಕಳೆದ ವರ್ಷ ೯೩೭೮ ಮಕ್ಕಳು ಉತ್ತೀರ್ಣರಾಗಿದ್ದರು. ಈ ವರ್ಷ ಇನ್ನೂ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಪಾಸಾಗಿದ್ದಾರೆ.
ನಿರೀಕ್ಷೆಯಂತೆ ಈ ಬಾರಿಯೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಣ್ಣು ಮಕ್ಕಳೇ ಮೇಲುಗೈ ಸಾಧಿಸಿದ್ದಾರೆ. ಖಾಸಗಿ, ಪುನಾರಾವರ್ತಿತ ಸೇರಿದಂತೆ ಪರೀಕ್ಷೆ ಬರೆದಿದ್ದ ೭೫೬೦ ವಿದ್ಯಾರ್ಥಿನಿಯರಲ್ಲಿ ೬೧೬೪(ಶೇ.೮೧.೫೩) ಮಂದಿ ಹಾಗೂ ೫೮೯೭ ಗಂಡು ಮಕ್ಕಳಲ್ಲಿ ೪೨೧೬(ಶೇ.೭೧.೪೯) ಮಂದಿ ತೇರ್ಗಡೆ ಹೊಂದಿದ್ದಾರೆ. ಆದರೆ, ಈ ವರ್ಷ ಗ್ರಾಮೀಣ ವಿದ್ಯಾರ್ಥಿಗಳಿಗಿಂತ(ಶೇ.೭೯.೭೮) ನಗರ ಪ್ರದೇಶದ ವಿದ್ಯಾರ್ಥಿಗಳು(ಶೇ.೭೭.೩೮) ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗಿ ಗಮನ ಸೆಳೆದಿದ್ದಾರೆ.ವಿಜ್ಞಾನ ವಿಭಾಗಕ್ಕೆ ಹೆಚ್ಚಿನ ಫಲಿತಾಂಶ:
ಮೂರು ವಿಭಾಗಗಳಿಗೆ ಹೋಲಿಸಿದರೆ ವಿಜ್ಞಾನ ವಿಭಾಗಕ್ಕೆ ಗರಿಷ್ಠ ಫಲಿತಾಂಶ(ಶೇ.೮೮.೪೨) ಬಂದಿದೆ. ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ತೆಗೆದುಕೊಂಡಿದ್ದ ೫,೮೯೧ ವಿದ್ಯಾರ್ಥಿಗಳಲ್ಲಿ ೫,೨೦೯ ಮಂದಿ ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದಿದ್ದ ೪,೦೩೦ ವಿದ್ಯಾರ್ಥಿಗಳಲ್ಲಿ ೩,೧೯೨ ಮಂದಿ(ಶೇ.೭೯.೨೧) ಪಾಸಾಗಿದ್ದಾರೆ. ಇನ್ನು ಕಲಾ ವಿಭಾಗದ ೨,೨೯೭ ವಿದ್ಯಾರ್ಥಿಗಳಲ್ಲಿ ೧೪೪೨ ಮಂದಿ(ಶೇ.೬೨.೭೮) ತೇರ್ಗಡೆ ಹೊಂದಿದ್ದಾರೆ.೨೦೨೧ರಲ್ಲಿ ೧೦೦ರಷ್ಟು ಫಲಿತಾಂಶ:
ಕೊರೊನಾ ಕಾರಣದಿಂದಾಗಿ ೨೦೨೧ರಲ್ಲಿ ಪರೀಕ್ಷೆ ತೆಗೆದುಕೊಂಡಿದ್ದ ಎಲ್ಲ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗಿತ್ತು. ಹೀಗಾಗಿ ಆ ವರ್ಷ ಜಿಲ್ಲೆಗೆ ಶೇ.೧೦೦ರಷ್ಟು ಫಲಿತಾಂಶ ಬಂದಿತ್ತು. ಆದರೆ, ವಿದ್ಯಾರ್ಥಿಗಳು ಪಡೆದಿದ್ದ ಫಲಿತಾಂಶದ ಆಧಾರದ ಮೇಲೆ ಜಿಲ್ಲೆಗಳಿಗೆ ನೀಡಿದ್ದ ಗ್ರೇಡಿಂಗ್‌ನಲ್ಲಿ ಮಂಡ್ಯಗೆ ೧೯ನೇ ಸ್ಥಾನ ಲಭಿಸಿತ್ತು.