ಪಿಯುಸಿ ಫಲಿತಾಂಶ: ಮುಂದುವರಿದ ಕಳಪೆ ಸಾಧನೆ

| Published : Apr 11 2024, 12:52 AM IST

ಸಾರಾಂಶ

ರಾಜ್ಯದಲ್ಲಿ 30ನೇ ಸ್ಥಾನ ಪಡೆದ ರಾಯಚೂರು ಜಿಲ್ಲೆ. ಶೇ.73.11ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ. ಕಳೆದ ಬಾರಿ ಜಿಲ್ಲೆಗೆ ಶೇ.66.21 ಫಲಿತಾಂಶ. ಹಿಂದಿನ ವರ್ಷಕ್ಕೆ ಹೋಲಿಸಿದ್ದಲ್ಲಿ ಫಲಿತಾಂಶದಲ್ಲಿ ಸುಧಾರಣೆ ಕಂಡರೂ ಸಹ ರ್‍ಯಾಂಕಿಂಗ್‌ನಲ್ಲಿ ವೈಫಲ್ಯತೆ ಸಾಧಿಸಿದೆ.

ಕನ್ನಡಪ್ರಭ ವಾರ್ತೆ ರಾಯಚೂರು

ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಅಂತಿಮ ವಾರ್ಷಿಕ ಪರೀಕ್ಷಾ ಫಲಿತಾಂಶ ಬುಧವಾರ ಪ್ರಕಟಗೊಂಡಿದ್ದು, ಎಂದಿನಂತೆ ರಾಯಚೂರು ಜಿಲ್ಲೆಯ ಕಳಪೆ ಸಾಧನೆ ಈ ವರ್ಷವು ಮುಂದುವರಿದಿದೆ. ರಾಜ್ಯದ 32 ಶೈಕ್ಷಣಿಕ ಜಿಲ್ಲೆಗಳ ಪೈಕಿ ರಾಯಚೂರು 30 ನೇ ಸ್ಥಾನ ಪಡೆದುಕೊಂಡಿರುವುದು ಇಲ್ಲಿನ ಶಿಕ್ಷಣ ವ್ಯವಸ್ಥೆ ಯಾವ ರೀತಿ ನಡೆಯುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.

ಕಳೆದ ಬಾರಿ ಜಿಲ್ಲೆಗೆ ಶೇ.66.21 ಫಲಿತಾಂಶ ಲಭಿಸಿತ್ತು. ಈ ಬಾರಿ ಶೇ.73.11 ಫಲಿತಾಂಶ ಲಭಿಸಿದೆ. ಹಿಂದಿನ ವರ್ಷಕ್ಕೆ ಹೋಲಿಸಿದ್ದಲ್ಲಿ ಫಲಿತಾಂಶದಲ್ಲಿ ಸುಧಾರಣೆ ಕಂಡರೂ ಸಹ ರ್‍ಯಾಂಕಿಂಗ್‌ನಲ್ಲಿ ವೈಫಲ್ಯತೆ ಸಾಧಿಸಿದೆ.

ಜಿಲ್ಲೆಯಲ್ಲಿ ಒಟ್ಟು 21,219 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ ಒಟ್ಟು 14,427 ಅಭ್ಯರ್ಥಿಗಳು ಉತ್ತೀರ್ಣಗಿದ್ದಾರೆ. ಮೊದಲ ಬಾರಿಗೆ 18,156 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 13,273 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 73.11ರಷ್ಟು ಫಲಿತಾಂಶ ಲಭಿಸಿದೆ. ಜಿಲ್ಲಾದ್ಯಂತ 6,421 ಪುರುಷ ವಿದ್ಯಾರ್ಥಿಗಳು ತೇರ್ಗಡೆಯಾದರೆ 8,006 ವಿದ್ಯಾರ್ಥಿನಿಯರು ಉತ್ತೀರ್ಣರಾಗುವ ಮೂಲಕ ಮೇಲುಗೈ ಸಾಧಿಸಿದ್ದಾರೆ. 323 ಖಾಸಗಿ ವಿದ್ಯಾರ್ಥಿಗಳು ತೇರ್ಗಡೆ ಹಾಗೂ 831 ಪುನರಾವರ್ತಿತ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಳೆದ ಬಾರಿ ಜಿಲ್ಲೆಗೆ 66.11ರಷ್ಟು ಫಲಿತಾಂಶ ಲಭಿಸಿತ್ತು.

ಹೊಸದಾಗಿ ಕಲಾ ವಿಭಾಗದಿಂದ ಒಟ್ಟು 9,904 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ ಒಟ್ಟು 6,344 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೆ ಶೇ.64.05ರಷ್ಟು ವಿದ್ಯಾರ್ಥಿಗಳು ಕಲಾ ವಿಭಾದಲ್ಲಿ ತೇರ್ಗಡೆಯಾಗಿದ್ದಾರೆ. ವಾಣಿಜ್ಯ ವಿಭಾಗದಿಂದ ಒಟ್ಟು 3,629 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ ಒಟ್ಟು 2,734 ವಿದ್ಯಾರ್ಥಿಗಳು ತೇರ್ಗಡೆ, ಶೇ.75.46ರಷ್ಟು ವಿದ್ಯಾರ್ಥಿಗಳು ವಾಣಿಜ್ಯ ವಿಭಾಗದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಿಂದ ಒಟ್ಟು 4,629 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ 4,195 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ.90.62ರಷ್ಟು ವಿದ್ಯಾರ್ಥಿಗಳು ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಕಳಪೆ ಸಾಧನೆಗೆ ಕಾರಣಗಳು

ರಾಯಚೂರು ನಗರ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಸಂಸ್ಥೆಗಳು ಪದವಿ ಪೂರ್ವ ಕಾಲೇಜುಗಳನ್ನು ನಡೆಸುತ್ತಿದ್ದು, ಒಂದು ಕಡೆ ಸರ್ಕಾರಿ, ಅನುದಾನಿತ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಬೋಧನೆ ಕೊರತೆ, ಖಾಸಗಿ ಕಾಲೇಜುಗಳಿಗೆ ಪೈಪೋಟಿ ನೀಡುವ ಮಟ್ಟದಲ್ಲಿ ಪಪೂ ಕಾಲೇಜುಗಳಲ್ಲಿ ಬೋಧಕ ಸೇರಿ ಇತರೆ ಸವಲತ್ತುಗಳಿಲ್ಲದಿರುವುದು ಒಂದೆಡೆ ಸಮಸ್ಯೆಯಾಗಿದ್ದರೆ, ಹೆಚ್ಚಿನ ಪ್ರಮಾಣದಲ್ಲಿ ಬಡ ಮತ್ತು ಮಧ್ಯಮ ವರ್ಗದ ಮಕ್ಕಳು ಸರ್ಕಾರಿ ಕಾಲೇಜುಗಳಲ್ಲಿ ಓದುತ್ತಿದ್ದು ಅವರಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಇಲಾಖೆ, ಸರ್ಕಾರ ಸಂಪೂರ್ಣ ವಿಫಲತೆಯಾಗಿರುವುದು ಇನ್ನೊಂದು ಹಿನ್ನಡೆಯಾಗಿದೆ.

ಪಾಲಕರಿಂದ ಲಕ್ಷಾಂತರ ಶುಲ್ಕ ವಸೂಲಿ ಮಾಡುವ ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕೊಟ್ಟು ಫಲಿತಾಂಶದಲ್ಲಿ ಸಾಧನೆ ತೋರುವ ರೀತಿಯಲ್ಲಿ ಪ್ರಯತ್ನಗಳು ನಡುವಲ್ಲಿ ನಿರ್ಲಕ್ಷ್ಯ, ಕಡಿಮೆ ವೇತನ ನೀಡಿ ಅನುಭವಿ ಉಪನ್ಯಾಸಕರನ್ನು ನೇಮಿಸಿಕೊಂಡು ಗುಣಮಟ್ಟದ ಶಿಕ್ಷಣ ನೀಡದಿರುವುದು ಫಲಿತಾಂಶ ಹಿನ್ನಡೆಗೆ ಪ್ರಮುಖ ಕಾರಣಗಳಾಗಿವೆ.