ಡಂಬಳ ಭಾಗದಲ್ಲಿ ಕೃಷಿ ಪರಿಕರ ಕಳ್ಳತನ ಹೆಚ್ಚಳ

| Published : Apr 11 2024, 12:52 AM IST

ಸಾರಾಂಶ

ಡಂಬಳ ಹೋಬಳಿಯ ಗ್ರಾಮಗಳಲ್ಲಿ ಕೃಷಿ ಬಳಕೆ ಯಂತ್ರಗಳು, ಪರಿಕರಗಳು, ಜಾನವಾರು ಕಳ್ಳತನ ಹೆಚ್ಚುತ್ತಿದೆ. ಯುವ ರೈತ ಬಸವರಾಜ ಎಚ್‌. ಕೊಂತಿಕಲ್ಲ ಅವರ ನಡುಕಟ್ಟಿನ ಕೂರಿಗೆಯನ್ನು ಮಂಗಳವಾರ ಕಳ್ಳತನ ಮಾಡಲಾಗಿದೆ.

ರಿಯಾಜಅಹ್ಮದ ಎಂ. ದೊಡ್ಡಮನಿ

ಡಂಬಳ: ಹೋಬಳಿಯ ಗ್ರಾಮಗಳಲ್ಲಿ ಕೃಷಿ ಬಳಕೆ ಯಂತ್ರಗಳು, ಪರಿಕರಗಳು, ಜಾನವಾರು ಕಳ್ಳತನ ಹೆಚ್ಚುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದೆ.ಇದೀಗ ಡಂಬಳದ ಯುವ ರೈತ ಬಸವರಾಜ ಎಚ್‌. ಕೊಂತಿಕಲ್ಲ ಅವರ ನಡುಕಟ್ಟಿನ ಕೂರಿಗೆಯನ್ನು ಮಂಗಳವಾರ ಕಳ್ಳತನ ಮಾಡಲಾಗಿದೆ.

ಈ ಭಾಗದಲ್ಲಿ ಹೊಲದಲ್ಲಿ ಕಟ್ಟಿರುವ ಆಕಳು, ಕುರಿ ಕಳ್ಳತನ ಸಾಮಾನ್ಯವೆನಿಸಿದೆ. ಹನಿ ನೀರಾವರಿ ಯೋಜನೆಗೆ ಅಳವಡಿಸಿದ ಪೈಪ್‌ಗಳು, ಪಂಪ್‌ಸೆಟ್‌ಗೆ ಅಳವಡಿಸಿದ ವೈರ್ ಕಳ್ಳತನವೂ ನಡೆದಿದೆ. ಭೀಕರ ಬರದ ನಡುವೆ ರೈತರು ಹೊಸ ಸಮಸ್ಯೆಗೆ ಸಿಲುಕಿದ್ದು, ರಾತ್ರಿ ಹೊಲಕ್ಕೆ ಹೋಗಲು ಅಂಜುವಂತಾಗಿದೆ.

ಬಸವರಾಜ ಕೊಂತಿಕಲ್ಲ ಅವರು ಒಂದು ಲಕ್ಷ ರು. ಸಾಲ ಮಾಡಿ ನಡಕಟ್ಟಿನ ಕೂರಗಿ ಖರೀದಿಸಿದ್ದರು. ಡಂಬಳ ಗ್ರಾಮದ ಮೈಲಾರಲಿಂಗೇಶ್ವರ ದೇವಸ್ಥಾನ ಭಾಗದಿಂದ ಡ.ಸಾ. ನಾರಾಯಣಪುರ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಪಕ್ಕ ಇರುವ ತಮ್ಮ ಜಮೀನಿನಲ್ಲಿ ಇಟ್ಟಿದ್ದರು. ಮಂಗಳವಾರ ರಾತ್ರಿ ಕಳ್ಳತನ ಮಾಡಿರುವುದು ತಿಳಿದುಬಂದಿದೆ. ರೈತರು ರಾತ್ರಿ ಸಮಯ ಇಲ್ಲದ್ದನ್ನು ನೋಡಿ ಕಳ್ಳರ ಗುಂಪು ಕಾರ್ಯಾಚರಣೆ ನಡೆಸುತ್ತಿದೆ.

ರೈತರ ಪರಿಕರ ಕಳ್ಳತನ: ರೈತರು ತಮ್ಮ ಮನೆಯ ಹತ್ತಿರ ಜಾಗದ ಕೊರತೆಯಿಂದ ರಸ್ತೆಯ ಪಕ್ಕ ಮತ್ತು ತಮ್ಮ ಜಮೀನಿನಲ್ಲಿ ಬೆಲೆಬಾಳುವ ಯಂತ್ರಗಳನ್ನು ಬಿಡುತ್ತಾರೆ. ನೀರಾವರಿ ಪೈಪ್‌ಗಳೂ ಹೊಲದಲ್ಲಿರುತ್ತವೆ. ಅಂಥವುಗಳನ್ನು ಕಳ್ಳರು ಸುಲಭವಾಗಿ ಎರಗಿಸುತ್ತಿದ್ದಾರೆ. ಆದರೆ ಕಳ್ಳರ ಪತ್ತೆಯಾಗುತ್ತಿಲ್ಲ. ಇದು ರೈತರಿಗೆ ತಲೆಬೇನೆಯಾಗಿದೆ.

ಡಂಬಳ ಗ್ರಾಮದ ಪೊಲೀಸ್‌ ಠಾಣೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಇಲ್ಲಿ ಪೊಲೀಸ್ ಸಿಬ್ಬಂದಿ ಹೆಚ್ಚಿಸಬೇಕು ಮತ್ತು ಇಲಾಖೆ ರಾತ್ರಿ ಗ್ರಾಮದಲ್ಲಿ ಗಸ್ತು ಹಾಕಿಸಬೇಕು. ಗ್ರಾಮದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಅಲ್ಲದೆ ಕೃಷಿ ಪರಿಕರಗಳ ಕಳ್ಳತನ ಪತ್ತೆಗೆ ಪೊಲೀಸ್ ಅಧಿಕಾರಿಗಳು ತಂಡ ರಚಿಸಿ, ಪತ್ತೆಗೆ ಕ್ರಮ ಕೈಗೊಳ್ಳಬೇಕು ಆಗ್ರಹಿಸಿದ್ದಾರೆ.ಸಾಲ ಮಾಡಿ ಒಂದು ಲಕ್ಷ ರು. ಕೊಟ್ಟು ನಡುಕಟ್ಟಿನ ಬಿತ್ತುವ ಕೂರಿಗೆ ಯಂತ್ರವನ್ನು ಖರೀದಿಸಿದ್ದೆ. ಮಂಗಳವಾರ ರಾತ್ರಿ ಕಳ್ಳತನ ಮಾಡಲಾಗಿದೆ. ಪೊಲೀಸರು ಕಳ್ಳರ ಪತ್ತೆಗೆ ಶೀಘ್ರ ಕ್ರಮ ವಹಿಸಬೇಕು. ನಮ್ಮ ಗ್ರಾಮದಲ್ಲಿ ರೈತರ ಪರಿಕರ ಬಹಳಷ್ಟು ಕಳ್ಳತನ ಮಾಡಲಾಗುತ್ತಿದೆ. ಗ್ರಾಮದ ಮುಖ್ಯ ರಸ್ತೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ ಎಂದು ಬಸವರಾಜ ಕೊಂತಿಕಲ್ಲ ಹೇಳುತ್ತಾರೆ.ಡಂಬಳ ಹೋಬಳಿಯಾದ್ಯಂತ ಜಮೀನಿನಲ್ಲಿ ಇಟ್ಟಿರುವ ಬಹು ಬೆಲೆಬಾಳುವ ಕುಂಟೆ ರಂಟೆ ಬಿತ್ತುವ ಯಂತ್ರಗಳನ್ನು ಡ್ರೀಪ್ ಪೈಪ್, ಬೋರ್‌ವೆಲ್‌ಗೆ ಅಳವಡಿಸಿರುವ ವೈರ್‌ ಕಳ್ಳತನದಿಂದಾಗಿ ರೈತರಲ್ಲಿ ಆತಂಕ ಹೆಚ್ಚಿದೆ. ಕಳ್ಳತನ ತಡೆಯಲು ಸರ್ಕಾರ ತಂಡ ರಚನೆ ಮಾಡುವ ಮೂಲಕ ಸರ್ಕಾರ ರೈತರ ಹಿತ ಕಾಪಾಡಬೇಕು ಎಂದು ಗ್ರಾಮದ ರೈತ ರಾಮ ಡಂಬಳ ಹೇಳುತ್ತಾರೆ.ಡಂಬಳ ಗ್ರಾಮದಲ್ಲಿ ಮಂಗಳವಾರ ರಾತ್ರಿ ಹೊತ್ತಿನಲ್ಲಿ ರೈತನ ಬಿತ್ತುವ ಯಂತ್ರ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಕಳ್ಳರನ್ನು ಪತ್ತೆ ಹಚ್ಚಲು ತಂಡವನ್ನು ರಚನೆ ಮಾಡಿದ್ದು ಶೀಘ್ರದಲ್ಲಿಯೆ ಕಳ್ಳರನ್ನು ಹಿಡಿಯುತ್ತೇವೆ ಎಂದು ಮುಂಡರಗಿ ಸಿಪಿಐ ಮಂಜುನಾಥ ಕುಸುಗಲ್ಲ ಹೇಳಿದರು.