ಸಾರಾಂಶ
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಅರಕಲಗೂಡು ತಾಲೂಕಿನ ಕಡವಿನ ಹೊಸಹಳ್ಳಿಯಿಂದ ಬೇಲೂರು ತಾಲೂಕಿನ ಚೆನ್ನಾಪುರ ಗಡಿಯವರೆಗೆ ಹಮ್ಮಿಕೊಳ್ಳಲಾಗಿದ್ದ ಮಾನವ ಸರಪಳಿ ರಚನೆ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ನಗರದ ಸಮೀಪದಲ್ಲಿರುವ ಬೇಲೂರು ರಸ್ತೆಯ ಸಿದ್ಧಾರ್ಥ ನಗರದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆ ಓದಲಾಯಿತು. ಈ ವೇಳೆ ಕೈಯನ್ನು ಮುಂದೆ ಚಾಚಿ ವೇದಿಕೆ ಜೊತೆ ಸಾರ್ವಜನಿಕರು ಕೂಡ ಸಹಕರಿಸಿದರು. ಕಾರ್ಯಕ್ರಮದ ಅಂಗವಾಗಿ ಗಿಡ ನೆಡಲಾಯಿತು.
ಕನ್ನಡಪ್ರಭ ವಾರ್ತೆ ಹಾಸನ
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಭಾನುವಾರ ಬೆಳಿಗ್ಗೆ ೯.೩೦ರಿಂದ ೧೦ ಗಂಟೆಯವರೆಗೆ ಅರಕಲಗೂಡು ತಾಲೂಕಿನ ಕಡವಿನ ಹೊಸಹಳ್ಳಿಯಿಂದ ಬೇಲೂರು ತಾಲೂಕಿನ ಚೆನ್ನಾಪುರ ಗಡಿಯವರೆಗೆ ಹಮ್ಮಿಕೊಳ್ಳಲಾಗಿದ್ದ ಮಾನವ ಸರಪಳಿ ರಚನೆ ಕಾರ್ಯಕ್ರಮ ಯಶಸ್ವಿಗೆ ಜರುಗಿತು.ನಗರದ ಸಮೀಪದಲ್ಲಿರುವ ಬೇಲೂರು ರಸ್ತೆಯ ಸಿದ್ಧಾರ್ಥ ನಗರದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆ ಓದಲಾಯಿತು. ಈ ವೇಳೆ ಕೈಯನ್ನು ಮುಂದೆ ಚಾಚಿ ವೇದಿಕೆ ಜೊತೆ ಸಾರ್ವಜನಿಕರು ಕೂಡ ಸಹಕರಿಸಿದರು. ಕಾರ್ಯಕ್ರಮದ ಅಂಗವಾಗಿ ಗಿಡ ನೆಡಲಾಯಿತು.
ಸಂಸದರಾದ ಶ್ರೇಯಸ್ ಪಟೇಲ್ ಅವರು ಮಾತನಾಡಿ, ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಬೀದರ್‌ನಿಂದ ಚಾಮರಾಜನಗರದವರೆಗೆ ಒಟ್ಟು ೨೫೦೦ ಕಿ.ಮೀ.ಗಳ ಮಾನವ ಸರಪಳಿ ರಚನೆ ಮಾಡುತ್ತಿರುವುದು ಐತಿಹಾಸಿಕ ದಾಖಲೆಯ ಸಂಕೇತ ಇದು ಇತಿಹಾಸದ ಪುಟಗಳಲ್ಲಿ ಸೇರಲಿದೆ ಎಂದು ತಿಳಿಸಿದರು.ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದಡಿಯಲ್ಲಿ ಎಲ್ಲರೂ ಸಾಗುತ್ತಿದ್ದೇವೆ. ಜಿಲ್ಲೆಯ ಅರಕಲಗೂಡು ತಾಲೂಕಿನ ಕಡವಿನ ಹೊಸಹಳ್ಳಿಯಿಂದ ಹಾಸನ ತಾಲೂಕು ಮಾರ್ಗವಾಗಿ ಬೇಲೂರು ತಾಲೂಕಿನ ಚೆನ್ನಾಪುರ ಗಡಿಯವರೆಗೆ ಮಾನವ ಸರಪಳಿ ರಚನೆಗೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸುವುದಾಗಿ ಹೇಳಿದರು.
ಕ್ಷೇತ್ರದ ಶಾಸಕರಾದ ಸ್ವರೂಪ್ ಪ್ರಕಾಶ್ ಮಾತನಾಡಿ, ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಮಾನವ ಸರಪಳಿ ರಚನೆ ಕಾರ್ಯಕ್ರಮದಲ್ಲಿ ಒಂದು ಲಕ್ಷ ಕ್ಕೂ ಹೆಚ್ಚಿನ ಜನರು ಭಾಗವಹಿಸಿ ಯಶಸ್ವಿಗೊಳಿಸಲಾಗಿದೆ ಇದೊಂದು ಐತಿಹಾಸಿಕ ಕಾರ್ಯಕ್ರಮ ಎಂದ ಅವರು, ವಿಶೇಷವಾಗಿ ಶಾಲಾ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಕಾರ್ಯಕ್ರಮದ ಯಶಸ್ವಿಗೆ ಹಲವಾರು ದಿನಗಳಿಂದ ಶ್ರಮಿಸಿದ ಅಧಿಕಾರಿಗಳಿಗೆ ಅಭಿನಂದನೆಗಳನ್ನು ತಿಳಿಸಿದರು. ಸಂವಿಧಾನದ ಆಶಯದಂತೆ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂದರು. ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರು ಮಾತನಾಡಿ, ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಸಂವಿಧಾನ ಹೊಂದಿರುವ ದೇಶ ನಮ್ಮದು. ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿದು ಸಾಕಾರಗೊಳಿಸಬೇಕು. ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಮಾನವ ಸರಪಳಿ ರಚನೆ ಕಾರ್ಯಕ್ರಮದಲ್ಲಿ ಜಿಲ್ಲಾಡಳಿತದ ಕರೆಗೆ ಓಗೊಟ್ಟು ಶಾಲಾ ಕಾಲೇಜು ವಿದ್ಯಾರ್ಥಿಗಳು, ಎಲ್ಲಾ ಸಂಘ ಸಂಸ್ಥೆಗಳು, ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕಾರ ನೀಡಿದ ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸಿದರು. ಇದೇ ವೇಳೆ ಸ್ವಾತಂತ್ರ್ಯ ಹೋರಾಟಗಾರಾದ ಜಿ.ಎಲ್. ಮುದ್ದೇಗೌಡ, ನಗರಸಭೆ ಅಧ್ಯಕ್ಷರಾದ ಎಂ. ಚಂದ್ರೇಗೌಡ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತ, ಅಪರ ಜಿಲ್ಲಾಧಿಕಾರಿ ಕೆ ಟಿ. ಶಾಂತಲಾ, ಉಪ ವಿಭಾಗಾಧಿಕಾರಿ ಮಾರುತಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಈ. ಕೃಷ್ಣೇಗೌಡ, ಮಾಜಿ ಅಧ್ಯಕ್ಷ ಕೆ.ಎಂ. ಶ್ರೀನಿವಾಸ್, ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷೆ ಲೀಲಾವತಿ, ಹಾಸನ ಲಯನ್ಸ್ ಕ್ಲಬ್ ಅಧ್ಯಕ್ಷ ಐ.ಜಿ. ರಮೇಶ್, ಖಜಾಂಚಿ ಚಿಲ್ಕೂರ್ ನಾಗರಾಜು, ಎಚ್.ಆರ್. ಚಂದ್ರೇಗೌಡ, ಗಿರೀಶ್, ಲಯನ್ಸ್ ಹೇಮಾವತಿ ಕ್ಲಬ್ ನ ತಿಲಕ್ ಗೌಡ, ಚಿನ್ನೆನಹಳ್ಳಿ ಸ್ವಾಮಿ, ಜೈಭೀಮ್ ಬ್ರಿಗೇಡ್ ಜಿಲ್ಲಾಧ್ಯಕ್ಷ ರಾಜೇಶ್, ವಿವಿಧ ಸಂಘ ಸಂಸ್ಥೆಗಳು, ಶಾಲಾ, ಕಾಲೇಜು ವಿದ್ಯಾರ್ಥೀಗಳು, ವಿದ್ಯಾರ್ಥಿನಿಯರು, ಸಾರ್ವಜನಿಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.* ಹೇಳಿಕೆ-1ಈ ಕಾರ್ಯಕ್ರಮ ಭ್ರಾತೃತ್ವದ ಸಂಕೇತ. ಭಾರತದ ಪ್ರಜೆಯಾಗಿರುವುದು ಹೆಮ್ಮೆ ಎನಿಸುತ್ತದೆ. ಜಾತಿ ಭೇದವಿಲ್ಲದೆ ಎಲ್ಲರೂ ಕೈ ಕೈ ಹಿಡಿದು ಮಾನವ ಸರಪಳಿ ರಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಗಿದೆ.
- ಶ್ರೇಯಸ್ ಪಟೇಲ್, ಸಂಸದ