ತಂಬಾಕು ರೈತರ ಸಮಸ್ಯೆ ಕುರಿತು ಸುದೀರ್ಘ ಸಭೆ: ಕೇಂದ್ರ ಸಚಿವ ಫಿಯೂಷ್‌ ಘೋಯಲ್ ಭಾಗಿ

| Published : Dec 03 2024, 12:33 AM IST

ತಂಬಾಕು ರೈತರ ಸಮಸ್ಯೆ ಕುರಿತು ಸುದೀರ್ಘ ಸಭೆ: ಕೇಂದ್ರ ಸಚಿವ ಫಿಯೂಷ್‌ ಘೋಯಲ್ ಭಾಗಿ
Share this Article
  • FB
  • TW
  • Linkdin
  • Email

ಸಾರಾಂಶ

ಮಧ್ಯಮ ಗುಣಮಟ್ಟದ ತಂಬಾಕು ಶೆ. 30 ರಷ್ಟು ಮತ್ತು ಬ್ರೈಟ್ ಗ್ರೇಡ್ ತಂಬಾಕು ಶೇ. 20ರಷ್ಟು ಎಂದು ಅಂದಾಜಿಸಲಾಗಿತ್ತು. ಆದರೆ ಮಳೆಯ ಅವಾಂತರ ಎಲ್ಲವನ್ನೂ ತಲೆಕೆಳಗು ಮಾಡಿದೆ. ಮುಖ್ಯವಾಗಿ ತಂಬಾಕಿನಲ್ಲಿರುವ ನಿಕೋಟಿನ್ ಅಂಶ ನಿಗದಿತ ಪ್ರಮಾಣದಲ್ಲಿ ಇಲ್ಲದಿರುವುದು ದರ ಕುಸಿತಕ್ಕೆ ಮುಖ್ಯ ಕಾರಣ.

ಕನ್ನಡಪ್ರಭ ವಾರ್ತೆ ಹುಣಸೂರು

ಶಾಸಕ ಜಿ.ಡಿ. ಹರೀಶ್‌ ಗೌಡ ನೇತೃತ್ವದಲ್ಲಿ ರೈತ ಮುಖಂಡರ ನಿಯೋಗ ಸೋಮವಾರ ನವದೆಹಲಿಯಲ್ಲಿ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್‌ ಅವರೊಂದಿಗೆ ಸತತ 2 ಗಂಟೆಗಳ ಸಭೆ ನಡೆಸಿದರು.

ತಂಬಾಕು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಸಭೆಯಲ್ಲಿ ಹಾಜರಿದ್ದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಜಿ.ಡಿ. ಹರೀಶ್‌ ಗೌಡ, ರೈತ ಮುಖಂಡರು ಸವಿವರವಾಗಿ ಸಚಿವರಿಗೆ ತಿಳಿಸಿದರು.

ನೂತನ ಸಂಸತ್‌ ಭವನ ಕಟ್ಟಡದ ಉದ್ಯೋಗ ಭವನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಶಾಸಕ ಜಿ.ಡಿ. ಹರೀಶ್‌ ಗೌಡ ಮಾತನಾಡಿ, ರಾಜ್ಯದ ಮೈಸೂರು ಭಾಗದ ಹುಣಸೂರು, ಎಚ್.ಡಿ. ಕೋಟೆ, ಪಿರಿಯಾಪಟ್ಟಣ, ಕೆ.ಆರ್. ನಗರ ಮತ್ತು ಅರಕಲಗೂಡು ತಾಲೂಕು ರಾಮನಾಥಪುರದಲ್ಲಿ ರೈತರು ಬೆಳೆಯುವ ಎಫ್‌.ಸಿ,ವಿ ತಂಬಾಕು ಅಂತಾರಾಷ್ಟ್ರೀಯ ಮಾರುಕಟ್ಟೆ ಹೊಂದಿದೆ. ಆದರೆ ಪ್ರತಿವರ್ಷ ತಂಬಾಕು ಬೆಳೆವ ರೈತರಿಗೆ ನ್ಯಾಯಯುತ ದರ ಪಡಯುವಲ್ಲಿ ವಿಫಲರಾಗುತ್ತಿದ್ದಾರೆ. ಈ ಬಾರಿ ಕಟಾವಿನ ಸಮಯಲ್ಲಿ (ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ) ಅತಿಯಾದ ಮಳೆಯಿಂದಾಗಿ ನಿರೀಕ್ಷಿತ ಪ್ರಮಾಣದ ಗುಣಮಟ್ಟದ ಬೆಳೆ ಸಿಗಲಿಲ್ಲ. 90 ಮಿಲಿಯನ್ ಕೆಜಿಗಳ ಬೆಳೆ ನಿರೀಕ್ಷೆಯಿತ್ತು. ಈ ಪೈಕಿ ಕೆಳ ದರ್ಜೆಯ ಹೊಗೆಸೊಪ್ಪು ಶೇ. 50ರಷ್ಟು ಇರಬಹುದು ಎಂದು ಅಂದಾಜಿಸಲಾಗಿದೆ.

ಮಧ್ಯಮ ಗುಣಮಟ್ಟದ ತಂಬಾಕು ಶೆ. 30 ರಷ್ಟು ಮತ್ತು ಬ್ರೈಟ್ ಗ್ರೇಡ್ ತಂಬಾಕು ಶೇ. 20ರಷ್ಟು ಎಂದು ಅಂದಾಜಿಸಲಾಗಿತ್ತು. ಆದರೆ ಮಳೆಯ ಅವಾಂತರ ಎಲ್ಲವನ್ನೂ ತಲೆಕೆಳಗು ಮಾಡಿದೆ. ಮುಖ್ಯವಾಗಿ ತಂಬಾಕಿನಲ್ಲಿರುವ ನಿಕೋಟಿನ್ ಅಂಶ ನಿಗದಿತ ಪ್ರಮಾಣದಲ್ಲಿ ಇಲ್ಲದಿರುವುದು ದರ ಕುಸಿತಕ್ಕೆ ಮುಖ್ಯ ಕಾರಣ ಎಂದರು.

ತಾರತಮ್ಯ ನೀತಿಯಿಂದಾಗಿ ರೈತರು ತಂಬಾಕು ಉತ್ಪನ್ನದ ವೆಚ್ಚ ಕೆಜೆಗೆ 150 ರಿಂದ 160 ರೂ. ಗಳನ್ನು ತಲುಪಿದೆ. ತಿಂಗಳ ಹಿಂದೆ ಸಂಪನ್ನಗೊಂಡ ಆಂಧ್ರಪ್ರದೇಶದ ಮಾರುಕಟ್ಟೆಯಲ್ಲಿ ಸರಾಸರಿ ಕೆಜಿಗೆ 320 ರೂ. ದೊರಕಿದ್ದರೆ, ಕರ್ನಾಟಕದ ರೈತರಿಗೆ ಅದು ಕೇವಲ 265 ರೂ.ಗಳಿಗೆ ನಿಂತಿದೆ. ರೈತರು ಆರ್ಥಿಕ ಸಂಕಷ್ಟವನ್ನು ಎದುರಿಸುವ ಪರಿಸ್ಥಿತಿ ಎದುರಾಗಿದೆ. ಕೇಂದ್ರ ಸರ್ಕಾರ ಕೂಡಲೇ ತಂಬಾಕು ಮಂಡಳಿ, ಖರೀದಿ ಕಂಪನಿಗಳು ಮತ್ತು ರೈತರೊಂದಿಗೆ ಸಭೆ ನಡೆಸಿ ಕರ್ನಾಟಕ ರೈತರ ಪರ ನಿಲುವು ತೆಗೆದುಕೊಂಡು ಸೂಕ್ತ ದರ ನಿಗದಿಪಡಿಸಿಕೊಡಬೇಕು ಎಂದು ಅವರು ಒತ್ತಾಯಿಸಿದರು.

ರಾಜ್ಯದಲ್ಲಿ 54 ಸಾವಿರ ಅಧಿಕೃತ ತಂಬಾಕು ಬೆಳೆಗಾರರಿದ್ದರೆ, 16 ಸಾವಿರ ಅನಧೀಕೃತ ಬೆಳೆಗಾರರು (ಕಾರ್ಡ್‌ದಾರರು) ಇದ್ದು, ಇವರು ಬೆಳೆಯುವ ತಂಬಾಕಿಗೆ ಮಂಡಳಿ ವಿವಿಧ ರೀತಿಯ ದಂಡಶುಲ್ಕ ವಿಧಿಸುತ್ತದೆ. ಇದು ಅನಧಿಕೃತರಿಗೆ ಮಾಡುವ ಅನ್ಯಾಯ. ಸರ್ಕಾರ ಈ ಕೂಡಲೇ ಅನಧಿಕೃತ ಬೆಳೆಗಾರರಿಂದ ದಂಡವಸೂಲಿ ನಿಲ್ಲಿಸಬೇಕು. ಅಲ್ಲದೆ ಕೆಳದರ್ಜೆಯ ತಂಬಾಕಿನ ಖರೀದಿ ಇನ್ನು ನಡೆದಿಲ್ಲ. ಈ ಕೂಡಲೇ ಖರೀದಿ ಕಂಪನಿಗಳು ಕೆಳ ದರ್ಜೆಯ ತಂಬಾಕಿನ ಖರೀದಿ ಈಗಿಂದಲೇ ಆರಂಭಿಸುವ ಮೂಲಕ ರೈತರಿಗೆ ನೆರವಾಗಬೇಕು ಎಂದು ಅವರು ಒತ್ತಾಯಿಸಿದರು.

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮಾತನಾಡಿ, ಪದೇ ಪದೇ ತಂಬಾಕು ರೈತರು ಸಮಸ್ಯೆ ಎದುರಿಸುತ್ತಲೇ ಇದ್ದಾರೆ. ಇದಕ್ಕೆ ಶಾಶ್ವತ ಪರಿಹಾರ ಅಗತ್ಯವಿದ್ದು, ಸರ್ಕಾರ ಈ ಕುರಿತು ಗಂಭೀರ ಚಿಂತನೆಯೊಂದಿಗೆ ಕಾರ್ಯ ಪ್ರವೃತ್ತರಾಗಬೇಕು ಎಂದು ಅವರು ಮನವಿ ಮಾಡಿದರು.

ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಈ ಬಾರಿ ದರ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತಿದೆ. ಕಾಲಹರಣ ಮಾಡದೇ ಖರೀದಿ ಕಂಪನಿಗಳ ಜೊತೆ ಸಭೆ ನಡೆಸಿ ಪರಿಹಾರೋಪಾಯ ಕಂಡುಕೊಳ್ಳಬೇಕಿದೆ. ರೈತರ ನಿಜವಾದ ಸಮಸ್ಯೆ ಪರಿಹರಿಸುವತ್ತ ಶೀಘ್ರ ಕ್ರಮ ಅನಿವಾರ್ಯ ಎಂದು ಸಚಿವರಲ್ಲಿ ಮನವಿ ಮಾಡಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ, ತಂಬಾಕು ಮಂಡಳಿ ಅಥವಾ ಖರೀದಿ ಕಂಪನಿಗಳು ಆಂಧ್ರಪ್ರದೇಶ, ಕರ್ನಾಟಕವೆಂದು ತಾರತಮ್ಯ ನೀತಿ ಅನುಸರಿಸುವುದನ್ನು ಬಿಡಬೇಕು. ತಂಬಾಕು ಬೆಳೆಯನ್ನು ಫಸಲ್ ಬಿಮಾ ಯೋಜನೆ ವ್ಯಾಪ್ತಿಗೆ ತರಬೇಕು. ತಂಬಾಕಿಗೆ ಎಂ.ಎಸ್‌.ಪಿ ನಿಗದಿಗೊಳಿಸಿ ರೈತರಿಗೆ ಅನುಕೂಲ ಮಾಡಿಕೊಡಿ ಎಂದು ಆಗ್ರಹಿಸಿದರು.

ತಂಬಾಕು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಉಂಡುವಾಡಿ ಸಿ. ಚಂದ್ರೇಗೌಡ ಮಾತನಾಡಿ, ಖರೀದಿಕಂಪನಿಗಳ ಬೇಜವಾಬ್ದಾರಿ ವರ್ತನೆ ಸರಿಯಲ್ಲ. ರೈತರು ಸಂಕಷ್ಟದಲ್ಲಿ ಸಿಲುಕಿದ್ದು ಕೇಂದ್ರ ಸರ್ಕಾರ, ಮಂಡಳಿ ಮತ್ತು ಖರೀದಿ ಕಂಪನಿಗಳು ಕೂಡ ರೈತರ ನೆರವಿಗೆ ಬರಬೇಕು ಎಂದು ಅವರು ಒತ್ತಾಯಿಸಿದರು.

ಡಿ. 3 ರಂದು ಗುಂಟೂರಿನಲ್ಲಿ, ಡಿ. 4ರಂದು ನವದೆಹಲಿಯಲ್ಲಿ ಸಭೆ

ಜನಪ್ರತಿನಿಧಿಗಳ ಮತ್ತು ರೈತ ಮುಖಂಡರ ಮಾತುಗಳನ್ನು ಆಲಿಸಿದ ನಂತರ ಮಾತನಾಡಿದ ಗೋಯಲ್‌ ಅವರು, ಸಮಸ್ಯೆಯ ಗಂಭೀರತೆಯನ್ನು ಅರಿತಿದ್ದೇನೆ. ಸಮಸ್ಯೆಯ ಶೀಘ್ರ ಮತ್ತು ಶಾಶ್ವತ ಪರಿಹಾರಕ್ಕಾಗಿ ಡಿ. 3 ಗುಂಟೂರಿನಲ್ಲಿ ತಂಬಾಕು ಮಂಡಳಿ, ಖರೀದಿ ಕಂಪನಿಗಳು, ಜನಪ್ರತಿನಿಧಿಗಳು ಮತ್ತು ರೈತಮುಖಂಡರ ಸಭೆ ಆಯೋಜಿಸಲು ಇಲಾಖೆ ಎಂಡಿಗೆ ಸೂಚಿದ್ದೇನೆ. ಅಲ್ಲಿನ ಸಭೆಯ ವರದಿ ಪಡೆದು ಡಿ. 4ರಂದು ನವದೆಹಲಿಯಲ್ಲಿ ನನ್ನ ಅಧ್ಯಕ್ಷತೆಯಲ್ಲಿ ತಂಬಾಕು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಸಭೆ ನಡೆಸಲಿದ್ದೇನೆ. ಎಲ್ಲರೂ ಒಂದಾಗಿ ಸಮಸ್ಯೆಯನ್ನು ಪರಿಹರಿಸೋಣ Zxojg.

ಸಭೆಯಲ್ಲಿ ಜೆಡಿಎಸ್ ಯುವಮುಖಂಡ ನಿಖಿಲ್ ಕುಮಾರಸ್ವಾಮಿ, ಮಾಜಿ ಸಾಸಕ ಸಾ.ರಾ. ಮಹೇಶ್, ಮೈಮುಲ್ ಮಾಜಿ ಅಧ್ಯಕ್ಷ ಪ್ರಸನ್ನ, ರೈತ ಮುಖಂಡರಾದ ತಟ್ಟೆಕೆರೆ ಶ್ರೀನಿವಾಸ್, ವಕೀಲ ಮೂರ್ತಿ, ಮೋಹನ್, ಶಿವಶಂಕರ್, ಚೇತನ್ ಮೊದಲಾದವರು ಇದ್ದರು

ಮನವಿಗೆ ಸ್ಪಂದನೆ:

ಶಾಸಕ ಜಿ.ಡಿ. ಹರೀಶ್‌ ಗೌಡ ಸಭೆಯಲ್ಲಿ ಬೆಂಗಳೂರಿನಲ್ಲಿರುವ ನಿರ್ದೇಶಕರ ಕಚೇರಿಯನ್ನು ಮೈಸೂರಿಗೆ ವರ್ಗಾಯಿಸುವ ಮತ್ತು ಮೈಸೂರಿನಲ್ಲಿರುವ ಪ್ರಾದೇಶಿಕ ವ್ಯವಸ್ಥಾಪಕ ಅಧಿಕಾರಿ ಕಚೇರಿಯನ್ನು ಹುಣಸೂರಿಗೆ ವರ್ಗಾಯಿಸಬೇಕೆನ್ನುವ ಬೇಡಿಕೆಗೆ ಕೂಡಲೇ ಸ್ಪಂದಿಸಿ ಕ್ರಮವಹಿಸುವುದಾಗಿ ಸಚಿವ ಪಿಯೂಷ್ ಘೋಯಲ್ ಭರವಸೆ ನೀಡಿದರು.

ಮಾತ್ರವಲ್ಲದೆ ಎರಡು ದಿನಗಳಲ್ಲಿ ಎರಡು ಸಭೆಯನ್ನು ಆಯೋಜಿಸುವಂತೆ ಅಧೀನ ಅಧಿಕಾರಿಗಳಿಗೆ ಸೂಚಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಶಾಸಕ ಹರೀಶ್‌ ಗೌಡ ಕೇಂದ್ರ ವಾಣಿಜ್ಯ ಸಚಿವರಿಗೆ ಈ ಭಾಗದ ತಂಬಾಕಿನ ಗುಣ ಲಕ್ಷಣಗಳು, ಉತ್ಪಾದನಾ ಖರ್ಚುವಚ್ಚ, ಎದುರಿಸುತ್ತಿರುವ ಸಮಸ್ಯೆಗಳು, ತಂಬಾಕು ಒಳಗೊಂಡಿರುವ ರಾಸಾಯನಿಕ ಅಂಶಗಳು, ಫ್ಲೂ ಕ್ಯೂರ್ಡ್‌ವರ್ಜೀನಿಯ ತಂಬಾಕಿಗೆ ಬೇಡಿಕೆಯೇಕೆ ಮುಂತಾದ ವಿಷಯಗಳನ್ನು ಅತ್ಯಂತ ಸ್ಪಷ್ಟವಾಗಿ ಬರೆದು ಸಲ್ಲಿಸಿದ್ದು, ಸಚಿವರ ಗಮನ ಸೆಳೆಯುವಂತೆ ಮಾಡಿತು.

ಶಾಸಕರಿಗೆ ಶಹಬ್ಬಾಸ್‌ ಗಿರಿ ನೀಡಿ:

ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮತ್ತು ಉಂಡುವಾಡಿ ಸಿ. ಚಂದ್ರೇಗೌಡ ಶಾಸಕ ಜಿ.ಡಿ. ಹರೀಶ್‌ ಗೌಡರ ಕಾರ್ಯಕ್ಷಮತೆಯನ್ನು ಮೆಚ್ಚಿದರು.

ತಂಬಾಕು ವಿಷಯವೆಂದರೆ ಈವರೆಗಿನ ಶಾಸಕರು ಇದು ನಮ್ಮ ವ್ಯಾಪ್ತಿಯಲ್ಲಿಲ್ಲ ಎಂದು ಹೇಳಿ ಸಂಸದರ ಕಡೆ ಮುಖ ಮಾಡುತ್ತಿದ್ದರು. ಆದರೆ ಹರೀಶ್ ಗೌಡ ರೈತ ನಿಯೋಗವನ್ನು ತಮ್ಮ ಸ್ವಂತ ಖರ್ಚಿನಲ್ಲಿ ವಿಮಾನದ ಮೂಲಕ ಕರೆತಂದು ಸಚಿವರನ್ನು ಭೇಟಿ ಮಾಡಿಸಿ ಸತತ 2 ಗಂಟೆಗಳ ಕಾಲ ಸಭೆ ನಡೆಸಿ ಪರಿಸ್ಥಿತಿಯನ್ನು ಅರುಹಿದ್ದಾರೆ. ಅವರ ಶ್ರಮಕ್ಕೆ ನಮಗೆ ಸಮಾಧಾನ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.