ಜೆಡಿಎಸ್‌ ನಲ್ಲಿಯೇ ಇರುವುದಾಗಿ ಹೇಳುವ ಜಿ.ಟಿ. ದೇವೇಗೌಡರು, ನಮ್ಮ ಪಕ್ಷದಲ್ಲೇ ಇದ್ದು ಕೆ.ಆರ್. ನಗರಕ್ಕೆ ಬಂದು ಏನು ಮಾಡಿದರು. ಸಹಕಾರ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಸಹಾಯ ಮಾಡಿದರು. ಇದೆಲ್ಲವೂ ನಮಗೆ ಗೊತ್ತಿದೆ. ಜಿ.ಟಿ. ದೇವೇಗೌಡರ ನಿಷ್ಠೆ, ಪ್ರಾಮಾಣಿಕತೆ, ಬದ್ಧತೆ ಎಲ್ಲವನ್ನೂ ಪಕ್ಷದ ಹೈ ಕಮಾಂಡ್ ಗಮನಸಿಯೇ ಈ ಮಹತ್ವದ ನಿರ್ಧಾರ ಮಾಡಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಶಾಸಕ ಜಿ.ಟಿ. ದೇವೇಗೌಡರು ನಮ್ಮ (ಜೆಡಿಎಸ್‌) ಜೊತೆಯಲ್ಲಿ ಇಲ್ಲ. ಕುಮಾರಸ್ವಾಮಿ ಅವರೇ ಅದನ್ನ ಸ್ಪಷ್ಟ ಪಡಿಸಿದ್ದಾರೆ. ಚಾಮುಂಡೇಶ್ವರಿಯಲ್ಲಿ ಪಕ್ಷದ ಕಷ್ಟ ಸುಖದಲ್ಲಿ ಜೊತೆಗಿರುವ ವ್ಯಕ್ತಿಯ ಹುಡುಕಾಟದಲ್ಲಿದ್ದೇವೆ ಎಂದು ಮಾಜಿ ಸಚಿವ ಸಾ.ರಾ. ಮಹೇಶ್‌ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧೆ ಮಾಡುವುದಾಗಿ ಶಾಸಕ ಜಿ.ಟಿ. ದೇವೇಗೌಡರು ಹೇಳಿದ್ದಾರೆ. ಆದರೆ ಈಗ ಅವರು ನಮ್ಮೊಡನೆ ಇಲ್ಲ. ಅಲ್ಲಿಗೆ ಎಲ್ಲಾ ವಿಚಾರವೂ ಮುಗಿದಿದೆ ಎಂದರು.

ಇಷ್ಟರ ಮೇಲೂ ಮುಂದಿನ ದಿನದಲ್ಲಿ ಪಕ್ಷದ ವರಿಷ್ಟರು ಬೇರೆ ಏನಾದರೂ ತೀರ್ಮಾನ ತೆಗೆದುಕೊಂಡರೆ ಅದಕ್ಕೂ ಕೂಡ ನಾವು ಬದ್ಧವಾಗಿ ಇರುತ್ತೇವೆ. ಚಾಮುಂಡೇಶ್ವರಿ ಕ್ಷೇತ್ರಕ್ಕೆ ಈಗಾಗಲೇ ಪಕ್ಷದ ಕಷ್ಟ ಸುಖ ಎರಡರಲ್ಲೂ ಜೊತೆಯಿರುವ ಮುಖಂಡನನ್ನ ಹುಡುಕುತ್ತಿದ್ದೇವೆ. ಕುಮಾರಸ್ವಾಮಿ ಅವರು ಅದನ್ನೇ ಸ್ಪಷ್ಟ ಪಡಿಸಿದ್ದಾರೆ. ಅವರ ನಿರ್ಧಾರವೇ ಅಂತಿಮ. ನಾನು ಈ ಹಿಂದೆ ಬಿಜೆಪಿಯಲ್ಲಿದ್ದೆ. ನಂತರ ಜೆಡಿಎಸ್ ಗೆ ಬಂದೇ. ನಾನು ಎಲ್ಲಿದ್ದೇವೊ ಆ ಪಕ್ಷ ನಮಗೆ ತಾಯಿ ಇದ್ದಂತೆ ಎಂದರು.

ಜೆಡಿಎಸ್‌ ನಲ್ಲಿಯೇ ಇರುವುದಾಗಿ ಹೇಳುವ ಜಿ.ಟಿ. ದೇವೇಗೌಡರು, ನಮ್ಮ ಪಕ್ಷದಲ್ಲೇ ಇದ್ದು ಕೆ.ಆರ್. ನಗರಕ್ಕೆ ಬಂದು ಏನು ಮಾಡಿದರು. ಸಹಕಾರ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಸಹಾಯ ಮಾಡಿದರು. ಇದೆಲ್ಲವೂ ನಮಗೆ ಗೊತ್ತಿದೆ. ಜಿ.ಟಿ. ದೇವೇಗೌಡರ ನಿಷ್ಠೆ, ಪ್ರಾಮಾಣಿಕತೆ, ಬದ್ಧತೆ ಎಲ್ಲವನ್ನೂ ಪಕ್ಷದ ಹೈ ಕಮಾಂಡ್ ಗಮನಸಿಯೇ ಈ ಮಹತ್ವದ ನಿರ್ಧಾರ ಮಾಡಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್‌ ಜಿಲ್ಲಾಧ್ಯಕ್ಷ ಎಂ. ಅಶ್ವಿನ್‌ಕುಮಾರ್‌, ನಗರಾಧ್ಯಕ್ಷ ಎಸ್‌ಬಿಎಂ ಮಂಜು, ಮಾಜಿ ಮೇಯರ್‌ ಗಳಾದ ಆರ್‌. ಲಿಂಗಪ್ಪ, ಎಂ.ಜೆ. ರವಿಕುಮಾರ್‌, ನಗರ ಪಾಲಿಕೆ ಮಾಜಿ ಸದಸ್ಯೆ, ಅಶ್ವಿನಿ ಅನಂತ್‌, ಜಿಪಂ ಮಾಜಿ ಸದಸ್ಯ ಸಿ.ಜೆ. ದ್ವಾರಕೀಶ್‌ ಮೊದಲಾದವರು ಇದ್ದರು.