ಮುಂಡಗೋಡ:
ಜಗತ್ತಿಗೆ ಬೌದ್ಧ ಧರ್ಮ ಪ್ರಚಾರಪಡಿಸಿದ ಭಗವಾನ ಬುದ್ಧ ಅವರನ್ನು ಏಷ್ಯಾದ ಬೆಳಕು ಎಂದು ಕರೆಯಲಾಗುತ್ತದೆ ಎಂದು ಮುಂಡಗೋಡ ತಹಸೀಲ್ದಾರ್ ಶಂಕರ ಗೌಡಿ ಹೇಳಿದರು.ಅವರು ಶುಕ್ರವಾರ ಇಲ್ಲಿಯ ಮಿನಿ ವಿಧಾನಸೌದ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಭಗವಾನ್ ಬುದ್ಧ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ಸಾಕಷ್ಟು ಧರ್ಮಗಳ ಬಗ್ಗೆ ತಪ್ಪುಕಲ್ಪನೆ ಹಾಗೂ ಸಮಾಜದಲ್ಲಿ ಹಲವು ದೋಷಗಳು ನಿರ್ಮಾಣವಾಗಿದ್ದ ೬ನೇ ಶತಮಾನದಲ್ಲಿ ಭಗವಾನ್ ಬುದ್ಧ ಹಾಗೂ ಮಹಾವೀರರು ಪ್ರಭಾವ ಬೀರಿದವರು. ಚೀನಾ, ಜಪಾನ್ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಬೌದ್ಧ ಧರ್ಮದ ಪ್ರಭಾವವಿದೆ. ಕೋಟ್ಯಂತರ ಜನ ಬೌದ್ಧ ಧರ್ಮದ ಅನುಯಾಯಿಗಳಿದ್ದಾರೆ. ಮುಂಡಗೋಡದಲ್ಲಿ ಬೌದ್ಧ ಧರ್ಮ ಅನುಯಾಯಿಗಳಾದ ಟಿಬೇಟಿಯನ್ನರು ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಇಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸುಮಾ ಮಾತನಾಡಿ, ಭಗವಾನ ಬುದ್ಧ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕಲ್ಲದೇ ನಮ್ಮ ಮಕ್ಕಳಿಗೂ ಈ ಬಗ್ಗೆ ತಿಳಿಸಬೇಕಿದೆ. ಜೀವನವೇ ನಶ್ವರ ಎಂಬುದನ್ನು ಅರಿತು ಆಸೆ ಬಿಡಲಾಗದಿದ್ದರೂ ಕನಿಷ್ಠ ದುರಾಸೆಯನ್ನಾದರೂ ಬಿಟ್ಟು ಬದುಕಿದರೆ ಮನಶಾಂತಿ, ನೆಮ್ಮದಿಯಿಂದ ಬದುಕಬಹುದು ಎಂದರು.ತಾಪಂ ಕಾರ್ಯನಿರ್ವಹಣಾಧಿಕಾರಿ ಟಿ.ವೈ. ದಾಸನಕೊಪ್ಪ, ಪಪಂ ಮುಖ್ಯಾಧಿಕಾರಿ ಸಂತೋಷಕುಮಾರ ಹಾಲಕಲ್ಲಾಪುರ, ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ಕರಿಯಪ್ಪ, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಸ್. ಫಕ್ಕೀರಪ್ಪ, ಸಮತಾ ಸೈನಿಕ ದಳ ಮುಖ್ಯಸ್ಥ ಅಶೋಕ ಚವಾದಿ, ಲೋಕೋಪಯೋಗಿ ಇಲಾಖೆ ಅಧಿಕಾರಿ ಮಹಾದೇವಪ್ಪ ಹ್ಯಾಟಿ, ರಾಘವೇಂದ್ರ ಟಪಾದವರ, ಅರುಣ ಗೊಂದಳೆ, ಎಂ.ಪಿ. ಕುಸೂರ, ಸಲೀಂ ಭಗವಾನ್ ಬುದ್ಧನ ಬಗ್ಗೆ ಉಪನ್ಯಾಸ ನೀಡಿದರು.
ಟಿಬೇಟಿಯನ್ ಧರ್ಮಗುರುಗಳು ಉಪಸ್ಥಿತರಿದ್ದರು. ಅಶೋಕ ಶಂಕ್ರಿಕೊಪ್ಪ ಸ್ವಾಗತಿಸಿದರು. ರುದ್ರಮುನಿ ಬಿ.ಎ. ಕಾರ್ಯಕ್ರಮ ನಿರೂಪಿಸಿದರು.