ಸಾರಾಂಶ
ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ
ಪ್ರಕಾಶ್ ಸುಬ್ರಹ್ಮಣ್ಯ ಗ್ರಾಮೀಣ ಪ್ರದೇಶ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪರಿಸರ ಸ್ನೇಹಿ ಮೃಣ್ಮಯ ಗಣಪನ ಮೂರ್ತಿಗಳನ್ನು ಕಲಾತ್ಮಕವಾಗಿ ರಚಿಸುವ ಕಾಯಕವನ್ನು ಸುಮಾರು ಮೂವತ್ತು ವರ್ಷಗಳಿಂದ ಬ್ಯಾಂಕ್ ಅಧಿಕಾರಿಯೊಬ್ಬರು ಮಾಡಿಕೊಂಡು ಬಂದಿದ್ದಾರೆ. ಸುಬ್ರಹ್ಮಣ್ಯ ಶ್ರೀ ಸಾರ್ವಜನಿಕ ಗಣೇಶೋತ್ಸವದಲ್ಲಿ ಆರಾಧಿಸಲ್ಪಡುವ ಗಣೇಶ ಮೂರ್ತಿಯನ್ನು ಉಚಿತವಾಗಿ ನೀಡುವ ಇವರು, ಉಳಿದ ಮೂರ್ತಿಗಳಿಗೆ ಇಂತಿಷ್ಟೇ ದರ ಎಂದು ನಿಗದಿ ಪಡಿಸಿಲ್ಲ. ಗ್ರಾಹಕರು ಕೊಟ್ಟಷ್ಟು ಹಣವನ್ನಷ್ಟೇ ಕಾಣಿಕೆ ರೂಪದಲ್ಲಿ ಪಡೆಯುತ್ತಾರೆ.ವೃತ್ತಿಯಲ್ಲಿ ಬ್ಯಾಂಕ್ ಮ್ಯಾನೇಜ್ ಆಗಿರುವ ಕೃಷ್ಣಪ್ರಸಾದ್ ಅವರು ಚೌತಿ ಬಂತೆಂದರೆ ಊರಿಗೆ ಮರಳಿಗೆ ಗಣೇಶ ಮೂರ್ತಿಗಳ ರಚನೆಯಲ್ಲಿ ತೊಡಗುತ್ತಾರೆ. ಕುಕ್ಕೆ ಸುಬ್ರಹ್ಮಣ್ಯದವರಾದ ಕೃಷ್ಣ ಪ್ರಸಾದ್ ಪ್ರಸ್ತುತ ಬ್ಯಾಂಕ್ ಆಫ್ ಬರೋಡ ಅಮರಾವತಿಯ ರೀಜನಲ್ ಆಫೀಸ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ ೨ ವರ್ಷಗಳ ಕಾಲ ಕುಕ್ಕೆ ಸುಬ್ರಹ್ಮಣ್ಯ ಶಾಖೆಯ ಪ್ರಬಂಧಕರಾಗಿದ್ದರು.
ಕೃಷ್ಣಪ್ರಸಾದ್ ಅವರು ಮಣ್ಣಿನಿಂದ ಗಣಪನ ಸುಂದರ ಮೂರ್ತಿಯನ್ನು ನಿರ್ಮಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ತನ್ನೂರಿನ ಸೇವೆಯನ್ನು ಇಂದಿಗೂ ಈ ಮೂಲಕ ಸಲ್ಲಿಸುತ್ತಿರುವ ಅಪ್ರತಿಮ ಕಲಾವಿದರು.ಎಳೆವೆಯಲ್ಲಿ ತಂದೆ ಪದ್ಮನಾಭ ಭಟ್ ಹಾಗೂ ಸಹೋದರ ವಾಸುದೇವ ಭಟ್ ಅವರು ತಯಾರಿಸುತ್ತಿದ್ದ ಮೃಣ್ಮಯ ಗಣಪತಿ ವಿಗ್ರಹವನ್ನು ನೋಡಿ ತಾನೂ ಕೂಡಾ ವಿಗ್ರಹ ರಚನಾ ಕಾರ್ಯಕ್ಕೆ ಮುಂದಾಗಿದ್ದರು. ಬಳಿಕ ಆ ಕಾಲದಲ್ಲಿ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಗಣಪನ ವಿಗ್ರಹ ರಚನೆ ಮಾಡುತ್ತಿದ್ದ ಹಿರಿಯರಾದ ಗೋಪಿ ಕಿಟ್ಟಣ್ಣ ಅವರು ತಯಾರಿಸುತ್ತಿದ್ದ ಮೂರ್ತಿಗಳನ್ನು ನೋಡಿ ಅವರಿಗೆ ಸಹಾಯಕನಾಗಿ ಸಹಕರಿಸುತ್ತಾ ವಿಗ್ರಹ ರಚನಾ ಕಾರ್ಯವನ್ನು ಕರಗತ ಮಾಡಿಕೊಂಡರು. ಅಧಿಕಾರಿಯಾಗಿದ್ದರೂ ತನ್ನೂರಿಗೆ ಸಲ್ಲಿಸುವ ಈ ಸೇವೆಯನ್ನು ನಿಲ್ಲಿಸದೆ ಮುಂದುವರಿಸುತ್ತಿರುವ ಕೃಷ್ಣಪ್ರಸಾದ್ ಅವರಿಗೆ ಸಹೋದರ ವಾಸುದೇವ ಭಟ್ ಸಹಾಯ ಮಾಡುತ್ತಾರೆ.
ಸಂಭಾವನೆ ಇಲ್ಲ: ಮೂವತ್ತು ವರ್ಷಗಳಿಂದ ಶ್ರೀ ಮಠದ ಗಣಪನ ಮೂರ್ತಿ ಸೇರಿದಂತೆ ಸ್ಥಳೀಯವಾಗಿ ವಿವಿಧ ಕಡೆಗಳಿಗೆ ಸುಮಾರು ೧೫ಕ್ಕೂ ಅಧಿಕ ವಿಗ್ರಹಗಳನ್ನು ಇವರು ತಯಾರಿಸುತ್ತಿದ್ದಾರೆ. ಗಣಪತಿ ಮೂರ್ತಿ ರಚಿಸುವ ಹವ್ಯಾಸ ಹೊಂದಿರುವ ಇವರು ತಮ್ಮ ಕಾಯಕಕ್ಕೆ ಯಾವುದೇ ಸಂಭಾವನೆ ಪಡೆಯುವುದಿಲ್ಲ. ಗಣೇಶ ಮೂರ್ತಿಗಳನ್ನು ಕೊಂಡೊಯ್ಯುವವರು ಕಾಣಿಕೆ ರೂಪದಲ್ಲಿ ನೀಡುವ ಹಣವನ್ನೇ ಪಡೆಯುತ್ತಾ ಕಲಾ ಸೇವೆ ಮಾಡುತ್ತಿದ್ದಾರೆ.