ಎಲ್ಲ ವಯಸ್ಸಿನವರಿಗೂ ಇಷ್ಟವಾಗುವ ಶ್ರೀಕೃಷ್ಣ ಚರಿತೆ

| Published : Aug 27 2024, 01:35 AM IST

ಸಾರಾಂಶ

ಮಗು ಅತ್ತರೆ ಮಗುವಿನ ಕೈಗೆ ಮೊಬೈಲ್ ನೀಡಬೇಡಿ, ಅದರ ಬದಲಾಗಿ ಕೃಷ್ಣನ ಹಾಡುಗಳನ್ನು ಕೇಳಿಸಿ, ನಮ್ಮ ತಂದೆ ತಾಯಿಗಳು ನಮ್ಮನ್ನು ಶಾಲೆಗೆ ನಡೆದುಕೊಂಡು ಹೋಗಿ ಎನ್ನುತ್ತಿದ್ದರು, ಆದರೆ ಈಗಿನ ಮಕ್ಕಳು ವಾಹನವಿಲ್ಲದೆ ಶಾಲೆಗೆ ಹೋಗುವುದಿಲ್ಲ. ಮಕ್ಕಳಿಗೆ ನಡೆಯುವುದನ್ನು ಕಲಿಸಿಕೊಡಿ

ಕನ್ನಡಪ್ರಭ ವಾರ್ತೆ ಕೆಜಿಎಫ್ಕೃಷ್ಣನೆಂದರೆ ನೆನಪಾಗುವುದು ತುಂಟತನವಾದರೂ ಅದು ಜೀವನದ ಒಂದು ಪುಟ್ಟ ಭಾಗವಷ್ಟೇ. ಕೃಷ್ಣ ಯಾವ ವಯಸ್ಸಿಗೆ ಹೇಗಿರಬೇಕೋ ಹಾಗೇ ಬೆಳೆದಿದ್ದ. ಏನೇನು ಮಾಡಬೇಕೋ ಅದನ್ನೆಲ್ಲವನ್ನೂ ಪರಿಪೂರ್ಣವಾಗಿ ಮಾಡಿದ್ದ. ಹಾಗಾಗಿಯೇ ಅವನ ಬದುಕು ಎಲ್ಲ ವಯಸ್ಸಿನವರಿಗೂ ಇಷ್ಟವಾಗುತ್ತದೆ ಎಂದು ಶಾಸಕಿ ರೂಪಕಲಾಶಶಿಧರ್ ಹೇಳಿದರು.ಕೆಜಿಎಫ್ ತಾಲೂಕಿನ ಯಾದವ ಸಂಘದಿಂದ ಶ್ರೀ ಪ್ರಸನ್ನ ವೆಂಕಟರಮಣ ದೇವಾಲಯದ ಆವರಣದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್‍ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬ ತಾಯಿ ತನಗೆ ಕೃಷ್ಣನಂಥ ಒಂದು ಮಗು ಬೇಕು ಎಂದು ಆಶಿಸುತ್ತಾಳೆ. ನನ್ನ ಮಗು ಅವನಂತೆ ತುಂಟತನ ಮಾಡುತ್ತಾನೆ ಎಂದು ಖುಷಿಪಡುತ್ತಾಳೆ, ಮಗುವಿನ ಕೈಯಲ್ಲೊಂದು ಕೊಳಲು, ತಲೆಗೊಂದು ನವಿಲುಗರಿ ಇಟ್ಟು ಅವಳೇ ಯಶೋಧೆಯಾಗುತ್ತಾಳೆ ಎಂದು ಬಣ್ಣಿಸಿದರು.

ಮಕ್ಕಳಿಗೆ ಸಂಸ್ಕಾರ ಕಲಿಸಿ

ಮಗು ಅತ್ತರೆ ಮಗುವಿನ ಕೈಗೆ ಮೊಬೈಲ್ ನೀಡಬೇಡಿ, ಅದರ ಬದಲಾಗಿ ಕೃಷ್ಣನ ಹಾಡುಗಳನ್ನು ಕೇಳಿಸಿ, ಶಾಲೆಗೆ ಹೋಗುವ ಮಕ್ಕಳನ್ನು ವಾಹನಗಳಲ್ಲಿ ಕಳುಹಿಸಿ ಶಾಲೆಯ ಮುಂದೆ ಬಿಟ್ಟರೆ ನಮ್ಮ ಜಾವಬ್ದರಿ ಮುಗಿಯಿತು ಎಂದು ತಿಳಿಯಬೇಡಿ, ನಮ್ಮ ತಂದೆ ತಾಯಿಗಳು ನಮ್ಮನ್ನು ಶಾಲೆಗೆ ನಡೆದುಕೊಂಡು ಹೋಗಿ ಎನ್ನುತ್ತಿದ್ದರು, ಆದರೆ ಈಗಿನ ಮಕ್ಕಳು ವಾಹನವಿಲ್ಲದೆ ಶಾಲೆಗೆ ಹೋಗುವುದಿಲ್ಲ ಮಕ್ಕಳಿಗೆ ಇಂತಹ ಸಂಸ್ಕಾರ ನೀಡಿದರೆ ಹೇಗೆ ಎಂದು ಪ್ರಶ್ನಿಸಿದ ಅ‍ವರು, ಮಕ್ಕಳಿಗೆ ನಡೆಯುವುದನ್ನು ಕಲಿಸಿಕೊಡಿ ಎಂದು ಸಲಹೆ ನೀಡಿದರು.

ಸಮುದಾಯದ ಕೆಜಿಎಫ್ ತಾಲೂಕಿನ ಅಧ್ಯಕ್ಷ ಉಮೇಶ್, ಸಮುದಾಯದ ಮುಖಂಡರಾದ ಗೋವಿಂದರಾಜು, ಹರಿಕೃಷ್ಣ, ಚಿನ್ನಪ್ಪ ನಾಯ್ಡ, ಬಿಇಒ ಮುನಿವೆಂಕಟರಾಮಚಾರಿ, ನಗರಸಭೆ ಸದಸ್ಯರಾದ ಕರುಣಾಕರನ್, ಅ.ಮು.ಲಕ್ಷ್ಮಿನಾರಾಯಣ, ವಕೀಲರಾದ ಪದ್ಮನಾಭರೆಡ್ಡಿ , ಸರಕಾರಿ ನೌಕರರ ಸಂಘದ ಅಧ್ಯಕ್ಷ ನರಸಿಂಹಮೂರ್ತಿ ಇದ್ದರು.