ದುಷ್ಟಶಕ್ತಿ ಅಳಿಸಿ ಧರ್ಮ ಸಂಸ್ಥಾಪನೆಗೆ ಅವತರಿಸಿದ ಶ್ರೀಕೃಷ್ಣ; ಎಸ್ ಪಿ ಶಿವಾಂಶು ರಜಪೂತ್

| Published : Aug 17 2025, 01:40 AM IST

ದುಷ್ಟಶಕ್ತಿ ಅಳಿಸಿ ಧರ್ಮ ಸಂಸ್ಥಾಪನೆಗೆ ಅವತರಿಸಿದ ಶ್ರೀಕೃಷ್ಣ; ಎಸ್ ಪಿ ಶಿವಾಂಶು ರಜಪೂತ್
Share this Article
  • FB
  • TW
  • Linkdin
  • Email

ಸಾರಾಂಶ

ಸಮುದಾಯದಲ್ಲಿ ಸಾಧನೆಗೈದವರನ್ನು ಹಾಗೂ ಸಮುದಾಯದಲ್ಲಿ ವಿವಿಧ ಪರೀಕ್ಷೆಗಳಲ್ಲಿ ಉನ್ನತ ಅಂಕ ಪಡೆದ ವಿದ್ಯಾರ್ಥಿಗಳನ್ನು ವೇದಿಕೆಯಲ್ಲಿ ಶಾಸಕಿ ರೂಪಕಲಾ ಶಶಿಧರ್, ಎಸ್ಪಿ ಶಿವಾಂಶು ರಜಪೂತ್, ತಹಸೀಲ್ದಾರ್ ಭರತ್ ಅವರ ಸಮ್ಮಖದಲ್ಲಿ ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಕೆಜಿಎಫ್

ಭಗವಾನ್ ಶ್ರೀ ಕೃಷ್ಣ ಹುಟ್ಟಿದ ದಿನವೇ ಕೃಷ್ಣ ಜನ್ಮಾಷ್ಟಮಿ ಹಬ್ಬವಾಗಿದೆ. ಈ ಪವಿತ್ರ ದಿನದಂದು ಕೃಷ್ಣನ ಬಾಲ ರೂಪವನ್ನು ಪೂಜಿಸುವ ಸಂಪ್ರದಾಯವಾಗಿದೆ ಎಂದು ಶಾಸಕಿ ರೂಪಕಲಾ ಶಶಿಧರ್ ತಿಳಿಸಿದರು.

ನಗರದ ರೆಡ್ಡಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಯಾದವ ಸಮುದಾಯದಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರತಿ ವರ್ಷ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಆಗಸ್ಟ್ ೧೬ರಂದು ಆಚರಿಸಲಾಗುವುದು. ಹಿಂದೂ ಧರ್ಮದಲ್ಲಿ ಕೃಷ್ಣ ಜನ್ಮಾಷ್ಟಮಿ ಅತ್ಯಂತ ಪವಿತ್ರ ಹಬ್ಬವಾಗಿದೆ. ಶ್ರೀಕೃಷ್ಣನು ವಿಷ್ಣುವಿನ ೮ನೇ ಅವತಾರವಾಗಿದ್ದು, ವಿಷ್ಣು ದೇವನು ಕೃಷ್ಣನ ಅವತಾರದಲ್ಲಿ ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಭೂಮಿಯಲ್ಲಿ ಅವತರಿಸಿದನು ಎಂದು ಹೇಳಲಾಗುತ್ತದೆ. ಈ ದಿನವನ್ನೇ ನಾವು ಕೃಷ್ಣ ಜನ್ಮಾಷ್ಟಮಿ ಎಂದು ಆಚರಿಸುತ್ತೇವೆ. ಈ ದಿನದಂದು ಕೃಷ್ಣನನ್ನು ಪೂಜಿಸುವುದರ ಜೊತೆಗೆ ಆತನ ಭಜನೆಗಳನ್ನು, ಮಂತ್ರಗಳನ್ನು ಪಠಿಸುವ ಸಂಪ್ರದಾಯವಿದೆ. ಮಧ್ಯರಾತ್ರಿ ಶ್ರೀಕೃಷ್ಣನಿಗೆ ಸಲ್ಲಿಸುವ ಪೂಜೆಯು ಹೆಚ್ಚು ಶ್ರೇಷ್ಠವೆನಿಸಿಕೊಂಡಿದೆ ಎಂದರು.

ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ಮಾತನಾಡಿ, ಕೃಷ್ಣ ಜನ್ಮಾಷ್ಟಮಿಯು ತನ್ನ ದುಷ್ಟತನದ ಪ್ರತೀಕವಾದ ಸೋದರಮಾವ ಕಂಸನ ಆಳ್ವಿಕೆಯನ್ನು ಕೊನೆಗೊಳಿಸಲು ಮತ್ತು ಜಗತ್ತಿನಲ್ಲಿ ಧರ್ಮದ ಸಮತೋಲನವನ್ನು ಪುನಃಸ್ಥಾಪಿಸಲು ಜನಿಸಿದ ಶ್ರೀಕೃಷ್ಣನ ದೈವಿಕ ಜನನದ ದಿನವನ್ನು ಸಂಕೇತಿಸುತ್ತದೆ. ಈ ದಿನವನ್ನು ಕೆಡುಕಿನ ಮೇಲೆ ಒಳಿತಿನ ವಿಜಯವೆಂದು, ಬ್ರಹ್ಮಾಂಡದಲ್ಲಿ ದುಷ್ಟತನವನ್ನು ನಾಶ ಮಾಡಿ ಒಳಿತನ್ನು ಪುನಃ ಸ್ಥಾಪಿಸುವ ದಿನವೆಂದು ಕರೆಯಲಾಗಿದೆ. ಈ ಶುಭ ದಿನದಂದು ಕೃಷ್ಣನನ್ನು ದೈವಿಕ ಸಂತೋಷ ಮತ್ತು ಪ್ರೀತಿಯ ಸಂಕೇತವೆಂದು ಪೂಜಿಸಲಾಗುತ್ತದೆ. ಈ ಹಬ್ಬವು ಆಧ್ಯಾತ್ಮಿಕ ಪ್ರಯೋಜನವನ್ನು ಸಹ ಹೊಂದಿದೆ, ಏಕೆಂದರೆ ಈ ದಿನ ನಾವು ಮಾಡುವ ಪೂಜೆಯು ಮೋಕ್ಷವನ್ನು ನೀಡುತ್ತದೆ. ಜನ್ಮ ಜನ್ಮಗಳ ಪಾಪವನ್ನು ಶುದ್ಧೀಕರಿಸಲಾಗುತ್ತದೆ ಎಂದರು.

ತಹಸೀಲ್ದಾರ್ ಭರತ್.ಎನ್.ಎನ್ ಮಾತನಾಡಿ, ಕೃಷ್ಣನ ಮಂತ್ರಗಳನ್ನು ಪಠಿಸುವುದರಿಂದ ಕೃಷ್ಣನ ದೈವಿಕ ಆಶೀರ್ವಾದವನ್ನು ಪಡೆದುಕೊಂಡು ನ್ಯಾಯ ಮಾರ್ಗದಲ್ಲಿ ನಡೆದುಕೊಳ್ಳಲು ಸಹಕಾರಿಯಾಗಿದೆ ಎಂದರು.

ಯಾದವ ಸಮುದಾಯದ ಅಧ್ಯಕ್ಷ ಉಮೇಶ್ ಅವರು ಪ್ರಾಸ್ತಾವಿಕ ನುಡಿಗಳನ್ನು ಆಡಿದರು, ಜಿಲ್ಲಾ ಉಪಾಧ್ಯಕ್ಷೆ ಮಾಲತಿ ರಾಧಮ್ಮ, ಮುಖಂಡರಾದ ಡಾ.ಹರೀಶ್, ನಿವೃತ್ತ ಶಿಕ್ಷಕರಾದ ಗೋವಿಂದರಾಜು, ಜಕ್ಕರಸನ ಕುಪ್ಪ ಮುದ್ದುಕೃಷ್ಣ, ಲಕ್ಷ್ಮೀನಾರಾಯಣ್, ಸರ್ಕಾರಿ ವಕೀಲ, ಗೌರವಾಧ್ಯಕ್ಷ ಗುರುಸಾಲ ಶ್ರೀನಿವಾಸ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನರಸಿಂಹಮೂರ್ತಿ, ಚಿನ್ನಪ್ಪನಾಯ್ಡು ಅವರು ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮದಲ್ಲಿ ಬಾಗಿಯಾಗಿದ್ದರು.

ಸಮುದಾಯದಲ್ಲಿ ಸಾಧನೆಗೈದವರನ್ನು ಹಾಗೂ ಸಮುದಾಯದಲ್ಲಿ ವಿವಿಧ ಪರೀಕ್ಷೆಗಳಲ್ಲಿ ಉನ್ನತ ಅಂಕ ಪಡೆದ ವಿದ್ಯಾರ್ಥಿಗಳನ್ನು ವೇದಿಕೆಯಲ್ಲಿ ಶಾಸಕಿ ರೂಪಕಲಾ ಶಶಿಧರ್, ಎಸ್ಪಿ ಶಿವಾಂಶು ರಜಪೂತ್, ತಹಸೀಲ್ದಾರ್ ಭರತ್ ಅವರ ಸಮ್ಮಖದಲ್ಲಿ ಸನ್ಮಾನಿಸಲಾಯಿತು.

ತಾಲೂಕಿನ ವಿವಿಧ ನಗರ ಮತ್ತು ಗ್ರಾಮಗಳಿಂದ ೨೦ಕ್ಕೂ ಹೆಚ್ಚು ಶ್ರೀ ಕೃಷ್ಣನ ಸ್ಥಬ್ದ ಚಿತ್ರಗಳ ಮೆರವಣಿಗೆ ಜನ ಮನ ಸೆಳೆಯಿತು, ನಗರದ ಗೀತಾರಸ್ತೆ, ಪಿರ್ಚ್ಡ್ಡ್ ರಸ್ತೆ, ಗಾಂಧಿ ವೃತ್ತದಲ್ಲಿ ಮೆರವಣಿಗೆ ನಡೆಯಿತು.

ಕಾರ‍್ಯಕ್ರಮದ ಸ್ವಾಗತವನ್ನು ಶಿಕ್ಷಕ ಕೃಷ್ಣಮೂರ್ತಿ ಕೋರಿದರು, ನಿರೂಪಣೆಯನ್ನು ಶಿಕ್ಷಕಿ ನಾಗವೇಣಿ ವಹಿಸಿಕೊಂಡಿದ್ದರು.