12 ವರ್ಷಗಳ ಕಾಲ ತಮ್ಮ ಇಂದ್ರೀಯಗಳನ್ನು ಹಿಡಿತದಲ್ಲಿಟ್ಟುಕೊಂಡಿದ್ದ ಮಹಾವೀರರು ಅಹಿಂಸೆ, ಸತ್ಯ, ಆಸ್ತೇಯ, ಬ್ರಹ್ಮಚರ್‍ಯ ಮತ್ತು ಅಪರಿಗ್ರಹ ಎಂಬ 5 ಪ್ರಮುಖ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಹಾಗಾಗಿ ಇಂದಿಗೂ ಕೂಡ ಜೈನ ಸಮುದಾಯ ಪ್ರಾಣಿ ಹಿಂಸೆ, ಅಸತ್ಯ, ಸುಳ್ಳು, ಮೋಸ, ಕಳ್ಳತನ ಸುಲಿಗೆಯನ್ನು ಸಹಿಸುವುದಿಲ್ಲ.
ಕನ್ನಡಪ್ರಭ ವಾರ್ತೆ ನಾಗಮಂಗಲ
ಜೈನ ಧರ್ಮದ 24ನೇ ಮತ್ತು ಅಂತಿಮ ತೀರ್ಥಂಕರ ಭಗವಾನ್ ಮಹಾವೀರರು 30ನೇ ವಯಸ್ಸಿನಲ್ಲಿ ತಮ್ಮ ಲೌಕಿಕ ಸುಖವನ್ನು ತ್ಯಜಿಸಿ ಜೀವನದ ಸತ್ಯದಾರಿಯ ಹುಡುಕಾಟದಲ್ಲಿ ಸಾಗಿದ ಮಹಾನ್ ದಾರ್ಶನಿಕ ವ್ಯಕ್ತಿ ಎಂದು ತಹಸೀಲ್ದಾರ್ ಜಿ.ಆದರ್ಶ ಹೇಳಿದರು.ಪಟ್ಟಣದ ತಾಲೂಕು ಆಡಳಿತ ಸೌಧದ ನ್ಯಾಯಾಲಯ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಭಗವಾನ್ ಮಹಾವೀರರ 2625ನೇ ಜಯಂತ್ಯುತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
12 ವರ್ಷಗಳ ಕಾಲ ತಮ್ಮ ಇಂದ್ರೀಯಗಳನ್ನು ಹಿಡಿತದಲ್ಲಿಟ್ಟುಕೊಂಡಿದ್ದ ಮಹಾವೀರರು ಅಹಿಂಸೆ, ಸತ್ಯ, ಆಸ್ತೇಯ, ಬ್ರಹ್ಮಚರ್‍ಯ ಮತ್ತು ಅಪರಿಗ್ರಹ ಎಂಬ 5 ಪ್ರಮುಖ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಹಾಗಾಗಿ ಇಂದಿಗೂ ಕೂಡ ಜೈನ ಸಮುದಾಯ ಪ್ರಾಣಿ ಹಿಂಸೆ, ಅಸತ್ಯ, ಸುಳ್ಳು, ಮೋಸ, ಕಳ್ಳತನ ಸುಲಿಗೆಯನ್ನು ಸಹಿಸುವುದಿಲ್ಲ ಎಂದರು.ಲೌಕಿಕ ಸಂಬಂಧಗಳಿಗೆ ಭಾವನಾತ್ಮಕ ಸಂಬಂಧ ಬೆಳೆಸಿಕೊಂಡರೆ ಮೋಕ್ಷ ಸಿಗುವುದಿಲ್ಲ ಎಂದು ಪ್ರತಿಪಾದಿಸುತ್ತದೆ. ಜೈನ ಸಮುದಾಯದ ಪ್ರತಿಯೊಬ್ಬರೂ ಕೂಡ ಕಷ್ಟಪಟ್ಟು ದುಡಿಯುವ ಶ್ರಮಿಕರು. ದೇಶದ ಆರ್ಥಿಕತೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಭಗವಾನ್ ಮಹಾವೀರರ ಬೋಧನೆ ಹಾಗೂ ತತ್ವಗಳನ್ನು ಪಾಲಿಸಿದರೆ ಸದೃಢ ರಾಷ್ಟ್ರವನ್ನು ಕಾಣಬಹುದಾಗಿದೆ ಎಂದರು.
ಸಮುದಾಯದ ಮುಖಂಡ ಅಜಿತ್ ಜೈನ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜೈನ ಸಮಾಜದ ಶ್ರೇಯೋಭಿವೃದ್ಧಿಗೆ ಪೂರಕವಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಗುರುಕುಲದ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅಗತ್ಯ ಅನುದಾನ, ಜೈನ ಪುರೋಹಿತರಿಗೆ ಮಾಸಿಕ ಗೌರವಧನ ಸೇರಿದಂತೆ ಅವನತಿಯ ಹಂತದಲ್ಲಿರುವ ಜೈನ ಬಸದಿಗಳ ಜೀರ್ಣೋದ್ಧಾರಕ್ಕಾಗಿ ರಾಜ್ಯ ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿದೆ ಎಂದರು.ಸಮುದಾಯದ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೂ ಕೂಡ ವಿದ್ಯಾರ್ಥಿವೇತನ ನೀಡುತ್ತಿರುವುದು ಸಂತಸದ ವಿಚಾರ. ಭಗವಾನ್ ಮಹಾವೀರರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಬೆಳ್ಳೂರಿನ ಜೈನ ಸಮುದಾಯದ ಮುಖಂಡ ಪದ್ಮನಾಭ (ಪಾಪಣ್ಣ) ತಾಪಂ ಮಾಜಿ ಸದಸ್ಯ ವೆಂಕಟೇಶ್, ದಸಂಸ ಮುಖಂಡ ಬೆಳ್ಳೂರು ಶಿವಣ್ಣ ಮಾತನಾಡಿದರು. ಕ್ಷೇತ್ರ ಸಮನ್ವಯಾಧಿಕಾರಿ ಕೆ.ರವೀಶ್, ಬೆಳ್ಳೂರು ನಾಡಕಚೇರಿ ಉಪ ತಹಸೀಲ್ದಾರ್ ಪದ್ಮ, ಮುಖಂಡ ರವಿ ಸೇರಿದಂತೆ ತಾಲೂಕಿನ ಕಂಬದಹಳ್ಳಿ ಜೈನಮಠದ ವಿದ್ಯಾರ್ಥಿಗಳು, ಸಮುದಾಯದ ಮುಖಂಡರು ಇದ್ದರು.ಶ್ರೀಮಹಾವೀರ ಜಯಂತಿ ಶ್ರದ್ಧಾಭಕ್ತಿಯಿಂದ ಆಚರಣೆಕನ್ನಡಪ್ರಭ ವಾರ್ತೆ ಮದ್ದೂರುತಾಲೂಕು ಆಡಳಿತದಿಂದ ಸೋಮವಾರ ಶ್ರೀಮಹಾವೀರ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ನಡೆದ ಜಯಂತ್ಯುತ್ಸವದಲ್ಲಿ ಶಿರಸ್ತೇದಾರ್ ಲಕ್ಷ್ಮಿ ನರಸಿಂಹನ್ ಮಹಾವೀರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಜಗತ್ತಿನಲ್ಲಿ ಈಗ ಹಿಂಸೆ ಹೆಚ್ಚುತ್ತಿದೆ. ಪ್ರಸ್ತುತ ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಸನ್ನಿವೇಶವನ್ನು ಗಮನಿಸಿದರೆ ಅಹಿಂಸೆ ಅಗತ್ಯ ಎಷ್ಟಿದೆ ಎಂಬುದು ಅರಿವಾಗುತ್ತದೆ. ಇದಕ್ಕೆ ಭಗವಾನ್ ಮಹಾವೀರರ ಅಹಿಂಸೆಯ ಮಾರ್ಗ ನಿಜಕ್ಕೂ ಅನಿವಾರ್ಯವಿದೆ ಎಂದರು.ಜೈನ್ಯ ಸಂಘದ ಅಧ್ಯಕ್ಷ ಅರಿಯಂತ್ ಮಾತನಾಡಿ, ಮಹಾವೀರ ಜೈನ್ ಮುನಿಗಳು ಅಹಿಂಸಾ ತತ್ವ ಆಧಾರದ ಮೇಲೆ ಇತರರಿಗೆ ಮಾದರಿಯಾಗಿ ಜೀವನ ನಡೆಸಿದ್ದಾರೆ. ಮನುಷ್ಯರಂತೆ ಪ್ರಾಣಿಗಳಿಗೂ ಜೀವನ ನಡೆಸುವ ಹಕ್ಕು ಇದೆ ಎಂದು ಪ್ರತಿಪಾದಿಸಿದ್ದಾರೆ. ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಎಲ್ಲರೂ ಸಾಗಬೇಕು ಎಂದರು.ಕಾರ್ಯಕ್ರಮದಲ್ಲಿ ಮದ್ದೂರು ನಗರಸಭೆ ವ್ಯವಸ್ಥಾಪಕ ಶ್ರೀಧರ್, ತಾಲೂಕು ಖಜಾನೆ ಸಹಾಯಕ ನಿರ್ದೇಶಕ ಪರಮೇಶ್ವರ್, ಶಿಕ್ಷಣ ಇಲಾಖೆ ಎಸ್.ಮಹದೇವ್, ಮುಖಂಡರಾದ ಪೊಲೀಸ್ ಮಹಾದೇವ ಮತ್ತಿತರರು ಭಾಗವಹಿಸಿದ್ದರು.