ಸಾರಾಂಶ
ಕೆಲ ಮತ್ಸರ ಬುದ್ಧಿಯ ಜನರು ಲಿಂಗವಿಲ್ಲದ ಭವಿಯ ಮಠಕ್ಕೆ ಹೋಗಬಾರದೆಂದು ತಡೆದರೂ ಅನೇಕ ಮುಗ್ಧ, ಸರಳ ಮನಸ್ಸಿನ ಶಿಷ್ಯವೃಂದದವರು ಬಂದಾಗ ಅವರಿಗೆಲ್ಲ ಅಧ್ವೈತ ಸಿದ್ಧಾಂತದ ತತ್ವ ಬೋಧಿಸಿ ಮುಕ್ತಿ ಮಾರ್ಗ ತೋರಿಸುತ್ತಿದ್ದುದು ಇವರ ವೈಶಿಷ್ಟ್ಯವಾಗಿತ್ತು
ಧಾರವಾಡ: ಸಿದ್ಧಾರೂಢರ ಬಾಲ್ಯ,ಸಾಧಕ ಅವಸ್ಥೆ ಮತ್ತು ಸಿದ್ಧಾವಸ್ಥೆಗಳೆಲ್ಲವೂ ಸಮಚಿತ್ತ ಭಾವಗಳಿಂದ ಕೂಡಿದ್ದು, ಸಂಭವಾಮಿ ಯುಗೆ ಯುಗೇ ಎಂಬ ಗೀತಾಚಾರ‍್ಯರ ನುಡಿಯಂತೆ ಅವತರಿಸಿ ಬಂದ ಸದ್ಗುರು ಸಿದ್ಧಾರೂಢರು ಸದಾ ಬಡವರ, ದೀನ ದಲಿತರ ಕಲ್ಯಾಣ ಬಯಸುತ್ತ ಇಡೀ ದೇಶ ಸುತ್ತಿದವರು ಎಂದು ನಿವೃತ್ತ ಪ್ರಾಧ್ಯಾಪಕ,ಸಾಹಿತಿ ಡಾ. ಅಮೃತ ಯಾರ್ದಿ ಹೇಳಿದರು.
ಅನ್ವೇಷಣಕೂಟವು ಸಾಧನಕೇರಿಯ ಚೈತ್ರದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರುಣ್ಯಸಿಂಧು ಸದ್ಗುರು ಸಿದ್ಧಾರೂಢರ ಜೀವನಲೀಲೆಗಳು ವಿಷಯ ಕುರಿತ ಕಾರ್ಯಕ್ರಮದಲ್ಲಿ ಅವರು, ಕೆಲ ದುರಾಭಿಮಾನಿಗಳು ಮೈಮೇಲೆ ಜನಿವಾರವಿಲ್ಲ, ಲಿಂಗವಿಲ್ಲವೆಂದೆಲ್ಲ ಹಂಗಿಸುತ್ತ ಕಲ್ಲುಗಳಿಂದ ಹೊಡೆದರೂ ಕೂಡ ವಿಚಲಿತರಾಗದೇ ಸ್ಥಿತ ಪ್ರಜ್ಞರಾಗಿದ್ದ ಓಂ ನಮಃಶಿವಾಯ ಎಂಬ ಮಂತ್ರವನ್ನು ಉಚ್ಚ-ನೀಚ ಭಾವವಿಲ್ಲದೇ ಸಕಲರಿಗೂ ಬೋಧಿಸುತ್ತಿದ್ದುದು ಹಾಗೂ ಶಿಷ್ಯವೃಂದದ ಅಂತಃಕರಣ ಶುದ್ಧಿ ಮಾಡುತ್ತಿದುದು ಇವರ ತತ್ವ ಪ್ರಚಾರದ ಮಾರ್ಗವಾಗಿತ್ತು ಎಂದರು.ಕೆಲ ಮತ್ಸರ ಬುದ್ಧಿಯ ಜನರು ಲಿಂಗವಿಲ್ಲದ ಭವಿಯ ಮಠಕ್ಕೆ ಹೋಗಬಾರದೆಂದು ತಡೆದರೂ ಅನೇಕ ಮುಗ್ಧ, ಸರಳ ಮನಸ್ಸಿನ ಶಿಷ್ಯವೃಂದದವರು ಬಂದಾಗ ಅವರಿಗೆಲ್ಲ ಅಧ್ವೈತ ಸಿದ್ಧಾಂತದ ತತ್ವ ಬೋಧಿಸಿ ಮುಕ್ತಿ ಮಾರ್ಗ ತೋರಿಸುತ್ತಿದ್ದುದು ಇವರ ವೈಶಿಷ್ಟ್ಯವಾಗಿತ್ತು ಹೀಗೆ ಬಂದ ಭಕ್ತರಿಗೆಲ್ಲ ಭಗವಂತನಾಗಿದ್ದರು ಎಂದರು.
ಅಧ್ಯಕ್ಷತೆ ವಹಿಸಿದ್ದ ಕವಿವಿ ನಿವೃತ್ತ ಕುಲಸಚಿವ ಡಾ.ಮಹಾದೇವ ಜೋಶಿ, ಪೂರ್ವಜನ್ಮದ ಸುಕೃತಗಳಿಂದ,ಅವತಾರಿಗಳಾಗಿ ಬಂದ ಸಂತ ಮಹಾಂತರನ್ನು ಪರೀಕ್ಷಿಸಬಾರದು. ಜೀವನದಲ್ಲಿ ಯಾವುದೂ ಪುಕ್ಕಟೆ ಸಿಗುವದಿಲ್ಲವೆಂಬುದನ್ನು ಮನಗಂಡು ಸೂಕ್ತ ಅರ್ಹತೆ ಪಡೆದು ಸಾರ್ಥಕ ಜೀವಿಗಳಾಗುವದೇ ನಿಮ್ಮ ಜೀವನದ ಗುರಿಯಾಗಬೇಕು ಎಂದರು.ಪ್ರಾರಂಭದಲ್ಲಿ ಇತ್ತೀಚೆಗೆ ನಿಧನರಾದ ವಿದ್ಯಾವಾಚಸ್ಪತಿ, ಹಿರಿಯ ಸಾಹಿತಿ ಡಾ.ಪಂಚಾಕ್ಷರಿ ಹಿರೇಮಠರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಐಶ್ರ‍್ಯಾ ಯಾರ್ದಿ ಪ್ರಾರ್ಥಿಸಿದರು. ನರಸಿಂಹ ಪರಾಂಜಪೆ ಸ್ವಾಗತಿಸಿದರು. ವೆಂಕಟೇಶ ದೇಸಾಯಿ ನಿರೂಪಿಸಿದರು. ರಾಜೀವ ಪಾಟೀಲ ಕುಲಕರ್ಣಿ ವಂದಿಸಿದರು.