ಸಾರಾಂಶ
ಪುರಾಣದಲ್ಲಿ ಅಂದಿನ ಕಾಲದಲ್ಲಿ ನಡೆದ ಅದ್ಧೂರಿ ಪ್ರತಿಷ್ಠಾಪನೆ, ಕ್ಷೀರಾಭಿಷೇಕ,ರುದ್ರಾಭಿಷೇಕಗಳು ಸೋಮೇಶ್ವರನಿಗೆ ನಡೆಸಲು ಪುರಾಣ ಸೇವಾ ಸಮಿತಿ ಎಲ್ಲ ಸಿದ್ಧತೆ
ಲಕ್ಷ್ಮೇಶ್ವರ: ಪಟ್ಟಣದ ಇತಿಹಾಸ ಪ್ರಸಿದ್ಧ ಸೋಮೇಶ್ವರ ದೇವರ ಮಹಾತ್ಮೆ ಅಪಾರವಾಗಿದ್ದು, ಈ ಭಾಗದ ಜಾಗೃತ ದೇವರಾಗಿ ಜನರ ಮನದಲ್ಲಿನ ನೆಲೆಸಿದ್ದಾನೆ ಎಂದು ಸೋಮೇಶ್ವರ ಭಕ್ತರ ಸೇವಾ ಸಮಿತಿಯ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ ಹೇಳಿದರು.
ಪಟ್ಟಣದ ಸೋಮೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿರುವ ಸೋಮನಾಥ ಚಾರಿತ್ರ ಪುರಾಣದಲ್ಲಿನ ಸೋಮೇಶ್ವರ ಮೂರ್ತಿ ಪ್ರತಿಷ್ಠಾಪನೆಯ ಕಾರ್ಯದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.ಪುರಾಣದಲ್ಲಿ ಶಿವಭಕ್ತ ಆದಯ್ಯ ಸೌರಾಷ್ಟ್ರದಿಂದ ಸೋಮೇಶ್ವರನ್ನು ತಂದು ಪ್ರತಿಷ್ಠಾಪಿಸುವ ಸನ್ನಿವೇಶವು ಸೋಮವಾರ ನಡೆಯಿತು.ಈ ಹಿನ್ನೆಲೆಯಲ್ಲಿ ಪುರಾಣದಲ್ಲಿ ಅಂದಿನ ಕಾಲದಲ್ಲಿ ನಡೆದ ಅದ್ಧೂರಿ ಪ್ರತಿಷ್ಠಾಪನೆ, ಕ್ಷೀರಾಭಿಷೇಕ,ರುದ್ರಾಭಿಷೇಕಗಳು ಸೋಮೇಶ್ವರನಿಗೆ ನಡೆಸಲು ಪುರಾಣ ಸೇವಾ ಸಮಿತಿ ಎಲ್ಲ ಸಿದ್ಧತೆ ಮಾಡಿಕೊಂಡಿದ್ದು, ಸೋಮವಾರ ಭಕ್ತರು ಕ್ಷೀರಾಭಿಷೇಕಕ್ಕಾಗಿ ನೂರಾರು ಬಿಂದಿಗೆ ಹಾಲು, ಜೇನುತುಪ್ಪ, ಮೊಸರು, ಸಕ್ಕರೆ, ಹಣ್ಣು ಹಂಪಲ, ಅರ್ಪಿಸಿದ್ದು, ಸಂಜೆ ಮಂತ್ರಘೋಷಗಳ ಮಧ್ಯೆ ಸೋಮೇಶ್ವರನಿಗೆ ಕ್ಷೀರಾಭೀಷೇಕ, ರುದ್ರಾಭಿಷೇಕ ನಡೆಯಿತು. ಅಂದಿನ ಕಾಲದಲ್ಲಿ ನಡೆದಂತೆ ಸನ್ನಿವೇಶವು ಮರುಸೃಷ್ಠಿಯಾಗಿದ್ದು ಸಾವಿರಾರು ಜನರು ಆಗಮಿಸಿ ವೀಕ್ಷಿಸಿ ಸಂಭ್ರಮಿಸಿದರು.
ಹೋಳಿಗೆ ಊಟ: ಸೋಮವಾರ ನಡೆದ ಈ ವೈಶಿಷ್ಟಪೂರ್ಣ ಧಾರ್ಮಿಕ ಕಾರ್ಯಕ್ರಮಕ್ಕೆ ಭಕ್ತವೃಂದ ಶ್ರಮಿಸಿದ್ದು ಕಂಡು ಬಂದಿತು. ಈ ವೇಳೆ ಸೋಮೇಶ್ವರನ ದರ್ಶನಕ್ಕೆ ಆಗಮಿಸಿದ್ದ ಸಾವಿರಾರು ಭಕ್ತರಿಗೆ ಹೋಳಿಗೆ ಊಟ ಉಣಬಡಿಸುವ ನಿಟ್ಟಿನಲ್ಲಿ ನೂರಾರು ಮಹಿಳೆಯರು ಸೊಮವಾರ ಬೆಳಗ್ಗೆಯೇ ಹೋಳಿಗೆ ಸಿದ್ದಪಡಿಸುವ ಕಾಯಕದಲ್ಲಿ ನಿರತರಾಗಿದ್ದರು. ಸಾವಿರಾರು ಸಂಖ್ಯೆಯಲ್ಲಿ ಸಿದ್ದಪಡಿಸಲಾಗಿರುವ ಹೋಳಿಗೆಗಳನ್ನು ದೇವರಿಗೆ ನೈವ್ಯೇದ್ಯ ಅರ್ಪಿಸಿದ ನಂತರ ಹೋಳಿಗೆ ಊಟವನ್ನು ಭಕ್ತರು ಸವಿದರು.ಅಪಾರ ಪ್ರಮಾಣದಲ್ಲಿ ನೆರದಿದ್ದ ಭಕ್ತರಿಗೆ ಸೋಮೇಶ್ವರ ಚರಿತ್ರೆ ಶ್ರವಣ ಮಾಡುವ ಭಾಗ್ಯ ದೊರಕಿಸಿದ ಪುರಾಣ ಸಮಿತಿಯ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಕಳೆದ ೧೫-೨೦ ದಿನಗಳಿಂದ ಸೋಮೇಶ್ವರ ಪುರಾಣಕ್ಕೆ ಭಕ್ತರ ಸಂಖ್ಯೆಯು ಅಧಿಕಗೊಳ್ಳುತ್ತಿದೆ. ಅರ್ಚಕ ಸೋಮನಾಥ ಪೂಜಾರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಗಳು ನಡೆದವು. ಈ ಸಂದರ್ಭದಲ್ಲಿ ಸೋಮೇಶ್ವರ ಪುರಾಣ ಸಮಿತಿ ಸದಸ್ಯರು, ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ , ಜಾತ್ರಾ ಕಮೀಟಿ ಹಾಗೂ ಅನೇಕ ಮುಖಂಡರು ಹಾಜರಿದ್ದರು.