ಜಿಲ್ಲೆಯಲ್ಲಿ ಲಾರಿ ಚಾಲಕರ ತರಬೇತಿ ಕೇಂದ್ರ ಸ್ಥಾಪನೆ

| Published : Jun 29 2025, 01:32 AM IST

ಸಾರಾಂಶ

ಚಾಮರಾಜನಗರದ ಜಿಲ್ಲಾ ಅಂಬೇಡ್ಕರ್ ಭವನದಲ್ಲಿ ಫೆಡರೇಷನ್ ಆಫ್ ಕರ್ನಾಟಕ ಲಾರಿ ಓನರ್ಸ್ಸ್ ಅಸೋಷಿಯೇಷನ್ ೩೪ನೇ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಹಿರಿಯ ಲಾರಿ ಚಾಲಕರಾದ ಮಹದೇವಪ್ಪ, ರಹೀಮ್ ಉಲ್ಲಾ ಖಾನ್ ಅವರನ್ನು ಸನ್ಮಾನಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜಿಲ್ಲಾ ಕೇಂದ್ರದ ಹೊರ ವಲಯದಲ್ಲಿ ಪ್ರಥಮ ಬಾರಿಗೆ ಲಾರಿ ಮಾಲೀಕರ ಸಂಘದಿಂದ ಲಾರಿ ಚಾಲನೆ ತರಬೇತಿ ಕೇಂದ್ರವನ್ನು ಆರಂಭಿಸಿ, ಲಾರಿ ಚಾಲನೆ ತರಬೇತಿ ನೀಡಲಾಗುತ್ತದೆ. ಲಾರಿ ಮಾಲೀಕರಿಗೆ ಆಗುತ್ತಿರುವ ಕಿರುಕುಳ ತಪ್ಪಿಸಲು ಆರು ಸಮಿತಿಗಳನ್ನು ರಚನೆ ಮಾಡಲಾಗಿದೆ ಎಂದು ಫೆಡರೇಷನ್ ಆಫ್ ಕರ್ನಾಟಕ ಲಾರಿ ಓನರ್ಸ್‌ ಅಸೋಷಿಯೇಷನ್ ರಾಜ್ಯ ಅಧ್ಯಕ್ಷ ಸಿ.ನವೀನ್‌ರೆಡ್ಡಿ ತಿಳಿಸಿದರು. ನಗರದ ಜಿಲ್ಲಾ ಅಂಬೇಡ್ಕರ್ ಭವನದಲ್ಲಿ ಫೆಡರೇಷನ್ ಆಫ್ ಕರ್ನಾಟಕ ಲಾರಿ ಓನರ್ಸ್ಸ್ ಅಸೋಷಿಯೇಷನ್ ೩೪ನೇ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿ ಹಾಗೂ ಇಬ್ಬರು ಹಿರಿಯ ಲಾರಿ ಚಾಲಕರಾದ ಮಹದೇವಪ್ಪ, ರಹೀಮ್ ಉಲ್ಲಾ ಖಾನ್ ಅವರನ್ನು ಸನ್ಮಾನಿಸಿ ಮತನಾಡಿದರು. ರಾಜ್ಯಾದ್ಯಂತ ಲಾರಿ ಮಾಲೀಕರು ಹಾಗೂ ಚಾಲಕರನ್ನು ಸಂಘಟನೆ ಮಾಡುವ ಜೊತೆಗೆ ಉದ್ಯಮವನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ಅಗುತ್ತಿರುವ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳುವುದು ಸಂಘ ಮುಖ್ಯ ಉದ್ದೇಶವಾಗಿದೆ. ಇತ್ತೀಚಿನ ದಿನಗಳಲ್ಲಿ ಲಾರಿ ಚಾಲಕರ ತೊಂದರೆ ಹೆಚ್ಚಾಗುತ್ತಿದೆ. ಅಲ್ಲದೇ ಲಾರಿ ಚಾಲಕರ ಸಮಸ್ಯೆ ಉಂಟಾಗಿದೆ. ಹೀಗಾಗಿ ರಾಜ್ಯದಲ್ಲಿ ಪ್ರಥಮವಾಗಿ ಆಸೋಷಿಯಷನ್ನಿಂದ ನಗರದ ಹೊರ ವಲಯಲ್ಲಿ ಜಮೀನು ಖರೀದಿ ಮಾಡಿ, ಡ್ರೈವಿಂಗ್ ಸ್ಕೂಲ್ ಆರಂಭಿಸಲಾಗುತ್ತದೆ. ಸಭೆ ಬಳಿಕ ಸ್ಥಳಕ್ಕೆ ಎಲ್ಲಾ ಸದಸ್ಯರು ತೆರಳಿ ವೀಕ್ಷಣೆ ಮಾಡುವ ಜೊತೆಗೆ ಅಧಿಕೃತ ಯೋಜನೆಗೆ ಚಾಲನೆ ಯನ್ನು ನೀಡಲಾಗುತ್ತದೆ ಎಂದರು.

ಲಾರಿ ಮಾಲೀಕರಿಗೆ ಆಗುತ್ತಿರುವ ಕಿರುಕುಳವನ್ನು ತಪ್ಪಿಸಲು ರಾಜ್ಯ ಘಟಕದಿಂದ ಆರು ಸಮಿತಿಗಳನ್ನು ರಚನೆ ಮಾಡಲಾಗುತ್ತದೆ. ಆರ್‌ಟಿಓ ಸಮಿತಿ, ಟೋಲ್ ಸಮಿತಿ, ಜಿಎಸ್‌ಟಿ ಸಮಿತಿ, ಖಾಸಗಿ ಪೈನ್ಯಾನ್ಸ್ ಕಮಿಟಿ, ವಾಹನ ವಿಮೆ ಸಮಿತಿ ಹಾಗೂ ಗಣಿ ಮತ್ತು ಭೂವಿಜ್ಞಾನ ಸಮಿತಿ ಸೇರಿದಂತೆ ಆರು ಸಮಿತಿಗಳನ್ನು ರಚನೆ ಮಾಡಿ, ಪರಿಣಿತರನ್ನು ನೇಮಕ ಮಾಡಲಾಗುತ್ತದೆ. ಈ ಸಮಿತಿಯಲ್ಲಿ ಆಸಕ್ತಿ ಹೊಂದಿರುವ ಸದಸ್ಯರು ಹೆಸರು ಹಾಗೂ ಮೊಬೈಲ್ ನಂಬರ್‌ಗಳನ್ನು ನೀಡಿ. ಈ ಸಮಿತಿಯ ಮೂಲಕ ಮಾಲೀಕರಿಗೆ ಆಗುತ್ತಿರುವ ತೊಂದರೆ ಮತ್ತು ಕಿರುಕುಳವನ್ನು ತಪ್ಪಿಸಲು ಸಾಧ್ಯವಾಗುತ್ತದೆ ಎಂದರು. ಆರ್‌ಟಿಒ ಹಾಗೂ ಪೊಲೀಸ್ ಇಲಾಖೆಯಿಂದ ಆಗುತ್ತಿರುವ ಕಿರುಕುಳ ಮತ್ತು ಅನಗತ್ಯ ತೊಂದರೆಗಳನ್ನು ತಪ್ಪಿಸಲು ಜಿಲ್ಲಾ ಹಾಗೂ ತಾಲೂಕು ಸಮಿತಿ ಸಕ್ರಿಯವಾಗಬೇಕು. ಮಾಲೀಕರಿಗೆ ತೊಂದರೆಯಾದರೆ, ಸ್ಥಳಕ್ಕೆ ತೆರಳಿ ಸಂಘಟಿತರಾಗಿ ಹೋರಾಟಮಾಡುವ ಅವಶ್ಯಕತೆ ಬಹಳ ಇದೆ. ಇದಕ್ಕಾಗಿ ನಮ್ಮ ಫೆಡರೇಷನ್ ಕಾನೂನು ಮತ್ತು ಸರ್ಕಾರದ ಕಾಯಿದೆಗಳ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಎಂದರು. ಖಾಸಗಿ ಪೈನಾಸ್ಸ್‌ಗಳ ಮೂಲಕ ಲಾರಿ ಖರೀದಿ ಮಾಡುವ ಮಾಲೀಕರಿಗೆ ಕಿರುಕುಳಗಳು ಹೆಚ್ಚಾಗುತ್ತಿದೆ. ಕಾಯ್ದೆ ಪ್ರಕಾರ ಮೂರು ಕಂತುಗಳನ್ನು ಪಾವತಿ ಮಾಡಿದ್ದರೆ ಸಂಬಂಥಪಟ್ಟ ಮಾಲೀಕನಿಗೆ ನೋಟೀಸ್ ನೀಡಬೇಕು. ಯಾವುದೇ ಕಾರಣಕ್ಕೂ ಲಾರಿಯನ್ನು ಜಪ್ತಿ ಮಾಡುವಂತೆ ಇಲ್ಲ. ಆದರೂ ಪೈನಾನ್ಸ್ ಕಂಪನಿಗಳು ಮಾಲೀಕರಿಗೆ ತೊಂದರೆ ನೀಡುತ್ತಿದ್ದಾರೆ. ಅವರು ನ್ಯಾಯಾಲಯದಲ್ಲಿ ದಾವೆ ಹೂಡಬೇಕಾಗುತ್ತದೆ. ಈ ಬಗ್ಗೆ ಮಾಲೀಕರು ಜಾಗೃತ ರಾಗಬೇಕು. ಇಂಥ ಪ್ರಕರಣಗಳು ಬಂದಾಗ ಸಂಘವನ್ನು ಕಮಿಟಿಯನ್ನು ಸಂಪರ್ಕಿಸುವಂತೆ ತಿಳಿಸಿದರು. ಲಾರಿಗಳಿಗೆ ವಿಮೆ ನವೀಕರಣ ಮಾಡುವ ಲಾರಿ ಮಾಲೀಕರು ಹೆಚ್ಚಿನ ತೊಂದರೆ ಅನುಭವಿಸುತ್ತಾರೆ. ಮೂರನೇ ಪಾರ್ಟಿಗೆ ವಿಮೆ ಮಾಡಿಸಲಾಗುತ್ತಿದೆ. ಇದರಿಂದ ಅಪಘಾತಗಳು ನಡೆದಾಗ ಕೇವಲ ಪರಿಹಾರವಾಗಿ ವಿಮೆ ಕಂಪನಿಗಳು ಮೂರು ಲಕ್ಷ ರು.ಮಾತ್ರ ನೀಡುತ್ತಾರೆ. ಇನ್ನು ಉಳಿದ ನ್ಯಾಯಾಲಯದ ಪರಿಹಾರ ೧೫ ಲಕ್ಷ ರು.ಗಳನ್ನು ವಾಹನ ಮಾಲೀಕನೇ ಭರಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ಮಾಲೀಕರ ಮನೆ, ಲಾರಿ ಮಾರಿ ಪರಿಹಾರ ಕಟ್ಟಿರುವ ನಿರ್ದಶನಗಳು ಇವೆ. ಹೀಗಾಗಿ ವಿಮೆ ಕಮಿಟಿಯನ್ನು ರಚನೆ ಮಾಡಿದ್ದು, ಅಲ್ಲದೇ ಲಾರಿಗಳ ಪಾರ್ಕಿಂಗ್ ಸಮಸ್ಯೆ ಹೆಚ್ಚಾಗಿದೆ. ಕರ್ತವ್ಯ ನಿರತ ಪೊಲೀಸರು ನಮ್ಮ ವಾಹನಗಳಿಗೆ ನೋ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಲಾಗಿದೆ ಎಂದು ದಂಡ ಹಾಕುತ್ತಿದ್ದಾರೆ. ಆದರೆ, ಲಾರಿಗಳಿಗೆ ಪ್ರತ್ಯೇಕವಾದ ಪಾರ್ಕಿಂಗ್ ಎಲ್ಲಿದೆ ಎಂದು ತೋರಿಸಲಿ ಹೇಳಿ ಎಂದು ನವೀನ್‌ರೆಡ್ಡಿ ತಿಳಿಸಿದರು. ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾಧ್ಯಕ್ಷ ಜಿ.ನಾರಾಯಣ ಪ್ರಸಾದ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ೩೪ನೇ ವಾರ್ಷಿಕ ಸರ್ವ ಸದಸ್ಯರ ಸಭೆ ಆಯೋಜನೆ ಮಾಡಿರುವುದು ಸಂತಸವಾಗಿದೆ. ಲಾರಿ ಮಾಲೀಕರ ಕುಂದುಕೊರತೆಗಳನ್ನು ಪರಿಹರಿಸಿಕೊಳ್ಳುವ ಹಾಗೂ ಸಂಘಟನೆಗೆ ಸರ್ವ ಸದಸ್ಯರ ಸಭೆ ಪೂರಕರವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಹಿರಿಯ ಲಾರಿ ಚಾಲಕರಾದ ಮಹದೇವಪ್ಪ ಹಾಗೂ ರಹೀಮ್ ಉಲ್ಲಾ ಖಾನ್ ಅವರನ್ನು ಸನ್ಮಾನಿಸಿ, ೧೦ ಸಾವಿರ ರು.ನಗದು ಪುರಸ್ಕಾರವನ್ನು ಸಂಘದಿಂದ ನೀಡಲಾಯಿತು. ಸಭೆಯಲ್ಲಿ ಅಸೋಷಿಯೇಷನ್ ಗೌರವ ಅಧ್ಯಕ್ಷ ಬಿ. ಚನ್ನರೆಡ್ಡಿ, ಉಪಾಧ್ಯಕ್ಷ ಶ್ರೀನಿವಾಸ್‌ರಾವ್, ಮುನ್ಸೂರ್ ಇಬ್ರಾಹಿಂ, ಜಂಟಿ ಕಾರ್ಯದರ್ಶಿ ರಂಗಸ್ವಾಮಿ ರೆಡ್ಡಿ, ಮುನಿ ಕೃಷ್ಣ, ಸಂಜಯ್‌ಕುಮಾರ್, ಚಂದ್ರಶೇಖರ್ ಕೆ.ಎಸ್. ಖಜಾಂಚಿ ಮುದ್ದಹನುಮೇಗೌಡ, ಜಿಲ್ಲಾ ಪ್ರದಾನ ಕಾರ್ಯದರ್ಶಿ ಮುರುಳಿ ಕೃಷ್ಣ, ಸಹ ಕಾರ್ಯದರ್ಶಿ ಜಾಬಿದ್ ಪಾಷಾ, ಖಜಾಂಚಿ ಸುರೇಶ್ ಸೇರಿದಂತೆ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.