ಸಾರಾಂಶ
ಲಾರಿ ಮತ್ತು ಸ್ಕೂಟಿ ನಡುವೆ ಮುಖಾಮುಖಿ ಅಪಘಾತದಲ್ಲಿ ಸ್ಕೂಟಿಯಲ್ಲಿದ್ದ ಇಬ್ಬರು ದುರ್ಮರಣಕ್ಕೀಡಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ರಾಷ್ಟ್ರೀಯ ಹೆದ್ದಾರಿಯ 275ರಲ್ಲಿ ಲಾರಿ ಮತ್ತು ಟಿವಿಎಸ್ ಸ್ಕೂಟಿ ನಡುವೆ ಮುಖಾಮುಖಿ ಅಪಘಾತದಲ್ಲಿ ಸ್ಕೂಟಿಯಲ್ಲಿದ್ದ ಇಬ್ಬರು ಸ್ಥಳದಲೇ ದುರ್ಮರಣಕ್ಕೀಡಾಗಿರುವ ಘಟನೆ ನಡೆದಿದೆ.ಮಂಗಳವಾರ ಮಧ್ಯಾಹ್ನ 2.30 ರ ಸುಮಾರಿಗೆ ಕೊಡಗರಹಳ್ಳಿ ಹೊಸಕೋಟೆ ನಡುವಿನ ಮಾರುತಿ ನಗರ ತಿರುವಿನಲ್ಲಿ ಈ ಅಪಘಾತ ಸಂಭವಿಸಿದ್ದು, ಸ್ಕೂಟಿ ಸವಾರರಾದ ಗರಗಂದೂರಿನ ಮಂಜು(25) ಸುಂಟಿಕೊಪ್ಪ ಸಮೀಪದ ಬಾಳೆಕಾಡು ತೋಟದ ನಾರಾಯಣ ಅವರ ಪುತ್ರ ರಕ್ಷೀತ್ (22) ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
ಮಂಜು ಮತ್ತು ರಕ್ಷಿತ್ ಸುಂಟಿಕೊಪ್ಪದಿಂದ 7ನೇ ಹೊಸಕೋಟೆಗೆ ಊಟ ಮಾಡಿಬರಲು ಸ್ಕೂಟಿಯಲ್ಲಿ ತೆರಳುತ್ತಿದ್ದ ಸಂದರ್ಭ ಕುಶಾಲನಗರದಿಂದ ಬರುತ್ತಿದ್ದ ಮಾರುತಿ ನಗರದ ತಿರುವಿನಲ್ಲಿ ಲಾರಿಗೆ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದ ಸಂದರ್ಭ ಇಬ್ಬರು ಹೆದ್ದಾರಿಗೆ ಬಿದ್ದಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡ ಪರಿಣಾಮ ಸ್ಥಳದಲ್ಲೇ ಮೃತರಾಗಿದ್ದಾರೆ.ಘಟನಾ ಸ್ಥಳಕ್ಕೆ ಸುಂಟಿಕೊಪ್ಪ ಠಾಣಾಧಿಕಾರಿ ಎಂ.ಸಿ.ಶ್ರೀಧರ್, ಅಪರಾಧ ವಿಭಾಗದ ಸಬ್‌ಇನ್ಸಪೆಕ್ಟರ್ ಸ್ವಾಮಿ ಹಾಗೂ ಸಿಬ್ಬಂದಿ ತೆರಳಿ ಮಹಜರು ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮೃತ ಶರೀರಗಳನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ರವಾನಿಸಿ ಮರಣೋತ್ತರ ನಡೆಸಲಾಯಿತು.