ಸಾರಾಂಶ
ಕೂಡ್ಲಿಗಿ ತಾಲೂಕಿನಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಗೆ ಹಳ್ಳಗಳು ತುಂಬಿ ಹರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಕಾರ್ಮಿಕರು ತುಂಬಿದ್ದ ಗೂಡ್ಸ್ ಲಾರಿ ಹಳ್ಳದಲ್ಲಿ ಕೊಚ್ಚಿ ಹೋಗಿದ್ದು, ಚಾಲಕ ಪವಾಡಸದೃಶ ರಕ್ಷಣೆ ಪಡೆದಿದ್ದಾರೆ.
ಕೂಡ್ಲಿಗಿ: ತಾಲೂಕಿನ ಕೂಡ್ಲಿಗಿ, ಕಾನಹೊಸಹಳ್ಳಿ, ಗುಡೇಕೋಟೆ ಹೋಬಳಿಯ ವ್ಯಾಪ್ತಿ ಶುಕ್ರವಾರ ರಾತ್ರಿ ಉತ್ತಮ ಮಳೆಯಾಗಿದೆ. ಮಳೆಗೆ ಕಾರ್ಮಿಕರು ತುಂಬಿದ್ದ ಗೂಡ್ಸ್ ಲಾರಿ ಹಳ್ಳದಲ್ಲಿ ಕೊಚ್ಚಿ ಹೋದ ಘಟನೆ ಶನಿವಾರ ನಸುಕಿನಜಾವ ನಡೆದಿದೆ.ಶುಕ್ರವಾರ ಸುರಿದ ಮಳೆಗೆ ಗಡಿಗ್ರಾಮದ ಕೆಂಚಮ್ಮನಹಳ್ಳಿ ಮತ್ತು ಪಿಚ್ಚಾರಹಟ್ಟಿ ಗ್ರಾಮಗಳ ಮಧ್ಯದ ಹಳ್ಳವು ಬೆಳಗಿನಜಾವ ತುಂಬಿ ಹರಿದಿದೆ.
ಇದೇ ವೇಳೆ ಪಿಚ್ಚಾರಹಟ್ಟಿಯ 10 ಕೂಲಿ ಕಾರ್ಮಿಕರು ಲಾರಿಯಲ್ಲಿ ಚಿತ್ರದುರ್ಗಕ್ಕೆ ತೆರಳುತ್ತಿದ್ದರು. ಈ ವೇಳೆ ಕೆಂಚಮ್ಮನಹಳ್ಳಿ ಬಳಿಯ ಹಳ್ಳ ತುಂಬಿ ಹರಿಯುತ್ತಿದ್ದರಿಂದ ಕಾರ್ಮಿಕರು ಲಾರಿಯಿಂದ ಕೆಳಗೆ ಇಳಿದಿದ್ದಾರೆ. ಈ ವೇಳೆ ಚಾಲಕ ಲಾರಿಯನ್ನು ಹಳ್ಳ ದಾಟಿಸಲು ಮುಂದಾಗಿದ್ದಾನೆ. ನೀರಿನ ರಭಸಕ್ಕೆ ಲಾರಿ ಹಳ್ಳದಲ್ಲಿ ಕೊಚ್ಚಿ ಹೋಗಿದೆ. ಇದೇ ವೇಳೆ ಚಾಲಕ ಪೀರಸಾಬ್ ಲಾರಿಯಿಂದ ಜಿಗಿದು ದಡ ಸೇರಿದ್ದಾನೆ.
ರೋಗಿಗಳ ಪರದಾಟ:ತಾಲೂಕಿನ ಆಲೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗುವ ದಾರಿ ಸಹ ಕಳೆದ ರಾತ್ರಿ ಸುರಿದ ಮಳೆಯಿಂದ ಜಲಾವೃತಗೊಂಡಿದೆ. ರೋಗಿಗಳು ಆಸ್ಪತ್ರೆ ಕಡೆಗೆ ತೆರಳಲು ಪರದಾಡುತ್ತಿದ್ದಾರೆ. ವೃದ್ಧರು, ಮಕ್ಕಳು, ಮಹಿಳೆಯರಿಗೆ ಸಾಕಷ್ಟು ತೊಂದರೆಯಾಯಿತು.
ಮಳೆ ಅವಾಂತರ:
ಶುಕ್ರವಾರ ಸುರಿದ ಭಾರಿ ಮಳೆಗೆ ಹೊಸಹಳ್ಳಿಯಲ್ಲಿ ದಲಿತ ಕಾಲೋನಿಗೆ ನೀರು ನುಗಿದೆ. ಹೆದ್ದಾರಿಯ ಪಕ್ಕದ ಸರ್ವಿಸ್ ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೆ ತೊಂದರೆಯಾಗಿದೆ. ಹೊಸಹಳ್ಳಿ ಬಸ್ ನಿಲ್ದಾಣ ಕೆಸರು ಗದ್ದೆಯಂತಾಗಿದೆ. ಕೂಡ್ಲಿಗಿ, ಹೊಸಹಳ್ಳಿ, ಗುಡೇಕೋಟೆ ಮೂರು ಹೋಬಳಿ ವ್ಯಾಪ್ತಿಯಲ್ಲಿ 50ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಅದೃಷ್ಠವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.
ತಿಮ್ಮನಹಳ್ಳಿ ಮನೆಯೊಂದರ ಮುಂದಿನ ಚಾವಣಿ ಬಿದ್ದಿದೆ. ಅದರಡಿ ಮಲಗಿದ್ದ ಮಹಿಳೆಗೆ ಸಣ್ಣ ಪ್ರಮಾಣದ ಗಾಯಗಳಾಗಿವೆ.
ಬೆಳೆ ಜಲಾವೃತ:
ಗಂಡಬೊಮ್ಮನಹಳ್ಳಿ ಕೆರೆ, ಕೂಡ್ಲಿಗಿ ಕೆರೆಗಳು ಭರ್ತಿಯಾಗಿ ಕೋಡಿ ಬಿದ್ದಿವೆ. ತಾಲೂಕಿನಲ್ಲಿ ಹರಿಯುವ ಚಿನ್ನಹಗರಿ ಉಪನದಿ ತುಂಬಿ ಹರಿಯುತ್ತಿದ್ದು, ಜನವಸತಿ ಪ್ರದೇಶಕ್ಕೆ ನೀರು ನುಗ್ಗಿದೆ. ಇದರಿಂದ ಬೆಳೆಗಳು ಜಲಾವೃತ್ತವಾಗಿವೆ.
ಗಂಡಬೊಮ್ಮನಹಳ್ಳಿ, ಕೂಡ್ಲಿಗಿ ಕೆರೆಯ ನೀರಿನ ಜಲರಾಶಿ ನೋಡಲು ಕೂಡ್ಲಿಗಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ಜನತೆ ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.