ಸಾರಾಂಶ
ಬೆಂಗಳೂರು : ಮೊಬೈಲ್‌ಗೆ ಬಂದು ಸಂದೇಶವೊಂದನ್ನು ನಂಬಿ ಖಾಸಗಿ ಕಂಪನಿ ಉದ್ಯೋಗಿಯೊಬ್ಬರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದ ₹1.12 ಲಕ್ಷ ವಂಚನೆಯಾಗಿರುವ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪರಪ್ಪನ ಅಗ್ರಹಾರ ಸಾಯಿಶ್ರೀ ಲೇಔಟ್ ನಿವಾಸಿ ರವಿಶಂಕರ್ ಮಂತ ವಂಚನೆಗೆ ಒಳಗಾದವರು. ಇವರು ನೀಡಿದ ದೂರಿನ ಮೇರೆಗೆ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಸೈಬರ್ ವಂಚಕರ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.
ಖಾಸಗಿ ಕಂಪನಿ ಉದ್ಯೋಗಿ ರವಿ ಶಂಕರ್ ಮೊಬೈಲ್‌ಗೆ ‘ಜಿಎಸ್ಎಫ್ ಪ್ರೋ ಆ್ಯಪ್’ ಮುಖಾಂತರ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತೆ ಸಂದೇಶ ಬಂದಿದೆ. ಈ ಸಂದೇಶವನ್ನು ನಂಬಿದ ರವಿ ಶಂಕರ್, ಆ್ಯಪ್ ಡೌನ್‌ಲೋಡ್ ಮಾಡಿ ಅಪರಿಚಿತ ವ್ಯಕ್ತಿಯ ಬ್ಯಾಂಕ್ ಖಾತೆಗೆ ವಿವಿಧ ಹಂತಗಳಲ್ಲಿ ₹1.12 ಲಕ್ಷ ಹಣ ವರ್ಗಾಯಿಸಿದ್ದಾರೆ.
ಕೆಲ ದಿನಗಳ ಬಳಿಕ ಜಿಎಸ್‌ಎಫ್ ಆ್ಯಪ್ ಡಿಲೀಟ್ ಆಗಿದೆ. ಅಪರಿಚಿತ ವ್ಯಕ್ತಿ ಸಂಪರ್ಕ ಕಡಿದುಕೊಂಡಿದ್ದಾನೆ. ಬಳಿಕ ತಾನು ಸೈಬರ್ ವಂಚನೆಗೆ ಒಳಗಾಗಿರುವುದು ಅರಿವಿಗೆ ಬಂದಿದೆ. ನಂತರ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ದುಷ್ಕರ್ಮಿಗಳ ಪತ್ತೆಗೆ ಶೋಧಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.