ಸಾರಾಂಶ
ರಾಜಧಾನಿ ಬೆಂಗಳೂರಿನಲ್ಲಿ ಸತತ ಐದನೇ ದಿನ ಮಳೆಯಾಗಿದ್ದು, ಮಳೆಗೆ ಮರ ಹಾಗೂ ಮರದ ಕೊಂಬೆಗಳು ಧರೆಗುರುಳಿವೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜಧಾನಿ ಬೆಂಗಳೂರಿನಲ್ಲಿ ಸತತ ಐದನೇ ದಿನ ಮಳೆಯಾಗಿದ್ದು, ಮಳೆಗೆ ಮರ ಹಾಗೂ ಮರದ ಕೊಂಬೆಗಳು ಧರೆಗುರುಳಿವೆ.ಕಳೆದ ಬುಧವಾರದಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಭಾನುವಾರ ನಗರದ ಬೊಮ್ಮನಹಳ್ಳಿ ಹಾಗೂ ರಾಜರಾಜೇಶ್ವರಿನಗರ ಭಾಗದಲ್ಲಿ ಧಾರಾಕಾರ ಮಳೆಯಾಗಿದೆ. ಸಂಜೆ 4.30ರ ಸುಮಾರಿಗೆ ಶುರುವಾದ ಮಳೆ ಸುಮಾರು 30 ನಿಮಿಷಗಳ ಕಾಲ ಸುರಿಯಿತು.
ಗಾಳಿ ಮಳೆಗೆ ಬೊಮ್ಮನಹಳ್ಳಿ ವಲಯದಲ್ಲಿ 12 ಮರ ಹಾಗೂ 16 ಮರ ಕೊಂಬೆ ಧರೆಗುರುಳಿವೆ. ಆರ್.ಆರ್.ನಗರ ವ್ಯಾಪ್ತಿಯಲ್ಲಿ 8 ಮರ ಹಾಗೂ 15 ಮರ ಕೊಂಬೆಗಳು ಮುರಿದು ಬಿದ್ದ ವರದಿಯಾಗಿದೆ. ಮೈಸೂರು ರಸ್ತೆ, ಹೊಸೂರು ರಸ್ತೆ, ಬಿಟಿಎಂ ಲೇಔಟ್, ಕೋರಮಂಗಲ, ಮುನ್ನೇಶ್ವರ ಲೇಔಟ್‌ನ ಪ್ರಮುಖ ರಸ್ತೆಗಳಲ್ಲಿ ಮಳೆ ನೀರು ಹರಿದ ಪರಿಣಾಮ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು.ಭಾನುವಾರ ನಗರದಲ್ಲಿ ಸರಾಸರಿ 1.27 ಸೆಂ.ಮೀ. ಮಳೆಯಾಗಿದೆ. ಸೋಮವಾರವೂ ಮಳೆ ನಗರದಲ್ಲಿ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಬಿಳ್ಳೆಕಹಳ್ಳಿಯಲ್ಲಿ 4.25 ಸೆಂ.ಮೀ.ಬೊಮ್ಮನಹಳ್ಳಿಯ ಬಿಳ್ಳೆಕಹಳ್ಳಿಯಲ್ಲಿ ಅತಿ ಹೆಚ್ಚು 4.25 ಸೆಂ.ಮೀ ಮಳೆಯಾಗಿದೆ. ಉಳಿದಂತೆ ದೊರೆಸಾನಿಪಾಳ್ಯ 3.85, ಬಿಟಿಎಂ ಲೇಔಟ್ 3.1, ಬೊಮ್ಮನಹಳ್ಳಿ 2.6, ಅರಕೆರೆ 2.55, ಸಿಂಗಸಂದ್ರ 2.2, ಗೊಟ್ಟಿಗೆರೆ 1.7, ವಿದ್ಯಾಪೀಠ 1.45, ನಾಯಂಡಹಳ್ಳಿ 1.35 ಹಾಗೂ ರಾಜರಾಜೇಶ್ವರಿನಗರದಲ್ಲಿ 1.15 ಸೆಂ.ಮೀ. ಮಳೆಯಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ಮಾಹಿತಿ ನೀಡಿದೆ.