ಗುಳೇದಗುಡ್ಡ ಪಟ್ಟಣದ ಭಾರತ್ ಮಾರ್ಕೆಟ್ ಸೇರಿದಂತೆ ಅದರ ಸುತ್ತಲಿನ ಪ್ರದೇಶದಲ್ಲಿ ಸಂತೆ ದಿನ ಹಾಗೂ ನಿತ್ಯ ಜನದಟ್ಟಣೆಯಿದ್ದು, ಬೀದಿ ಬದಿ ವ್ಯಾಪಾರಸ್ಥರು ರಸ್ತೆ ಅತಿಕ್ರಮಣ ಮಾಡಿ ವ್ಯಾಪಾರ ಮಾಡುತ್ತಿರುವುದರಿಂದ ಸಾರ್ವಜನಿಕರ ಸಂಚಾರಕ್ಕೆ ಅಡಚಣೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ವ್ಯಾಪಾರಿಗಳು ಸ್ವಯಂ ತೆರವುಗೊಳಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಎ.ಎಚ್. ಮುಜಾವರ ಮನವಿ ಮಾಡಿದರು.
ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಪಟ್ಟಣದ ಭಾರತ್ ಮಾರ್ಕೆಟ್ ಸೇರಿದಂತೆ ಅದರ ಸುತ್ತಲಿನ ಪ್ರದೇಶದಲ್ಲಿ ಸಂತೆ ದಿನ ಹಾಗೂ ನಿತ್ಯ ಜನದಟ್ಟಣೆಯಿದ್ದು, ಬೀದಿ ಬದಿ ವ್ಯಾಪಾರಸ್ಥರು ರಸ್ತೆ ಅತಿಕ್ರಮಣ ಮಾಡಿ ವ್ಯಾಪಾರ ಮಾಡುತ್ತಿರುವುದರಿಂದ ಸಾರ್ವಜನಿಕರ ಸಂಚಾರಕ್ಕೆ ಅಡಚಣೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ವ್ಯಾಪಾರಿಗಳು ಸ್ವಯಂ ತೆರವುಗೊಳಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಎ.ಎಚ್. ಮುಜಾವರ ಮನವಿ ಮಾಡಿದರು.ಪುರಸಭೆ ಸಭಾಭವನದಲ್ಲಿ ಶುಕ್ರವಾರ ಜರುಗಿದ ಬೀದಿ ಬದಿ ವ್ಯಾಪಾರಸ್ಥರ ಹಾಗೂ ಪಟ್ಟಣದ ಪ್ರಮುಖ ಮುಖಂಡರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಪಟ್ಟಣದಲ್ಲಿ ಬೀದಿ ಬದಿ ವ್ಯಾಪಾರಿಗಳು ರಸ್ತೆ, ಪುರಸಭೆ ಜಾಗ, ಫುಟ್‌ಪಾತ್ ಹೀಗೆ ಅನಧಿಕೃತವಾಗಿ ಸ್ಥಳ ಅತಿಕ್ರಮಣ ಮಾಡಿದ್ದು, ಅಂತಹ ವ್ಯಾಪಾರಿಗಳು ಪುರಸಭೆ ನೀಡುವ ಬೇರೆ ಸ್ಥಳಗಳಿಗೆ ಸ್ಥಳಾಂತರವಾಗಬೇಕು. ನಾಗಪ್ಪನ ಕಟ್ಟೆಯಿಂದ ಹಾದಿ ಬಸವೇಶ್ವರ ಗುಡಿವರೆಗೆ ಪ್ರಮುಖ ರಸ್ತೆ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಆ ಜಾಗ ಅತಿಕ್ರಮಿಸಿದವರು ಸರ್ಕಾರಿ ಆಸ್ಪತ್ರೆ ಸುತ್ತ ಪುರಸಭೆ ಜಾಗದಲ್ಲಿ ಅನಧಿಕೃತವಾಗಿ ಡಬ್ಬಾ ಅಂಗಡಿ ಇಟ್ಟವರು ತೆರವುಗೊಳಿಸಿ ಸಹಕರಿಸಲು ಮನವಿ ಮಾಡಿದರು.
ಪುರಸಭೆ ಮಾಜಿ ಉಪಾಧ್ಯಕ್ಷ ಪ್ರಕಾಶ ಮುರಗೋಡ ಮಾತನಾಡಿ, ಸಾರ್ವಜನಿಕರು ಪಟ್ಟಣದ ಅನೇಕ ಕಡೆಗಗಳಲ್ಲಿ ನೂರಕ್ಕೂ ಹೆಚ್ಚು ಪುರಸಭೆ ಜಾಗಗಳಲ್ಲಿ ಮನೆ, ಮಳಿಗೆ, ಗೂಡಂಗಡಿ, ಇತ್ಯಾದಿಗಳನ್ನು ನಿರ್ಮಿಸಿಕೊಂಡಿದ್ದಾರೆ. ಕೆಲವು ಕಡೆಗಳಲ್ಲಂತೂ ಪುರಸಭೆ ನಿರ್ಮಿತ ಕಟ್ಟಡಗಳಿವೆ. ಅವುಗಳಿಗೆ ಪುರಸಭೆ ಬಾಡಿಗೆ ಆಕರಣೆ ಮಾಡುತ್ತಿಲ್ಲ. ಇಂತಹ ಜಾಗಗಳ ಮೇಲೆ ವ್ಯಾಪಾರ ವಹಿವಾಟು ಮಾಡುವವರಿಂದ ಪುರಸಭೆ ಬಾಡಿಗೆ ಆಕರಣೆ ಮಾಡಿದರೆ ತಿಂಗಳಿಗೆ ಸುಮಾರು ₹10 ಲಕ್ಷ ಬಾಡಿಗೆ ಬರುತ್ತದೆ. ಪುರಸಭೆ ಇಂತವರಿಂದ ಕಟ್ಟುನಿಟ್ಟಾಗಿ ಅಕರಣೆ ಮಾಡಬೇಕು ಎಂದು ಆಗ್ರಹಿಸಿದರು.ಪಿಎಸೈ ಸಿದ್ದಣ್ಣ ಯಡಹಳ್ಳಿ ಮಾತನಾಡಿ, ಅತಿಕ್ರಮಣದಿಂದ ಸಾರ್ವಜನಿಕರ ಸಂಚಾರಕ್ಕೆ ಸಾಕಷ್ಟು ಅನಾನುಕೂಲವಾಗುತ್ತಿರುವ ಬಗ್ಗೆ ದೂರುಗಳು ಬಂದಿವೆ. ಸ್ವತಃ ವ್ಯಾಪಾರಿಗಳು ತೆರವು ಮಾಡಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ವ್ಯಾಪಾರಸ್ಥರಿಗೆ ಎಚ್ಚರಿಸಿದರು.
ಬಿಜೆಪಿ ಮುಖಂಡ ಕಮಲಕಿಶೋರ ಮಾಲಪಾಣಿ ಮಾತನಾಡಿ, ಬೀದಿಬದಿ ವ್ಯಾಪಾರಿಗಳಿಗೆ ಪರ್ಯಾಯ ಸ್ಥಳ ನೀಡಿ ರಸ್ತೆ ಅತಿಕ್ರಮಣ ಸ್ಥಳ ತೆರವುಗೊಳಿಸಲು ಪುರಸಭೆಗೆ ವಿನಂತಿಸಿಕೊಂಡರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ ಬರಗುಂಡಿ ಮಾತನಾಡಿ, ಪುರಸಭೆ ಮಳಿಗೆಗಳನ್ನು ಲೀಜ್ ಪಡೆದು ಮತ್ತೆ ಅವುಗಳನ್ನು ಇತರರಿಗೆ ಸಬ್ಲೀಜ್ ನೀಡಿ ಎರಡುಪಟ್ಟು ಹಣ ವಸೂಲಿ ಮಾಡುತ್ತಿರುವ ವ್ಯಾಪಾರಿಗಳ ಲೀಜ್ ರದ್ದು ಮಾಡಬೇಕು ಎಂದು ಆಗ್ರಹಿಸಿದರು.
ತಹಸೀಲ್ದಾರ್ ಎಸ್.ಎಫ್.ಬೊಮ್ಮಣ್ಣವರ ಅಧ್ಯಕ್ಷತೆ ವಹಿಸಿದ್ದರು.ಸಭೆಯಲ್ಲಿ ಬೀದಿ ಬದಿ ವ್ಯಾಪಾರಿಗಳು ತಮ್ಮ ಅನಾನುಕೂಲ, ತೊಂದರೆ ಹಾಗೂ ಸಲಹೆಗಳನ್ನು ನೀಡಿದರು. ಪುರಸಭೆ ನಾಮ ನಿರ್ದೇಶನ ಸದಸ್ಯರು, ಸಿದ್ದು ಅರಕಾಲಚಿಟ್ಟಿ, ಶ್ರೀಕಾಂತ ಭಾವಿ, ಮಧುಸೂಧನ ರಾಂದಡ, ಪುರಸಭೆ ಮಾಜಿ ಅಧ್ಯಕ್ಷ ವಸಂತ ದೊಂಗಡೆ, ಭಾಗ್ಯಾ ಉದ್ನೂರ, ಸಂಗಪ್ಪ ಚಟ್ಟೇರ, ಬೀದಿ ಬದಿ ವ್ಯಾಪಾರಿಗಳ ಪ್ರಮುಖರು, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಮುಖಂಡರು ಭಾಗವಹಿಸಿದ್ದರು.