ಕನ್ನಡಪ್ರಭ ವಾರ್ತೆ ಕೊರಟಗೆರೆ ವಿಶ್ವಸಂಸ್ಥೆಯ ೧೯೩ ದೇಶದಲ್ಲಿ ೨೧ರಂದು ಯೋಗ ದಿನಾಚರಣೆ ಆಚರಣೆ ಮಾಡುವುದು ನಮ್ಮ ಭಾರತ ದೇಶಕ್ಕೆ ಹೆಮ್ಮೆ ಎಂದು ರಾಘವೇಂದ್ರ ಶಾಲೆಯ ಆಡಳಿತ ಅಧಿಕಾರಿ ರುದ್ರೇಶ್.ಕೆ.ಎನ್ ತಿಳಿಸಿದರು.
ಪಟ್ಟಣದ ರಾಘವೇಂದ್ರ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ಏರ್ಪಡಿಸಲಾಗಿದ್ದ ವಿಶ್ವಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಯೋಗವು ಕೇವಲ ವ್ಯಾಯಾಮವಲ್ಲ ಅದು ಆರೋಗ್ಯಕರ ಮತ್ತು ಸಮತೋಲಿತ ಜೀವನದ ಮಾರ್ಗ. ಒತ್ತಡದ ಜೀವನ ಶೈಲಿಯಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಅತ್ಯಂತ ಸಹಾಯಕಾರಿ ಆಗಿದೆ ಎಂದು ಹೇಳಿದರು.ಕೊರಟಗೆರೆ ಯೋಗ ಶಿಕ್ಷಕ ಯಶಸ್ ರಾಜ್ ಮಾತನಾಡಿ, ಭಾರತ ದೇಶದ ಕಲ್ಕತ್ತಾದಲ್ಲಿ ವಿಶ್ವ ಯೋಗ ದಿನಾಚರಣೆ ನಡೆಯಲಿದೆ. ರಾಜಕೀಯ ನಾಯಕರು, ಚಿತ್ರ ನಟರು ಸೇರಿದಂತೆ ಸಾವಿರಾರು ಜನ ನಾಯಕರು ಭಾಗವಹಿಸಲಿದ್ದಾರೆ. ಆರೋಗ್ಯಕರ ವಯಸ್ಸಿಗೆ ಯೋಗ ಎಂಬ ಧ್ಯೇಯದಡಿ ವಿಶ್ವಯೋಗ ದಿನಾಚರಣೆ ನಡೆಯಲಿದ್ದು ಪ್ರಧಾನಿ ನರೇಂದ್ರ ಮೋದಿ ಇದರ ನೇತೃತ್ವ ವಹಿಸಲಿದ್ದಾರೆ ಎಂದರು.
ಕಮಲದ ಹೂವು ಚಿತ್ರಿಕರಣದ ರೂಪದಲ್ಲಿ ರಾಘವೇಂದ್ರ ಇಂಟರ್ ನ್ಯಾಷನಲ್ ಸ್ಕೂಲ್‌ನ ೫೦೦ಜನ ವಿದ್ಯಾರ್ಥಿಗಳಿಂದ ಯೋಗ ಶಿಕ್ಷಕ ಯಶಸ್‌ರಾಜ್ ವಿಶ್ವಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಸೂರ್ಯ ನಮಸ್ಕಾರ, ವಜ್ರಸಾನ, ಪದ್ಮಾಸನ, ಪವನಮುಕ್ತಾಸನ, ಅರ್ಧ ಚಕ್ರಸಾನ ಸೇರಿದಂತೆ ವಿವಿಧ ಯೋಗ ತರಬೇತಿಯನ್ನು ವಿಶೇಷವಾಗಿ ನೀಡಿದರು.ಕಾರ್ಯಕ್ರಮದಲ್ಲಿ ರಾಘವೇಂದ್ರ ಆಡಳಿತ ಮಂಡಳಿ ಸದಸ್ಯೆ ಕಾವ್ಯಶ್ರೀ.ಡಿ, ಪ್ರಾಂಶುಪಾಲ ಜಿನ್ನಿ.ಆರ್.ಸಿ, ಉಪಪ್ರಾಂಶುಪಾಲ ಶಮೀನಖಾನಂ, ಶೈಕ್ಷಣಿಕ ಸಂಯೋಜಕಿ ಸಿಂಧುಶ್ರೀ.ಟಿ.ಕೆ, ದೈಹಿಕ ಶಿಕ್ಷಕ ವೆಂಕಟೇಶ್, ಶಾಲೆಯ ಶಿಕ್ಷಕರು ಮತ್ತು ಸಿಬ್ಬಂಧಿವರ್ಗ ಹಾಜರಿದ್ದರು.