ಸಾರಾಂಶ
ಪ್ರೇಮ ಪ್ರಕರಣ ಹಿನ್ನೆಲೆಯಲ್ಲಿ ತನ್ನ ಪ್ರಿಯತಮೆಯ ಸ್ನೇಹಿತನನ್ನು ಚಾಕುವಿನಿಂದ ಇರಿದು ಹತ್ಯೆಗೈದಿದ್ದ ಯುವಕನೊಬ್ಬನನ್ನು ತಿಲಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಪ್ರೇಮ ಪ್ರಕರಣ ಹಿನ್ನೆಲೆಯಲ್ಲಿ ತನ್ನ ಪ್ರಿಯತಮೆಯ ಸ್ನೇಹಿತನನ್ನು ಚಾಕುವಿನಿಂದ ಇರಿದು ಹತ್ಯೆಗೈದಿದ್ದ ಯುವಕನೊಬ್ಬನನ್ನು ತಿಲಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ತಿಲಕನಗರದ ಸಮೀಪದ ನಿವಾಸಿ ಕಿರಣ್ (20) ಹತ್ಯೆಗೀಡಾದ ದುರ್ದೈವಿ. ಈ ಹತ್ಯೆ ಸಂಬಂಧ ಮೃತನ ಪ್ರಿಯತಮೆಯ ಮಾಜಿ ಪ್ರಿಯಕರ ಜೀವನ್ ಬಂಧನವಾಗಿದೆ. ಜಯನಗರದ 3ನೇ ಹಂತದಲ್ಲಿ ಬುಧವಾರ ರಾತ್ರಿ ಕಿರಣ್ ಎದೆಗೆ ಚಾಕುವಿನಿಂದ ಇರಿದು ಆರೋಪಿ ಹತ್ಯೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇ-ಕಾಮರ್ಸ್ ಕಂಪನಿಯಲ್ಲಿ ಡಿಲವರಿ ಬಾಯ್ ಆಗಿ ಕಿರಣ್ ಕೆಲಸ ಮಾಡುತ್ತಿದ್ದು, ತನ್ನ ಕುಟುಂಬದ ಜತೆ ಆತ ನೆಲೆಸಿದ್ದ. ಅದೇ ಏರಿಯಾದ ಯುವತಿ ಜತೆ ಆತನಿಗೆ ಪ್ರೇಮವಾಗಿತ್ತು. ಈ ಮೊದಲು ಜೀವನ್ ಜತೆ ಆಕೆ ಪ್ರೀತಿಯಲ್ಲಿದ್ದಳು. ಆದರೆ ವೈಯಕ್ತಿಕ ಕಾರಣಕ್ಕೆ ಬೇಸರಗೊಂಡ ಆಕೆ, ಜೀವನ್‌ನಿಂದ ದೂರವಾಗಿದ್ದಳು. ಈ ಪ್ರೇಮ ವಿಚಾರ ತಿಳಿದು ಕೆರಳಿದ ಜೀವನ್, ತನ್ನ ಹುಡುಗಿ ಸ್ನೇಹ ಕಡಿದುಕೊಳ್ಳುವಂತೆ ಕಿರಣ್‌ಗೆ ತಾಕೀತು ಮಾಡಿದ್ದ. ಈ ಬೆದರಿಕೆ ಬಳಿಕವು ಪ್ರೇಮ ಮುಂದುವರೆದಿತ್ತು. ಇದರಿಂದ ಕೆರಳಿದ ಆರೋಪಿ, ಜಯನಗರದ 3ನೇ ಹಂತದಲ್ಲಿ ಕಿರಣ್ ಮೇಲೆ ಬುಧವಾರ ರಾತ್ರಿ ಗಲಾಟೆ ಮಾಡಿದ್ದಾನೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಕಿರಣ್ ಎದೆಗೆ ಆತ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.