ರಂಗನತಿಟ್ಟು ಪಕ್ಷಿಧಾಮ ವಿಶ್ವ ಮಟ್ಟದಲ್ಲಿ ಬೆಳೆದಿದೆ. ಮೈಸೂರು ಭಾಗದ ಸ್ಥಳವನ್ನು ಇನ್ನಷ್ಟು ಅಭಿವೃದ್ಧಿಗೆ ನನ್ನ ಕೈಲಾದ ಮಟ್ಟದಲ್ಲಿ ಸಹಕಾರ ನೀಡುತ್ತೇನೆ. ಬರುವ ಪ್ರವಾಸಿಗರಿಗೆ ಯಾವುದೇ ಸಮಸ್ಯೆಗಳು ಆಗದಂತೆ ಮೂಲ ಸೌಕರ್ಯ ನೀಡಬೇಕು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಪ್ರತಿಯೊಬ್ಬರು ಪ್ರಾಣಿ-ಪಕ್ಷಿಗಳನ್ನು ಪ್ರೀತಿಸಿ ಅವುಗಳ ರಕ್ಷಣೆ ಮಾಡಬೇಕು ಎಂದು ಶಾಸಕ ರಮೇಶ್‌ ಬಂಡಿಸಿದ್ದೇಗೌಡ ಹೇಳಿದರು.

ತಾಲೂಕಿನ ರಂಗನತಿಟ್ಟು ಪಕ್ಷಿಧಾಮದಲ್ಲಿ ಮೈಸೂರು ವನ್ಯಜೀವಿ ವಿಭಾಗದಿಂದ ಆಯೋಜಿಸಿದ್ದ ವಿಶ್ವ ಜೌಗು ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿ, ರಂಗನತಿಟ್ಟು ಪಕ್ಷಿಧಾಮ ವಿಶ್ವ ಮಟ್ಟದಲ್ಲಿ ಬೆಳೆದಿದೆ. ಮೈಸೂರು ಭಾಗದ ಸ್ಥಳವನ್ನು ಇನ್ನಷ್ಟು ಅಭಿವೃದ್ಧಿಗೆ ನನ್ನ ಕೈಲಾದ ಮಟ್ಟದಲ್ಲಿ ಸಹಕಾರ ನೀಡುತ್ತೇನೆ. ಬರುವ ಪ್ರವಾಸಿಗರಿಗೆ ಯಾವುದೇ ಸಮಸ್ಯೆಗಳು ಆಗದಂತೆ ಮೂಲ ಸೌಕರ್ಯ ನೀಡಬೇಕು ಎಂದು ಆಗ್ರಹಿಸಿದರು.

ವನ್ಯ ಜೀವಿ ಹಾಗೂ ಪಕ್ಷಿಗಳ ರಕ್ಷಣೆ ಮಾಡಲು ಈ ಪಕ್ಷಿಧಾಮ ಹಾಗೂ ಕಾಡಿನ ಪ್ರಕೃತಿಗೆ ಹೊಂದಿಕೊಳ್ಳುವಂತಹ ಪಕ್ಷಿಧಾಮಗಳು ಅಗತ್ಯವಿದೆ. ಶಾಲಾ ಕಾಲೇಜು ಮಕ್ಕಳಿಗೆ ಪ್ರಕೃತಿ ಹಾಗೂ ವನ್ಯ ಜೀವಿಗಳ ಕುರಿತು ಜಾಗೃತಿ ಕಾರ್ಯಗಳನ್ನು ಸರ್ಕಾರದಿಂದ ನಡೆಸಿ ಅಧಿಕಾರಿಗಳು ಜಾಗೃತಗೊಳಿಸಲು ಪ್ರಾಣಿ ಪಕ್ಷಿಗಳ ಕುರಿತ ಬೀದಿ ನಾಟಕಗಳ ಜಾಗೃತಿ ಪ್ರದರ್ಶನ ಮಾಡಲು ಮುಂದಾಗಬೇಕು ಎಂದರು.

ಮೈಸೂರು ವನ್ಯಜೀವಿ ವಿಭಾಗದ ಡಿಎಫ್‌ಒ ಪ್ರಭುಗೌಡ, ಮೈಸೂರು ವನ್ಯಜೀವಿ ವಿಭಾಗದ ಡಿಎಫ್‌ಒ ಶಶಿಕಲಾ, ಆರ್‌ಎಫ್‌ಒ ರವಿ , ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಚಂದ್ರುಶೇಖರ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕುರಿತು ಶಾಲಾ ಮಕ್ಕಳಿಗೆ ಅರಿವು ಮೂಡಿಸಲಾಯಿತು.

ಭುವನ ವಿಶ್ವಕರ್ಮ ಸಮಾಜದ ಕ್ಯಾಲೆಂಡರ್ ಬಿಡುಗಡೆ

ಮಂಡ್ಯ: ಜಿಲ್ಲಾ ಭುವನ ವಿಶ್ವಕರ್ಮ ಸಮಾಜದ ನೂತನ ಕ್ಯಾಲೆಂಡರ್ ಅನ್ನು ಸಂಘದ ಪದಾಧಿಕಾರಿಗಳು ಮಂಗಳವಾರ ಬಿಡುಗಡೆ ಮಾಡಿದರು.

ನಗರದ ಗಾಂಧಿಭವನದ ಹೊರ ಆವರಣದಲ್ಲಿ ಅಧ್ಯಕ್ಷರು, ಗೌರವಾಧ್ಯಕ್ಷರು ಹಾಗೂ ನೂತನ ಪದಾಧಿಕಾರಿಗಳು ಕ್ಯಾಲೆಂಡರ್ ಬಿಡುಗಡೆ ಮಾಡಿದರು. ಇದೇ ವೇಳೆ ನೂತನ ಸಂಘದ ಕಾರ್ಯ ಚಟುವಟಿಕೆ, ಸಂಘಟನೆಗೆ ಒತ್ತು, ತಾಲೂಕುವಾರು ಸಂಘದ ಚಟುವಟಿಕೆ ವಿಸ್ತರಣೆ ಕುರಿತು ಚರ್ಚೆ ನಡೆಸಿದರು.

ಸಭೆಯಲ್ಲಿ ಭುವನ ವಿಶ್ವಕರ್ಮ ಸಮಾಜ ಸಂಘದ ಗೌರವಾಧ್ಯಕ್ಷ ಬಿ.ವಿ.ಸೋಮಣ್ಣ, ಅಧ್ಯಕ್ಷ ಎನ್.ಬಸವರಾಜು, ಕಾರ್ಯದರ್ಶಿ ಕಟ್ಟೆ ಕೃಷ್ಣಸ್ವಾಮಿ, ಖಜಾಂಚಿ ಕೆ.ಸಿ.ಶ್ರೀನಿವಾಸ್, ಸಂಘಟನಾ ಕಾರ್ಯದರ್ಶಿ ಗೋವಿಂದರಾಜು ಸೇರಿದಂತೆ ಪದಾಧಿಕಾರಿಗಳು ಹಾಗೂ ಇತರರು ಇದ್ದರು.