ಸಾರಾಂಶ
ಲವ್ ಜಿಹಾದ್ ವಿರುದ್ಧ ಶ್ರೀರಾಮ ಸೇನೆ ಸಂಘಟನೆ ವತಿಯಿಂದ ಹೆಲ್ಪ್‌ಲೈನ್ ಮೂಲಕ ನೆರವು ನೀಡಿ, ರಾಜ್ಯಾದ್ಯಂತ 80 ಹುಡುಗಿಯರ ಮನ ಪರಿವರ್ತನೆ ಮಾಡಲಾಗಿದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು.
ರಾಣಿಬೆನ್ನೂರು: ಲವ್ ಜಿಹಾದ್ ವಿರುದ್ಧ ಶ್ರೀರಾಮ ಸೇನೆ ಸಂಘಟನೆ ವತಿಯಿಂದ ಹೆಲ್ಪ್‌ಲೈನ್ ಮೂಲಕ ನೆರವು ನೀಡಿ, ರಾಜ್ಯಾದ್ಯಂತ 80 ಹುಡುಗಿಯರ ಮನ ಪರಿವರ್ತನೆ ಮಾಡಲಾಗಿದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾವೇರಿ ಜಿಲ್ಲೆ ರಾಜ್ಯದಲ್ಲಿಯೇ ಲವ್ ಜಿಹಾದ್ ಘಟನೆಗಳಲ್ಲಿ ಮೊದಲನೆ ಸ್ಥಾನದಲ್ಲಿದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಶ್ರೀರಾಮ ಸೇನೆ ವತಿಯಿಂದ ಜಿಲ್ಲೆಯ ವಿದ್ಯಾರ್ಥಿನಿಯರಿಗೆ ತ್ರಿಶೂಲ ನೀಡುವ ಮೂಲಕ ಜಾಗೃತಿ ದೀಕ್ಷೆ ಮಾಡಲಾಗುವುದು ಎಂದರು.ಆರು ತಿಂಗಳ ಹಿಂದೆ ಹುಬ್ಬಳ್ಳಿಯಲ್ಲಿ ಹಾಡುಹಗಲೇ ಕಾಲೇಜು ಆವರಣದಲ್ಲಿ ನಡೆದ ನೇಹಾ ಹತ್ಯೆ ಹಾಗೂ ಅಂಜಲಿ ಹತ್ಯೆ ಪ್ರಕರಣಗಳ ಹಿನ್ನೆಲೆಯಲ್ಲಿ ಲವ್ ಜಿಹಾದ್ ತಡೆಗಟ್ಟಲು ಶ್ರೀರಾಮ ಸೇನೆ ಸಂಘಟನೆ ವತಿಯಿಂದ ಹೆಲ್ಪ್ ಲೈನ್ ತೆರೆಯಲಾಯಿತು. ರಾಜ್ಯದ ಹುಬ್ಬಳ್ಳಿ, ಮಂಗಳೂರು, ಬೆಂಗಳೂರು, ಮೈಸೂರು, ಕಲ್ಬುರ್ಗಿಗಳಲ್ಲಿ ಸಹಾಯವಾಣಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಲವ್ ಜಿಹಾದ್‌ಗೆ ಸಿಲುಕಿರುವ ಯುವತಿಯರ ಪೋಷಕರು 9090443444ಗೆ ಕರೆ ಮಾಡಿ ತಮ್ಮ ಸಮಸ್ಯೆ ತಿಳಿಸಿದರೆ ಅವರಿಗೆ ನೆರವು ನೀಡಲಾಗುವುದು. ಇಲ್ಲಿ ಒಬ್ಬ ವೈದ್ಯರು, ವಕೀಲ, ಇಬ್ಬರು ಆಪ್ತ ಸಮಾಲೋಚಕರು ಇರುತ್ತಾರೆ ಎಂದು ಹೇಳಿದರು.
ಪ್ರಕಾಶ ಮಣೆಗಾರ, ವೆಂಕಟೇಶ ಏಕಬೋಟೆ, ರಾಯಣ್ಣ ಮಾಕನೂರ, ಗದಿಗೆಪ್ಪ, ದೇವರಾಜ, ರಮೇಶ ಮಾಕನೂರ ಸುದ್ದಿಗೋಷ್ಠಿಯಲ್ಲಿದ್ದರು.