ಶಿಕ್ಷಣದ ಜತೆಯಲ್ಲಿ ಒಬ್ಬ ರೋಗಿಯ ಆರೈಕೆ ಮಾಡುವುದು ಹೇಗೆ ಎಂಬುದನ್ನು ನಾವುಗಳು ಅರಿತುಕೊಂಡರೆ ಚಿಕಿತ್ಸೆ ನಂತರವೂ ಮನೆಯಲ್ಲಿ ರೋಗಿಗಳನ್ನು ಸರಿಯಾಗಿ ಆರೈಕೆ ಮಾಡಬಹುದು.

ಹುಬ್ಬಳ್ಳಿ:

ಆಸ್ಪತ್ರೆ ಅಥವಾ ಮನೆಯಲ್ಲಿರುವ ರೋಗಿಗಳಿಗೆ ಕಾಯಿಲೆಯ ಚಿಕಿತ್ಸೆಗಿಂತ ಅವರಿಗೆ ಪ್ರೀತಿ, ಕಾಳಜಿ ಮುಖ್ಯ. ಹಾಗಾಗಿ ಪ್ರತಿಯೊಬ್ಬರೂ ರೋಗಿಗಳನ್ನು ಪ್ರೀತಿ, ಸ್ನೇಹದಿಂದ ಆರೈಕೆ ಮಾಡುವಂತೆ ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಸಲಹೆ ನೀಡಿದರು.

ಅವರು ಬುಧವಾರ ಇಲ್ಲಿಯ ನವನಗರ ಕ್ಯಾನ್ಸರ್‌ ಆಸ್ಪತ್ರೆ ಆವರಣದಲ್ಲಿರುವ ರಮಿಲಾ ಹಾಸ್ಪೆಸ್​ ಕ್ಯಾನ್ಸರ್​ ಆರೈಕೆ ಮತ್ತು ಉಪಶಮನ ಕೇಂದ್ರದಲ್ಲಿ ಮಜೇಥಿಯಾ ಫೌಂಡೇಶನ್​, ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಸ್ವಾಮಿ ವಿವೇಕಾನಂದ ಯೂಥ್​ ಮೂವ್​ಮೆಂಟ್​ ವತಿಯಿಂದ ವಿಶ್ವ ಕ್ಯಾನ್ಸರ್​ ದಿನಾಚರಣೆ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಪ್ಯಾಲಿಯೇಟಿವ್​ ಕೇರ್​ ಮತ್ತು ಜೀವನ ಕೌಶಲಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಇಂದಿನ ಶಿಕ್ಷಣದ ಜತೆಯಲ್ಲಿ ಒಬ್ಬ ರೋಗಿಯ ಆರೈಕೆ ಮಾಡುವುದು ಹೇಗೆ ಎಂಬುದನ್ನು ನಾವುಗಳು ಅರಿತುಕೊಂಡರೆ ಚಿಕಿತ್ಸೆ ನಂತರವೂ ಮನೆಯಲ್ಲಿ ರೋಗಿಗಳನ್ನು ಸರಿಯಾಗಿ ಆರೈಕೆ ಮಾಡಬಹುದು. ಈ ಕುರಿತು ಪ್ರತಿಯೊಬ್ಬರೂ ಅರಿತುಕೊಳ್ಳುವಂತೆ ಸಲಹೆ ನೀಡಿದರು.

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸವಿತಾ ಕಾಳೆ ಮಾತನಾಡಿ, ಪ್ರತಿ ಮನೆಯಲ್ಲೂ ಅರೈಕೆದಾರರು ಇರಬೇಕು ಎನ್ನುವ ಉದ್ದೇಶದಿಂದ ಮಜೇಥಿಯಾ ಫೌಂಡೇಶನ್​ ವಿಶೇಷ ಕಾರ್ಯಕ್ರಮ ಆಯೋಜಿಸುವ ಮೂಲಕ ತರಬೇತಿ ನೀಡುತ್ತಿರುವುದು ಅಭಿನಂದನಾರ್ಹ. ಇತ್ತ ತರಬೇತಿ ಪಡೆಯುವವರಿಗೆ ಮನೆಯಲ್ಲಿನ ಹಿರಿಯ ನಾಗರಿಕರನ್ನು ಆರೈಕೆ ಮಾಡಲು ಸಹಕಾರಿಯಾಗಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಜೇಥಿಯಾ ಫೌಂಡೇಶನ್​ ಚೇರ್‌ಮನ್‌​ ಜಿತೇಂದ್ರ ಮಜೇಥಿಯಾ, ಸಮಾಜಕ್ಕೆ ಏನನ್ನಾದರೂ ಕೊಡುಗೆ ನೀಡಬೇಕು ಎಂಬ ಉದ್ದೇಶದಿಂದ ಈ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ. ಮನೆಯಲ್ಲಿರುವ ಹಿರಿಯರು, ವೃದ್ಧರು, ರೋಗಿಗಳಿಗೆ ಹೇಗೆ ಕಾಳಜಿಯಿಂದ ನೋಡಿಕೊಳ್ಳಬೇಕು ಎಂಬುದನ್ನು ಇಲ್ಲಿ ತಿಳಿಸಿ ಕೊಡಲಾಗುತ್ತಿದೆ ಎಂದು ಹೇಳಿದರು.

ಡಾ. ವಿ.ಬಿ. ನಿಟಾಲಿ ಪ್ರಾಸ್ತಾವಿಕ ಮಾತನಾಡಿದರು. ಆರೋಗ್ಯ ತಾಂತ್ರಿಕ ನಿರ್ದೇಶಕಿ ಡಾ. ಗೌತಮಿ, ಮೋಹನಕುಮಾರ, ಡಾ. ಶ್ರೀವಾಣಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಡಾ. ಸುನೀಲಕುಮಾರ ನಿರೂಪಿಸಿದರು. ಗೌರವ ಕಾರ್ಯದರ್ಶಿ ಅಮರೇಶ ಹಿಪ್ಪರಗಿ ವಂದಿಸಿದರು.